• ಚೇತನ್ ಎಸ್.ಪೊನ್ನಾಚಿ
ರಾಗಿ ಒಕ್ಕಣೆಯ ಕಾಲ ಬಂತೆಂದರೆ ಸಾಕು ನಮಗೆ ಎಲ್ಲಿಲ್ಲದ ಸಂಭ್ರಮ. ಮನೆಯವರೆಲ್ಲ ಒಕ್ಕಣೆ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರಿಂದ ಶಾಲೆಗೆ ಹೋಗುತ್ತಿದ್ದುದ್ದು… ತಪ್ಪಿಸಿಕೊಳ್ಳುತ್ತಿದ್ದರ ಕಡೆಗಿನ ಗಮನ ಸ್ವಲ್ಪ ಕಡಿಮೆ ಇರೋದು. ನನಗೋ ಎಲ್ಲಿಲ್ಲದ ಸಂಭ್ರಮ… ಸಡಗರ… ಶಾಲೆ ತಪ್ಪಿಸಿಕೊಳ್ಳುವುದಕ್ಕೆ ಏನಾದರೂ ಮಾಡಬೇಕಲ್ಲ ಅಂದುಕೊಂಡು ಆ ದಿನ ರಾತ್ರಿಯಿಂದಲೇ ಜ್ವರ ಬಂದವನಂತೆ ಹೋಗಿ ಒಲೆ ಮುಂದೆ ಸಪ್ಪಗೆ ಕುಳಿತುಕೊಳ್ಳುವುದು… ಮಲಗುವುದು… ಮುಲುಗುವುದು… ಮಾಡುತ್ತಿದ್ದೆ.
ಬೆಳಿಗ್ಗೆ ನಮ್ಮ ಅವ್ವ ಬಂದವಳೆ ಜ್ವರ ಏನಾದರೂ ಬಂದಿರಬಹುದೆನೋ ಅಂತ ಕುತ್ತಿಗೆ ಹಣೆಯನ್ನೆಲ್ಲ ಮುಟ್ಟಿ ನೋಡಿದಳಾದರೂ ವ್ಯತ್ಯಾಸ ಕಾಣಿಸಲಿಲ್ಲ.
ಮೈ ಬಿಸಿ ಇಲ್ಲ ಆದರೂ ಸಪ್ಪಗಿದ್ದಾನಲ್ಲ ಏಕೆ..? “ಏನನ್ನಾದರೂ ನೋಡಿ ಅಂಜಿಕೊಂಡೇನೋ’ ಅಂತ ಕೇಳಿದರು,
‘ಇಲ್ಲ’ ಅಂದೆ.
ಎಲ್ಲಾದರೂ ಬಿದ್ದ ಅಂತ ಕೇಳಿದರು,
‘ಇಲ್ಲ’ ಅಂದೆ.
ಯಾಕೋ..? ಏನೋ..? ಅನ್ನುವ
ಗೊಂದಲದಲ್ಲಿಯೇ ಒಂದು ಕಬ್ಬಿಣದ ಗುಳವನ್ನು ಒಲೆಗೆ ಹಾಕಿ ಅದು ಚೆನ್ನಾಗಿ ಕಾಯುತ್ತಿದ್ದಂತೆ ತೆಗೆದುಕೊಂಡು ಬಂದು ನನಗೆ ದೃಷ್ಟಿ ತೆಗೆದು ಅದನ್ನು ತಟ್ಟೆಯಲ್ಲಿಟ್ಟು ನೀರಾಕುತ್ತಿದ್ದಂತೆ ಅದು ಜೋರಾಗಿ ಸೊ.. ಸೊರ್.. ಅಂತ ಸದ್ದಾಗುತ್ತಿರುವುದನ್ನು ಕಂಡು ಯಾರದ್ದೋ ಕಣ್ಣಿನ ದೃಷ್ಟಿ ಆಗಿದೆ ನನ್ನ ಮಗಿಗೆ ಅಂತೇಳಿ ಆ ಗುಳ ಕಾಯಿಸಿದ ನೀರನ್ನು ಕುಡಿಸಿ ಇವತ್ತು ಇಸ್ಮಲ್ಲಿಗೆ ಹೋಗುವುದು ಬೇಡ, ಕಣಕ್ಕೆ ಬಂದು ಪಾಕೆಯಲ್ಲಿ ಮಲಗಿರು ಅಂದಳು.
ನನಗೋ ನಮ್ಮವ್ವನ ಮಾತು ಕೇಳಿ ಸಾಕ್ಷಾತ್ ಕಬ್ಬಾಳಮ್ಮನೇ ಎದುರು ನಿಂತಿರುವಂತೆ ಭಾಸವಾಗುತ್ತಿತ್ತು.
ಇವೆಲ್ಲ ದೃಶ್ಯ ವೈಭವವನ್ನು ನೋಡುತ್ತಾ… ಕೇಳುತ್ತಾ… ಕೋಣೆಯಲ್ಲಿ ಶಿವಪೂಜೆ ಮಾಡಿಕೊಂಡು ಕುಳಿತಿದ್ದ ತಾತಯ್ಯ;
ಅವನಿಗೆ ಏನಾಗಿದೆ ಅಂತ ನನಗೆ ಸೆಂದಾಗಿ ಗೊತ್ತು, ಅವನು ಎಲ್ಲಿಗೂ ಬರುವುದು ಬೇಡ ಅವನಿಗೆ ಹಿಡಿದಿರುವ ಗಾಳಿಯನ್ನು ಬಿಡಿಸ್ತೀನಿ ಇರಮ್ಮಿ ಅಂತೇಳಿ ಎಮ್ಮೆ ಕೊಟ್ಟಿಗೆಗೆ ಹೋಗಿ ಒಂದು ಬರ್ಲು ತಂದವರೆ…
ನಮಗಂತು ಓದು-ಬರಹ ಇಲ್ಲ. ನಿಮ್ಮಪ್ಪ ಓದಲಿ ಅಂದುಕೊಂಡರೆ ಅವನೂ ಒಂದೆರಡು ವರ್ಷಕ್ಕೆಲ್ಲ ಶಾಲೆಗೆ ಬೆನ್ನು ತೋರಿಸಿಬಿಟ್ಟ. ಈಗ ನೀನೂ ಅದೇ ದಾರಿಯಲ್ಲಿದ್ದೀಯಲ್ಲ. ನೀನು ಮಾಡುತ್ತಿರೋ ನಾಟಕ ಇದು ಅಂತ ನನಗೆ ಗೊತ್ತಾಗುವುದಿಲ್ಲ ಅಂದುಕೊಂಡ್ಯ’ ಅನ್ನುತ್ತಾ ರಸ್ತೆಯುದ್ದಕ್ಕೂ ಬಡಿಯುತ್ತಾ ಶಾಲೆಗಟ್ಟಿ ಬಂದಿದ್ದರು.
Chetanponnachi@gmail.com