Mysore
31
few clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಕುಂತಿ ಬೆಟ್ಟ ಹತ್ತುತ್ತಾ ಒಂದಿಷ್ಟು ಪೌರಾಣಿಕ ಚಿಂತನೆಗಳು

mountain boy historical

ಗಟ್ಟಿಯಾಗಿ ಉಸಿರಾಡಿದರೆ ಉರುಳಬಹುದೇನೋ ಎಂದು ಭಯ ಹುಟ್ಟಿಸುವ ಹಾಗೆ ಕಣ್ಣು ಹಾಯಿಸಿದಲ್ಲೆಲ್ಲಾ ಒಂದರ ಮೇಲೊಂದು ಪೇರಿಸಿಟ್ಟಂತೆ ಕಾಣುವ ಬಂಡೆಗಳು. ಆ ಭೂತಾಕಾರದ ಬಂಡೆಗಳ ನಡುನಡುವೆ ದಾರಿ, ಆ ದಾರಿಯಲ್ಲಿ ಮೇಲೇರುತ್ತಾ ಇದ್ದಂತೆ ಕಳೆದುಹೋದ ಅನುಭವ. ಕಳೆದುಹೋದದ್ದೇ ಹೌದು.

ಓ ಎಲ್ಲಿ ಉಳಿದವರು? ಎಲ್ಲಿ ಹೆಜ್ಜೆ ಹೆಜ್ಜೆಗೆ ಆಲಸ್ಯವನ್ನು ಚೆಲ್ಲುತ್ತಾ ನಮ್ಮೊಂದಿಗೆ ಬೆಟ್ಟವನ್ನು ಏರತೊಡಗಿದ್ದ ಸಹಚಾರಣಿಗರು ಹಳೆಯ ಯಾವುದೋ ಕಾಲದಲ್ಲಿ ಪಾಂಡವರ ಅಡಗುದಾಣವಾಗಿರಬಹುದಾಗಿದ್ದ ಕುಂತಿಬೆಟ್ಟದ ವಿಶಾಲ ಸೆರಗಿನ ನಡುವೆಯೆಲ್ಲೋ ಕಳೆದುಹೋಗಿದ್ದರು. ಕಣ್ಣ ನಿಲುಕಿಗೆಲ್ಲೂ ಸಿಗದ ಹಾಗೆ ಅವರು ಅದೆಲ್ಲಿ ಮಾಯವಾದರು ಎನ್ನುವ ದಿಗಿಲು.

ಮೇಲಿನಿಂದ ಧುಮ್ಮಿಕ್ಕುವ ನೀರು ಕಡೆದಿಟ್ಟ ಅಸಂಖ್ಯ ಹೆದ್ದಾರಿಗಳಲ್ಲಿ ಒಂದನ್ನು ಆಯ್ದು ಮುಂದುವರಿಯುವ ಆಯ್ಕೆಯೊಂದೇ ನಮ್ಮ ಮುಂದಿದ್ದದ್ದು. ಮುಂದಡಿ ಇಟ್ಟಂತೆಲ್ಲಾ ಹೆದ್ದಾರಿಯೆಂಬ ನಮ್ಮ ತಪ್ಪು ಗ್ರಹಿಕೆಯನ್ನು ನಿವಾರಿಸಲೆಂದೇ ಗಾತ್ರದಲ್ಲಿ ಕುಗ್ಗುತ್ತಲೇ ಹೋದ ಮಾರ್ಗ ನಮ್ಮ ಭೀತಿಯನ್ನು ಇಮ್ಮಡಿಸಿತ್ತು.

ಹೊತ್ತು ಮೂಡುವುದಕ್ಕೂ ಮೊದಲು ಮೈಸೂರಿನಿಂದ ಹೊರಟು ಬಂದಿದ್ದ ನಾವು, ಎಲ್ಲರೂ ಜೊತೆಯಾದದ್ದೇ ಇಲ್ಲ. ಕೆಲವರು ಕಾರಿನಲ್ಲಿ, ಇನ್ನುಳಿದವರು ಬೈಕಿನಲ್ಲಿ ಚಾರಣಕ್ಕೆ ಮುನ್ನುಡಿಯಾಗಿ ಪಯಣಿಸಿದ್ದೆವು. ಮೈಸೂರಿನಿಂದ ಇಪ್ಪತ್ತೈದು ಕಿಲೋಮೀಟರ್ ದೂರವಿರುವ ಪಾಂಡವಪುರದ ಕುಂತಿ ಬೆಟ್ಟ ನಮ್ಮ ಈ ವಾರದ ನಡಿಗೆಯ ತಾಣ.

ಮೈಸೂರಿನ ಧರ್ಮರಾಜ್, ನಾಗರಾಜ್ ಮುಂತಾದವರ ನೇತೃತ್ವದಲ್ಲಿ ಕಳೆಗಟ್ಟುವ ನಮ್ಮ ವಾರಾಂತ್ಯದ ಟ್ರೆಕ್ಕಿಂಗಿನಲ್ಲಿ ಪ್ರತಿಬಾರಿಯೂ ಏನಾದರೊಂದು ವಿಶೇಷವಾದದ್ದು ಇದ್ದೇ ಇರುತ್ತದೆ. ಈ ಬಾರಿ ಹಿರಿಯ ಸಂಸ್ಕೃತಿ ಚಿಂತಕರಾದ ರಹಮತ್ ತರೀಕೆರೆ, ನಟರಾಜ್ ಬೂದಾಳ್ ನಮ್ಮನ್ನು ಕೂಡಿಕೊಂಡಿದ್ದರು.

ಜೊತೆಯಲ್ಲಿ ಹೆಜ್ಜೆ ಇಡುತ್ತಾ ಎಲ್ಲೋ ತಲುಪಿದ್ದ ನಾವು, ಈ ಅತಿಥಿಗಳ ಒಡನಾಟದಿಂದಲೂ ವಂಚಿತರಾಗಿದ್ದೆವು. ಅವರು ಹಿಂದೆ ಉಳಿದಿರಲು ಸಾಧ್ಯವಿಲ್ಲ, ಈಗಾಗಲೇ ತುದಿ ತಲುಪಿರಬೇಕು. ಎಲ್ಲರನ್ನೂ ಸೇರಿಕೊಳ್ಳಬೇಕು ಎನ್ನುವ ತೀವ್ರ ಹಪಾಹಪಿಯೇ, ದಾರಿ ಇಲ್ಲದಲ್ಲಿ ಅರಸಿ ಮುನ್ನುಗ್ಗುವಂತೆ ಮಾಡಿತ್ತು.

ಏದುಸಿರು ಬಿಡುತ್ತಾ ಕುಂತಿ ಬೆಟ್ಟದ ನೆತ್ತಿಯನ್ನು ತಲುಪಿದರೆ, ಮೊದಲು ಬಂದವರು ಪರ್ವತಾಗ್ರಕ್ಕಷ್ಟೇ ಎಟಕುವ ವಿಹಂಗಮ ನೋಟವನ್ನೆಲ್ಲ ಸವಿದು, ಆಯಾಸ ವನ್ನು ನೀಗಿಸಿಕೊಂಡು ಕುಳಿತುಬಿಟ್ಟಿದ್ದರು. ಕುಂತಿ ಬೆಟ್ಟ ವೆಂದು ಕರೆಯಲಾಗುವ ಆ ಅವಳಿ ಬೆಟ್ಟಗಳ ಬಗ್ಗೆ ಶಿಲ್ಪಶ್ರೀ ಹರವು  ಸಾಕಷ್ಟು ಅಧ್ಯಯನವನ್ನು ನಡೆಸಿದ್ದರು. ಅದರ ಹೊಳಹುಗಳನ್ನು ಅಲ್ಲಿನ ಕಂಬವೊಂದರ ಸುತ್ತ ನೆರೆದ ಎಲ್ಲರಿಗೂ ಬಿತ್ತರಿಸಿದ್ದರು. ಸಭಿಕರು ಎಷ್ಟು ತಲ್ಲೀನರಾಗಿದ್ದ ರೆಂದರೆ, ಅವರಲ್ಲಿ ಒಬ್ಬರೂ ಏಕೆ ತಡವಾದಿರೆಂದುಮತ್ತೆ ಬಂದ ನಮ್ಮನ್ನು ಕೇಳಲೇ ಇಲ್ಲ.

ಪಾಂಡವಪುರದ ಕುಂತಿಬೆಟ್ಟ ಸಹಜವಾಗಿಯೇ ಅಸಂಖ್ಯ ಐತಿಹ್ಯಗಳಿಗೆ ನೆಲೆವೀಡಾಗಿದೆ. ಭಾರತದುದ್ದಕ್ಕೂ ಒಂದೂ ಬಿಡದಂತೆ ಎಲ್ಲ ದೇವಾಲಯ, ಗುಡ್ಡ, ಹೊಳೆಗಳಲ್ಲಿ ಪಾಂಡವರು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿರುವುದು ಕುತೂಹಲ ಉಂಟುಮಾಡುತ್ತದೆ. ಕುಂತಿ ಇಲ್ಲಿ ತನ್ನ ಸೀರೆಯನ್ನು ಹರವಿ ಒಣಗಿಸುತ್ತಿದ್ದಳಂತೆ. ಬೃಹತ್ ಶಿಲೆಯೊಂದರಲ್ಲಿ ಸೀರೆಯ ನೆರಿಗೆಯಂತೆ ಮೂಡಿರುವುದನ್ನೇ ಇದಕ್ಕೆ ಸಾಕ್ಷ್ಯವಾಗಿ ಜನ ತೋರಿಸುತ್ತಾರೆ. ಪುರಾಣಕ್ಕೆ ಸರಿಹೊಂದುವಂತೆ ಬಕಾಸುರ ವಾಸಿಸಿದ್ದ ಏಕಚಕ್ರ ನಗರವೇ ಇದು. ಪಾಂಡವಪುರದ ಪೂರ್ವದ ಹೆಸರು ಹಿರೋಡೆ ಎಂದು. ಅದರ ಪಶ್ಚಿಮಕ್ಕೆ ಇರುವ ಹಾರೋಹಳ್ಳಿಯಲ್ಲಿ ಪಾಂಡವರು ವೇಷ ಮರೆಸಿಕೊಂಡಿದ್ದಾಗ ರಾಕ್ಷಸನಾದ ಬಕನಿಗೆ ಹಿರಿಯ ಎಡೆಯನ್ನು ಊರವರು ನೀಡುತ್ತಿದ್ದರಂತೆ.

ಆದ್ದರಿಂದಲೇ ಹಿರೋಡೆ ಎನ್ನುವ ಹೆಸರು ಅನ್ವರ್ಥವಾಗಿ ಬಂದಿದೆ ಎಂದು ಐತಿಹ್ಯ ತಿಳಿಸುತ್ತದೆ. ಈ ಪ್ರತೀತಿಯ ಆಳಕ್ಕಿಳಿದು ನೋಡಿದಾಗ ಸೂಕ್ಷ್ಮ ಸಂಗತಿಯೊಂದು ಅರಿವಾಗುತ್ತದೆ. ಹಲವಾರು ಅಧ್ಯಯನಗಳು, ಕೆಲವು ಶಾಸನಗಳು ಸೂಚಿಸುವಂತೆ ಈ ಬೆಟ್ಟದ ಮೂಲ ಹೆಸರು ‘ಕಂತಿಬೆಟ್ಟ’ವೆಂದು ! ಕಾಲಾಂತರದಲ್ಲಿ ಅದು ಹೇಗೋ ಕುಂತಿ ಎಂದು ರೂಢಿಯಲ್ಲಿ ಬಂದುಬಿಟ್ಟಿದೆ.

ಜೈನಧರ್ಮದ ಆರ್ಯಿಕೆ, ಅಜ್ಜಿಕೆ ಇಲ್ಲವೇ ತಪಸ್ವಿನಿಯರನ್ನು ಕಂತಿ ಎಂದು ಕರೆಯುತ್ತಾರೆ. ಕಂತಿಯರ ತಪೋಭೂಮಿ ಇದಾಗಿದ್ದರಿಂದಲೇ, ಕಂತಿ ಬೆಟ್ಟ ಎನ್ನುವ ಹೆಸರು ಬಂದಿರಬೇಕು. ಕುಡಿಯುವ ಹಂಬಲವಾದರೂ ನೀರು ಸಿಗದೇ ಇರುವ ಕಲ್ಲಬೆಟ್ಟಗಳ ಮೇಲೆ ಜೈನ ಸಾಧಕರು ನೆಲೆಸುತ್ತಿದ್ದರು ಎಂಬ ಸಂಗತಿಯನ್ನು ತರೀಕೆರೆ ಮೇಷ್ಟ್ರು ಉಸುರಿ ಅಚ್ಚರಿಯುಂಟುಮಾಡಿದರು. ಜೈನಧರ್ಮದ ಅನುಸಾರ ಸ್ತ್ರೀ ಜನ್ಮದಲ್ಲಿ ಮೋಕ್ಷವಿಲ್ಲವೆಂದು ತಿಳಿದಿದ್ದರೂ ಉಗ್ರ ಸಾಧನೆಯಲ್ಲೇ ತೊಡಗಿಕೊಳ್ಳುವ ಈ ಕಂತಿಯರ ಛಲ ಮುನಿಗಳಿಗಿಂತಲೂ ಮಿಗಿಲಾದದ್ದು ಎಂದು ಚಿಂತಿಸಿ ಬೆರಗಾದೆ!

ಈ ಬೆಟ್ಟದ ಚರಿತ್ರೆ ಪ್ರಾಗೈತಿಹಾಸಿಕ ಯುಗದವರೆಗೂ ಚಾಚಿಕೊಳ್ಳುತ್ತದೆ. ಕಣ್ಣನ್ನಾವರಿಸಿಕೊಂಡಿದ್ದ ಬಂಡೆಗಳು ಶಿಲಾಯುಗದಿಂದಲೂ ಅದೇ ಭಂಗಿಯಲ್ಲಿ ನಿಂತಿದ್ದಿರಬಹುದು ಎನಿಸಿ, ರೋಮಾಂಚನವಾಯಿತು! ಅಲ್ಲಿನ ಪ್ರಾಕೃತಿಕ ಗುಹೆಗಳೂ ಇದಕ್ಕೆ ಪುರಾವೆ.

ಒಂದಿಷ್ಟು ಹರಟೆ, ಒಯ್ದಿದ್ದ ತಿಂಡಿಯನ್ನು ಜೊತೆಯಲ್ಲಿಯೇ ಪೂರೈಸಿ, ಸೋತಕಾಲುಗಳಲ್ಲಿಯೇ ಬೆಟ್ಟವನ್ನುಇಳಿಯತೊಡಗಿದೆವು. ಕತೆಯ ಭೀಮಸೇನನಂತೆ ನಮ್ಮ ಹಿಂದಿರುಗುವ ಪಯಣ ವೇಗವಾಗಿಯೇ ಇದ್ದಿತ್ತು. ಎಳವೆಯಲ್ಲಿ ಕೇಳಿಸಿಕೊಂಡ ಕಥೆಗಳ ಪೈಕಿ ಅತ್ಯಂತ ರಂಜನೀಯವಾಗಿದ್ದದ್ದು ಬಕಾಸುರನ ವಧೆಗೆ ಹೊರಟ ಭೀಮನ ಕತೆಯೇ. ಕಾದಲು ಹೊರಡುವ ಭೀಮನ ಬಂಡಿಗೆ ಕಟ್ಟಿದ ಗೆಜ್ಜೆಯು ಅವನ ಸಾವಕಾಶವನ್ನು ಸಂಕೇತಿಸುವಂತೆ ‘ಗಣಾ ಗಣ ಗಣಾ ಗಣ’ ಎಂದು ಸದ್ದು ಮಾಡುತ್ತಿತ್ತಂತೆ.

ಆದರೆ ಬಕಾಸುರನನ್ನು ಸಂಹರಿಸಿ ನಿರಾಳನಾಗಿ ಮತ್ತೆ ಹಳ್ಳಿಗೆ ಮರಳುವಾಗ ‘ಗಣ ಗಣ ಗಣ ಗಣ’ ಎಂದು ಆ ಗೆಜ್ಜೆಯೂ ಆತುರಗೊಂಡು ಸಂಭ್ರಮಿಸಿತ್ತಂತೆ. ಇಳಿಯುತ್ತಿದ್ದಂತೆ ಆ ಕಥೆ ನೆನಪಾಗಿ, ಬಂಡೆಯ ಆ ಇಳಿಜಾರಿನಲ್ಲಿ ಭೀಮನ ಬಂಡಿ ದೌಡಾಯಿಸಿದ್ದರೆ ಅದರ ಚಕ್ರಗಳು ಒಂದು ಕಡೆ ಭೀಮನೊಂದು ಕಡೆ ಉರುಳಿಬಿದ್ದು ರಕ್ಕಸನ ಸಾವಿನ ಸುದ್ದಿಯನ್ನು ಹಳ್ಳಿಗರಿಗೆ ತಲುಪಿಸುವವರೇ ಯಾರು ಇರುತ್ತಿರಲಿಲ್ಲವೇನೋ! ಕತೆಯ ಸುಖಾಂತ್ಯಕ್ಕೆ ಕುತ್ತು ಉಂಟಾದದ್ದು ತಿಳಿಯುತ್ತಿದ್ದಂತೆ ಹತ್ತುವಾಗ ಕಳೆದಿದ್ದ ದಾರಿ ಯಾವುದು ಎಂದು ಕಣ್ಣಾಲಿಗಳು ಅರಸತೊಡಗಿತ್ತು.

ಹಿಂದೊಮ್ಮೆ ಅಲ್ಲಿ ಬಕಾಸುರನಿದ್ದನೋ – ಇಲ್ಲವೋ, ತಿಳಿಯುವುದು ಹೇಗೆ? ಆದರೆ ಅಲ್ಲಿದ್ದ ಬಂಡೆಗಳೆಲ್ಲ ಮಾನವನ ಕಬಳಿಸುವ ಕ್ರೌರ್ಯಕ್ಕೆ ಮೂಕ ಸಾಕ್ಷಿಗಳಾಗಿ ಬಕ ಧ್ಯಾನದಲ್ಲಿರುವಂತೆ ಭಾಸವಾದವು.

” ಹಿಂದೊಮ್ಮೆ ಅಲ್ಲಿ ಬಕಾಸುರನಿದ್ದನೋ ಇಲ್ಲವೋ, ತಿಳಿಯದು! ಆದರೆ ಅಲ್ಲಿದ್ದ ಬಂಡೆಗಳೆಲ್ಲ ಮಾನವನ ಕಬಳಿಸುವ ಕ್ರೌರ್ಯಕ್ಕೆ ಮೂಕ ಸಾಕ್ಷಿಗಳಾಗಿ ಬಕ ಧ್ಯಾನದಲ್ಲಿರುವಂತೆ ಭಾಸವಾಗುತ್ತಿದ್ದವು.”

-ಅಭ್ಯುದಯ

 

 

Tags:
error: Content is protected !!