Mysore
20
overcast clouds
Light
Dark

ತಾಯಿ ಲಲಿತಾ ಮತ್ತು ಮಗಳು ಶ್ರೀದೇವಿ

ಇದು ಹೊಟ್ಟೆಪಾಡಿಗಾಗಿ ಲೈಂಗಿಕ ವೃತ್ತಿ ಮಾಡುತ್ತಿದ್ದ ಅಮ್ಮ ಮತ್ತು ಅದನ್ನು ಮೀರಿದ ಮಗಳ ಕತೆ. ಒಂದು ರೀತಿಯಲ್ಲಿ ಅನಿವಾರ್ಯತೆ ಮತ್ತು ಅಸಹಾಯಕತೆಗಳ ಜೀವನಗಾಥೆ.

ಕೀರ್ತಿ ಬೈಂದೂರು

ಗೆಳತಿಯರ ಗುಂಪಿನಲ್ಲಿ ನಗುತ್ತಾ, ಕಂಡದ್ದನ್ನೆಲ್ಲ ಪ್ರಶ್ನಿಸಬೇಕಾದ ಲಲಿತಾ ಅವರು ಹದಿಹರೆಯದ 13ರ ವಯಸ್ಸಿನಲ್ಲಿ ಹೆಣ್ಣುಮಗುವಿನ ತಾಯಿಯಾದರು. ಬಾಲ್ಯದ ಕನಸುಗಳನ್ನು ಕಮರಿಕೊಂಡು, ಕುಟುಂಬದವರ ಒತ್ತಡದಿಂದ ಲೈಂಗಿಕ ವೃತ್ತಿಯನ್ನು ಮಾಡಲೇಬೇಕಾದ ಸಂಕಟದ ಸ್ಥಿತಿ, ದೇವದಾಸಿ ಪದ್ಧತಿಯಲ್ಲಿ ಇದೆಲ್ಲ ಸಾಮಾನ್ಯವೆನಿಸಿದರೂ, ಹರೆಯದ ಹುಡುಗಿ ತಕ್ಷಣಕ್ಕೆ ತಾಯಿಯಾಗಬೇಕಾದ ಸಂಕಟವದು.

‘ಮನೆಯಲ್ಲಿ ಗಂಡು ಇದ್ದರೆ ಸಹಜವಾಗೇ ಒಂದು ರೀತಿಯ ಹೆದರಿಕೆ ಇರುತ್ತದೆ. ಪ್ರಪಂಚ ಹೆಣ್ಣಿಗೆ ಹೆದರುವುದಿಲ್ಲ’, ತಾಯಿಯ ಒಡಲ ಮಾತಿದು, ಮಗಳು ಓದಬೇಕೆಂದು ಶಾಲೆಗೆ ಕಳಿಸಿದರು. ತಾಯಿಗೆ ಮಗಳ ವಿದ್ಯಾಭ್ಯಾಸದ ಚಿಂತೆಯಾದರೆ, ಮಗಳಿಗೆ ತಾಯಿಯ ವೃತ್ತಿ ಬಗ್ಗೆ ಅಸಹ್ಯ. ತಂದೆ ಇದ್ದಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ ಎನ್ನುವ ಅಸಹಾಯಕತೆ, ಹೋದಲ್ಲಿ ಬಂದಲ್ಲಿ ತಾಯಿಯ ಬಗ್ಗೆ ಸಮಾಜ ಕಾಣುತ್ತಿದ್ದ ವಿಚಿತ್ರ ನೋಟ, ಒಳಗಿನ ಸಿಟ್ಟಿಗೆಲ್ಲ ಕಾರಣ ತಾಯಿಯೇ ಎನಿಸಿತು. ತನ್ನ ವಯಸ್ಸಿನವರೆಲ್ಲ ಅಪ್ಪ ಅಮ್ಮನ ಜೊತೆ ಖುಷಿಯಿಂದಿರುವಾಗ ತನಗ್ಯಾಕೆ ತಂದೆ ಇಲ್ಲ ಎಂದು ನೇರವಾಗಿ ಲಲಿತಾ ಅವರನ್ನು ಕೇಳಿದರು. ಇಷ್ಟಪಟ್ಟು ಸೇರಿದ ವೃತ್ತಿಯಲ್ಲವೆಂದು, ಮನೆಯವರು ದುಡ್ಡಿಗಾಗಿ ನೂಕಿದ್ದು ಎಂದು ಎಷ್ಟು ಗೋಗರೆದರೂ ಕೇಳುವ ಮನಸ್ಥಿತಿ ಶ್ರೀದೇವಿ ಅವರಿಗಿರಲಿಲ್ಲ. ‘ನೀನೆಲ್ಲಿ ಹೋಗ್ತಿಯೋ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು’ ಎಂದು ತಾಕೀತು
ಮಾಡಿದರೂ, ಜನರು ಇವಳನ್ನೂ ನನ್ನಂತೆಯೆ ಮಾಡಿಬಿಡುತ್ತಾರೆಂಬ ಆತಂಕದಲ್ಲಿ ಬಿಟ್ಟೇ ಹೋಗುತ್ತಿದ್ದರು. ಮಗಳೆಂದರೆ ಜೀವವಾಗಿದ್ದ ತಾಯಿ ಅವರಿಗೆ ಈ ಬದಲಾವಣೆ ಸಹಜವಾಗೇ ನೋವು ತಂದಿತು. ದೇವದಾಸಿ ಪದ್ಧತಿ ಕಟ್ಟಿಕೊಟ್ಟ ಬದುಕನ್ನು ಬಿಟ್ಟುಬರುವುದು ಸುಲಭವಂತೂ ಆಗಿರಲಿಲ್ಲ.

ಊರಿನಲ್ಲಿದ್ದ ಬಹುತೇಕ ದೇವದಾಸಿಯರು ಏಡ್ಸ್‌ನಿಂದ ಸಾಯುತ್ತಿರುವ ಘಟನೆ ಲಲಿತಾ ಅವರನ್ನು ಬದಲಿಸಿತು. ರೋಗ ಸವಾಲಾಗಿ ಪರಿಣಮಿಸಿತು. 1996ರಲ್ಲಿ ‘ಶಕ್ತಿ ಸಂಘ’ವನ್ನು ರಚಿಸಿ, ಏಡ್ಸ್ ತಡೆಗಟ್ಟುವ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಜೊತೆಗೆ, ಮಗಳ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನೂ ಮರೆತಿರಲಿಲ್ಲ. ಓದಿನ ಕನಸನ್ನು ಮಗಳು ನನಸು ಮಾಡುತ್ತಾಳೆಂಬ ಸಂಭ್ರಮದಿಂದ ತಾಯಿ ಹೇಗೆ ತಾನೆ ತಪ್ಪಿಸಿಕೊಳ್ಳುತ್ತಾಳೆ. ಹೇಳಿ! ಇದರ ಜೊತೆಯಲ್ಲಿ ಶ್ರೀದೇವಿ ಅವರಿಗೆ ಏಳನೆಯ ತರಗತಿಯಲ್ಲಿರುವಾಗ ಮನಸ್ಸಿನೊಳಗೆ ನಡೆಯುತ್ತಿದ್ದ ಸರಿ ತಪ್ಪುಗಳ ವಿಮರ್ಶೆಗೆ ಸ್ಪಷ್ಟ ರೂಪ ದೊರೆಯಿತು. ತಪ್ಪೇ ಮಾಡದ ತಾಯಿಯನ್ನು ಇಷ್ಟು ದಿನ ದ್ವೇಷಿಸುವಂತಾಯಿತಲ್ಲಾ ಎಂದು ಪಶ್ಚಾತ್ತಾಪಪಟ್ಟರು. ಪರಿಣಾಮವಾಗಿ, ಇವರೂ ಸಂಘಟನೆಯ ಭಾಗವಾದರು.

ದೇವದಾಸಿಯ ಮಗಳು ಶಾಲೆಯ ಮೆಟ್ಟಿಲೇರುತ್ತಿದ್ದಾಳೆ ಎಂಬ ಸುದ್ದಿ ಊರಿಡೀ ಸದ್ದು ಮಾಡಿತು. ಸಿಕ್ಕವರಲ್ಲಿ ಕೆಲವರು ‘ತಾಯಿಯ ಕೆಲಸವನ್ನೇ ಮುಂದುವರಿಸಿಕೊಂಡು ಹೋಗುವುದು ಬಿಟ್ಟು, ನೀನ್ಯಾಕೆ ಓದಬೇಕು? ಅಬ್ಬಬ್ಬಾ ಅಂದರೆ ಬಡವರ ಮನೆಗೆ ಮದುವೆ ಮಾಡಿ ಕೊಡಬಹುದು. ಆ ಚಂದಕ್ಕೆ ಓದಬೇಕಾ’ ಎಂದರೆ, ಇನ್ನೂ ಕೆಲವರು ‘ತಾಯಿ ದುಡೀತಿದ್ರೆ ಮಗಳು ಖರ್ಚು ಮಾಡದೇ ಇನ್ನೇನು ಮಾಡಬೇಕು ಹೇಳಿ’ ಎಂದು ಕುಹಕವಾಡುತ್ತಿದ್ದರು. ಚಂದದ ಬಟ್ಟೆ ತೊಟ್ಟರೂ ಸಹಿಸದ ಮನೆ ಜನ, “ನಿನ್ ತಾಯಿ ದೇವದಾಸಿ ಆಗಿದ್ದಕ್ಕೇ ಸುಖವಾಗಿದ್ದೀಯ. ಅವಳನ್ನೆಲ್ಲಾದ್ರೂ ಮದ್ದೆ ಮಾಡಿ ಕೊಟ್ಟಿದ್ರೆ ಇಷ್ಟೆಲ್ಲ ದುಡ್ಡು ಎಲ್ಲಿ ಸಿಗ್ತಿತ್ತು!’ ಎನ್ನುವ ಮಾತುಗಳು ನಿರಂತರ ಕೇಳಿಸುತ್ತಿದ್ದವು.

ಏಳನೇ ತರಗತಿ ಮುಗಿಯುತ್ತಿದ್ದಂತೆ ಯಾವ ಓದೂ ಬೇಡವೆಂದು ನಾಲ್ಕು ವರ್ಷಗಳವರೆಗೆ ಶ್ರೀದೇವಿ ಅವರು ಮನೆಯಲ್ಲೇ ಉಳಿದರು. ಬರಿದೇ ಸಮಯ ಕಳೆಯುವ ಮನಸ್ಸಿಲ್ಲದೆ, ಟೈಲರಿಂಗ್ ಕಲಿತರು. ಶಿಕ್ಷಣದ ಕನಸನ್ನು ಮತ್ತೆ ಜೀವಂತಗೊಳಿಸಲು ಸಂಜೀವ್ ಕುಮಾರ್ ಎಂಬ ಅಧ್ಯಾಪಕರು ನೆರವಾದರು. ಪಿಯುಸಿ ಮುಗಿಸಿ, ನರ್ಸಿಂಗ್ ಅಧ್ಯಯನದಲ್ಲಿ ನಿರತರಾದರು.

ಬದುಕಿಗೆ ಆರ್ಥಿಕ ನೆರವನ್ನು ನೀಡಿದ ದೇವದಾಸಿ ವೃತ್ತಿಯ ಬಗ್ಗೆ ತಾಯಿ ಮಗಳಿಬ್ಬರಿಗೂ ಹೇಸಿಗೆಯಿಲ್ಲ. ಸಮಾಜದ ಮಹಿಳೆಯರಿಗೆ ಅರಿವು ಮೂಡಬೇಕೆಂಬ ಉದ್ದೇಶದಿಂದ ವೃತ್ತಿಯನ್ನು ಲಲಿತಾ ಅವರು ಕೈಬಿಟ್ಟರು. ಸಂಸಾರದ ಜೊತೆಗೆ ಶಕ್ತಿ ಸಂಘವನ್ನು ನಡೆಸಬೇಕಿರುವುದರಿಂದ ಹಣಕಾಸಿನ ತೊಂದರೆಯಾದರೂ ಇನ್ನೊಬ್ಬರೆದುರು ಕೈಚಾಚದೇ ಬದುಕುತ್ತಿದ್ದಾರೆ. ದೇವರಾಜ ಅರಸು ಜಿಲ್ಲಾ ಪ್ರಶಸ್ತಿ, ಟಿ.ಸುಬ್ರಹ್ಮಣ್ಯ ಗೌರವ ಪುರಸ್ಕಾರ ಸೇರಿದಂತೆ ಅನೇಕ ಸನ್ಮಾನಗಳು ಲಲಿತಾ ಅವರಿಗೆ ದೊರೆತಿವೆ.

ದೇವದಾಸಿಯರ ನೆರಳು ಸೋಕಿದರೂ ಸಾಕು, ಯಾರೆಲ್ಲ ಅಸ್ಪೃಶ್ಯರ ರೀತಿ ನೋಡುತ್ತಿದ್ದರೋ ಅವರೆದುರು ದಿಟ್ಟವಾಗಿ ಬದುಕಿ ತೋರಿಸಿದ್ದಾರೆ; ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಗಂಡು ಆಕರ್ಷಣೆ ಪಡುವುದರಲ್ಲಿ, ಹೆಣ್ಣಿನ ತಪ್ಪೇನಿದೆ? ಆಕೆಯನ್ನೇಕೆ ಕೀಳಾಗಿ ಕಾಣಬೇಕು? ಎನ್ನುವ ಇಬ್ಬರೂ ಹೇಳುವ ಏಕಸೂತ್ರವೊಂದೆ, ‘ದೇಹವೇ ದೇವರು’. ಅಂದ ಹಾಗೆ ಈ ತಾಯಿ ಮತ್ತು ಮಗಳು ತಮ್ಮ ದೇವದಾಸಿ ಸಂಗಾತಿಯರೊಂದಿಗೆ ಸಂಘಟನೆಯ ಕೆಲಸಕ್ಕಾಗಿ ಮೂರು ದಿನಗಳ ಹಿಂದೆ ಮೈಸೂರಿಗೆ ಬಂದಿದ್ದರು.
keerthisba2018@gmail.com