ಅಕ್ಷತಾ
ಕನಸು ಹೊತ್ತ ಮಕ್ಕಳಿಗೆ ಮೈಸೂರಿನ ಒಡನಾಡಿಯೆಂದರೆ ಅಮ್ಮನ ಬೆಚ್ಚನೆಯ ಮಡಿಲು. ಇಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕತೆ, ಭಿನ್ನ ಜೀವನ ಪ್ರೀತಿ. ಎಲ್ಲವೂ ಒಟ್ಟಾಗಿ ಹರಡಿಕೊಂಡಿರುವ ಮರ. ನೆರಳಿನೊಳಗೆ ಕಟ್ಟಿಕೊಳ್ಳುವ ಬದುಕು ನಿರಾಳ. ಕಾಣುವ ಕನಸುಗಳಿಗೆ ಸೂರಾಗಿ, ನಡೆಯುವ ಹೆಜ್ಜೆಗೆ ಆಸರೆಯಾಗಿ ತಲೆಯೆತ್ತಿದ ಇಂತಹ ಒಡನಾಡಿಯಿಂದ ಪರಿಚಯವಾದದ್ದು ಬೆಕ್ಕಿನ ಕಣ್ಣುಗಳಲ್ಲಿ ನಾಳೆಗಳ ನಿರೀಕ್ಷೆಯನ್ನಿಟ್ಟುಕೊಂಡ ಒಂದು ಹದಿಹರೆಯದ ಮನಸ್ಸು.
“ಸಿನಿಮಾ ರಂಗಕ್ಕೆ ಬರಬೇಕು, ಮುಂದೊಂದು ದಿನ ತಾನೂ ಹೀರೋಯಿನ್ ಆಗಬೇಕು” ಎಂಬ ಮೈಸೂರಿನ ಅಂಚಿನಲ್ಲಿರುವ ಏಕಲವ್ಯನಗರದ ಹುಡುಗಿಯ ಆಸೆಯ ಜಗತ್ತಿನ ಪರಿಕಲ್ಪನೆಯಂತೂ ಬಹಳ ಚೆಂದ. ನಾಟಕ ಕಂಪೆನಿಯಿಂದ ಸಿಕ್ಕಿದ ಅಲ್ಪಸ್ವಲ್ಪ ಸಾಮಾನುಗಳು, ಹಿಟ್ಟಿನ ಚೀಲ, ನಾಟಕದ ರಂಗಸಜ್ಜಿಕೆ ಇತ್ಯಾದಿಗಳನ್ನು ಹೇರಿಕೊಂಡು ಬೈಕಿನ ಹಿಂದೆ ಹಳೆಯ ಮೆಗಾಫೋನಿನಲ್ಲಿ ಎದ್ದು ಕಾಣುವಂತೆ ಕೆಂಪುಬಣ್ಣದಲ್ಲಿ ‘ಬಂಗಾರಪ್ಪ ನಾಟಕ ಕಂಪೆನಿ. ಒಂದೇ ಶೋ. ರಾತ್ರಿ ಎಂಟು ಗಂಟೆಗೆ’ ಎಂದು ಬರೆದುಕೊಂಡು ಅಪ್ಪ ಬಂಗಾರಪ್ಪ ಬೈಕಿನಲ್ಲಿ ಊರೂರು ತಿರುಗುತ್ತಿದ್ದಾಗ ಎದುರು ಕುಳಿತಿದ್ದ ಪುಟ್ಟಪೋರಿಗೆ ಅಂದು ತನ್ನಪ್ಪನೇ ಹಸಿವು ನೀಗಿಸುವ ಬದುಕಿನ ನಾಯಕನಾಗಿದ್ದ.
ಹೀಗೆ ಸಂಸಾರವನ್ನೇ ತಂಡವನ್ನಾಗಿ ಕಟ್ಟಿಕೊಂಡು ಊರೂರು ತಿರುಗುವವರ ನಾಟಕದ ವೃತ್ತಿ ಬದುಕು ಅಷ್ಟು ಸುಲಭವೇನಲ್ಲ. ಹೊಸ ಜಾಗಕ್ಕೆ ಹೋಗಿ, ಅಲ್ಲಿ ಕಂಡಕಂಡವರ ಕಾಡಿಬೇಡಿ ಪ್ರದರ್ಶನಕ್ಕೆ ಒಂದು ಸ್ಥಳಾವಕಾಶ ಕೇಳಿ, ಕಷ್ಟಪಟ್ಟು ಜನ ಸೇರಿಸಿದರೆ, ಕಲೆಯನ್ನು ಮೆಚ್ಚಿ ಕಾಸು ಕೊಡುವವರು ಬೆರಳೆಣಿಕೆ ಮಂದಿ. ಸಿಕ್ಕ ಮುಕ್ಕಾಲು ಮೂರು ಕಾಸಿನಲ್ಲಿ ಹೊಟ್ಟೆಯ ಹಸಿವು ನೀಗಿಸಿಕೊಳ್ಳುವುದೇ ಕಷ್ಟ, ಹಾಗಿದ್ದಾಗ ಯಾರಾದರೊಬ್ಬರು ಅನಾರೋಗ್ಯದಿಂದ ಕಂಗೆಟ್ಟರೆ ತಂಡದ ಅಂದಿನ ಹೊಟ್ಟೆಪಾಡು ತಣ್ಣೀರು ಬಟ್ಟೆ!
ಸಂಸಾರದೊಡನೆ ಕೇರಿ ಕೇರಿ ಸುತ್ತಿದ ಅಪ್ಪ ಬಂಗಾರಪ್ಪನೂ ಒಂದ್ಕಾಲದಲ್ಲಿ ನಾಯಕನಾಗುವ ಕನಸು ಕಂಡವನು. ಸಾರೇಕೊಪ್ಪದ ಮಾನ್ಯ ಬಂಗಾರಪ್ಪನವರು ಮುಖ್ಯಮಂತ್ರಿಯಾದ ದಿನವೇ ಸೊರಬದಲ್ಲಿ ಶ್ರೀ ಮಂಜುನಾಥೇಶ್ವರ ಡ್ರಾಮಾ ಕಂಪೆನಿಯಲ್ಲಿ ಹುಟ್ಟಿದ್ದರಿಂದ ಬಂಗಾರಪ್ಪನೆಂದು ಹೆಸರಿಟ್ಟರೆಂಬುದನ್ನು ಬಿಟ್ಟರೆ ಬದುಕು ಬಂಗಾರದ ಸಿರಿವಂತಿಕೆ ಕಂಡಿಲ್ಲ. ಆಗಿನ ಕಾಲದ ಕನ್ನಡ ಸಿನಿಮಾಗಳ ನಾಯಕರ ಡೈಲಾಗುಗಳನ್ನು ಒಂದೇ ಟೇಕ್‌ನಲ್ಲಿ ಹೇಳಿ ಮುಗಿಸುತ್ತಿದ್ದ ರೀತಿಗೆ ಫಿದಾ ಆಗದವರಿಲ್ಲ ಎಂಬ ಅವಳ ಮಾತು ಅಪ್ಪನ ಹೀರೋಯಿಸಂ ಬಗ್ಗೆ ಅವಳಿಗಿದ್ದ ಹೆಮ್ಮೆಯನ್ನು ಪ್ರಕಟಿಸುತ್ತಿತ್ತು. ಸಂಸಾರವೇ ತಂಡವಾಗಿದ್ದರಿಂದ ಬಹುತೇಕ ಕಡೆಗಳಲ್ಲಿ ಅಪ್ಪ ಮಗಳು ಹೀರೋ ಹೀರೋಯಿನ್ ಆಗಿ ಡ್ಯಾನ್ಸ್ ಮಾಡಿದ್ದೂ ಇದೆ.
“ನಿಂಗೆ ಸಿನಿಮಾದಲ್ಲಿ ನಟಿಸುವ ಆಸೆ ಅಪ್ಪನಿಂದಲೇ ಬಂತೇ?” ಎಂದು ಕೇಳಿದರೆ ಹುಡುಗಿ ಇಲ್ಲವೆಂದು ತಲೆಯಾಡಿಸುತ್ತಾಳೆ. “ಅಪ್ಪನಿಗೆ ನಾನು ಓದಬೇಕೆಂಬ ಕನಸು. ಆದ್ರೆ ಎಲ್ರೂ ಅಪ್ಪನಲ್ಲಿ ‘ನಿನ್ನ ಮಗ್ಳು ಚೆನ್ನಾಗಿ ಡ್ಯಾನ್ಸ್ ಮಾಡ್ತಾಳೆ, ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಯಾಕೆ ಪ್ರಯತ್ನಿಸ್ಬಾರ್ದು?’ ಅಂತನ್ನೋದು ಕೇಳಿ ಆಸಕ್ತಿ ಹುಟ್ಟಿತು” ಎಂದು ನಕ್ಕಳು.
ಕೊರೊನಾ ಕಾಲದಲ್ಲಿ ಎಂಟನೆಯ ತರಗತಿ ಓದುತ್ತಿದ್ದ ಹುಡುಗಿಯ ಕುಟುಂಬ, ಮಹಾರಾಷ್ಟ್ರದ ಒಂದು ಹಳ್ಳಿಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್ ಸರಪಳಿಗೆ ಸಿಕ್ಕಿ ಅಲ್ಲೇ ಉಳಿಯುವಂತಾಯಿತು. ಆ ದಿನಗಳಲ್ಲಿ ತುತ್ತಿಗೂ ಪರದಾಟ ವಿದ್ದದ್ದು ಅಷ್ಟೇ ಅಲ್ಲ, ಓದಿಗೂ ಬ್ರೇಕ್ ಬಿತ್ತು. ನಂತರ ಶಾಲೆಯತ್ತ ಮುಖ ಮಾಡದೆ ಮೂರು ವರ್ಷಗಳ ಕಾಲ ಕುಟುಂಬ ದೊಡನೆ ಪ್ರದರ್ಶನವೆಂದು ರಾಜ್ಯದ ಮೂಲೆ ಮೂಲೆ ತಿರುಗಿದವಳನ್ನು ಪುನಃ ವಿದ್ಯೆಯತ್ತ ಹೊರಳುವಂತೆ ಮಾಡಿದ್ದು ಒಡನಾಡಿ ಸಂಸ್ಥೆ. ಒಡನಾಡಿಯ ಒಡನಾಟದಿಂದ ಮತ್ತೆ ಶಾಲೆ ಸೇರಿದ್ದಾಳೆ.
“ಅರ್ಧಕ್ಕೇ ನಿಂತ ಶಿಕ್ಷಣವನ್ನು ಮತ್ತೆ ಮುಂದುವರಿಸಲು ಕಷ್ಟವಾಯಿತೇ?” ಎಂದು ಕೇಳಿದರೆ ಇಲ್ಲವೆಂದವಳು, “ಡ್ಯಾನ್ಸ್ ಮಾತ್ರ ಆಗಾಗ ನೆನಪಾಗುತ್ತೆ, ಆವಾಗ ಕನ್ನಡಿಯೆ ದುರು ನಿಂತು ಅಪ್ಪು ಸಾರ್ ಸಿನಿಮಾದ ಡೈಲಾಗ್ ಹೇಳುತ್ತೇನೆ” ಎನ್ನುವವಳಿಗೆ ಸಿನಿಮಾ ರಂಗದಲ್ಲಿ ಸ್ಛೂರ್ತಿಯೆಂಬಂತಿರುವ ವ್ಯಕ್ತಿತ್ವ ಪುನೀತ್ ರಾಜ್‌ಕುಮಾರ್. ಪ್ರದರ್ಶನ ನೀಡುತ್ತಿದ್ದ ಕಾಲದಲ್ಲಿ ಅವರ ಬಹುತೇಕ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದೇನೆ, ‘ಗೊಂಬೆ ಹೇಳುತೈತೆ…’ ತನ್ನಿಷ್ಟದ ಹಾಡು ಎಂದು ಗುನುಗುನಿಸುತ್ತಾಳೆ.
ತಾನು ಮತ್ತೆ ಶಾಲೆಯ ಕಲಿಕೆಯತ್ತ ಮುಖ ಮಾಡಿದ್ದೇ ಬಣ್ಣದ ಬದುಕಿನಲ್ಲಿ ಹೀರೋಯಿನ್ ಆಗಿ ನೆಲೆ ಕಂಡುಕೊಳ್ಳಲು ಎಂಬ ಮೈಸೂರಿನ ಏಕಲವ್ಯ ನಗರದ ಶಿಳ್ಳೆಕ್ಯಾತರ ಬಂಗಾರಪ್ಪ-ದೀಪಾ ದಂಪತಿಯ ಮಗಳ ಮಾತು ನಿಜವಾಗಲಿ. ತನ್ನಪ್ಪನ ಯೌವ್ವನದ ‘ಹೀರೋ ಆಗಬೇಕು’ ಎಂಬ ಕನಸು ಮಗಳು ನಾಯಕಿಯಾಗುವುದರ ಮೂಲಕ ನನಸಾಗಿ ತಿರುಗಾಟದ ದುಡಿಮೆಗೊಂದು ವಿರಾಮ ಸಿಗಲಿ. ಶಿಳ್ಳೆಕ್ಯಾತರ ಹುಡುಗಿಯ ಕನಸಿನ ಖಾತೆಗೆ ಓದಿನ ಡೆಪಾಸಿಟ್ ಒಡನಾಡಿಯ ಮೂಲಕ ತುಂಬುತ್ತಿದೆ.
ಒಡನಾಡಿಯ ‘ಮಡಿಲು’ ಮತ್ತು ‘ಒಡಲು’ ನೂರಾರು ಕನಸುಗಳ ಎದೆಬಡಿತ. ಒಂದೊಂದು ಹೃದಯವೂ ವಿದ್ಯೆಯ ನಾಡಿಮಿಡಿತದೊಡನೆ ‘ನಾನೇ ರಾಜಕುಮಾರ’ ಎಂದು ಹಾಡುವ ಜೀವನ ಪ್ರೀತಿ. ಆಲಿಸುವ ಮನಸ್ಸು ನಮ್ಮದು ಮತ್ತು ನಿಮ್ಮದೂ!
“ಅರ್ಧಕ್ಕೇ ನಿಂತ ಓದನ್ನು ಮತ್ತೆ ಮುಂದುವರಿಸಲು ಕಷ್ಟವಾಯಿತೇ?” ಎಂದು ಕೇಳಿದರೆ ಇಲ್ಲವೆನ್ನುತ್ತಾಳೆ. “ಡ್ಯಾನ್ಸ್ ಮಾತ್ರ ಆಗಾಗ ನೆನಪಾಗುತ್ತೆ, ಆವಾಗ ಕನ್ನಡಿಯೆದುರು ನಿಂತು ಅಪ್ಪು ಸಾರ್ ಸಿನಿಮಾದ ಡೈಲಾಗ್ ಹೇಳುತ್ತೇನೆ” ಎಂದು ನಸು ನಗುತ್ತಾಳೆ”





