Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಣ್ಣಪುಟ್ಟ ತಾಣ: ಹತ್ವಾಳು ಕಟ್ಟೆ ಕಂಡಿದ್ದೀರಾ?

ಮೈಸೂರಿನಿಂದ ನಂಜನಗೂಡಿನ ಹುಲ್ಲಹಳ್ಳಿ ಕಡೆ ನಲವತ್ತು ನಿಮಿಷ ದೂರ ಹೋದರೆ ಹುಲ್ಲಹಳ್ಳಿಗೂ ಮುನ್ನ ರಾಂಪುರ ಎಂಬ ಸಣ್ಣ ಊರು ಸಿಗುತ್ತದೆ. ಆ ಊರಿನಲ್ಲಿ ಕಪಿಲಾ ನದಿ ನೀರಿಗೆ ಕಟ್ಟಲಾಗಿರುವ ಐತಿಹಾಸಿಕ ಹತ್ವಾಳು ಕಟ್ಟೆಯನ್ನು ನಾವು ನೋಡಬಹುದು.

ಇದನ್ನು ಹುಲ್ಲಹಳ್ಳಿ ಡ್ಯಾಂ ಎಂದೂ ಕರೆಯುತ್ತಾರೆ. ಕಬಿನಿಯ ಬೀಚನಹಳ್ಳಿ ಡ್ಯಾಂನಿಂದ ಇಲ್ಲಿಗೆ ನೀರು ಬರುತ್ತದೆ. ಈ ಡ್ಯಾಂಗೆ ಎರಡು ಗೇಟ್‌ಗಳಿದ್ದು, ಇದನ್ನು ನೋಡಿಕೊಳ್ಳಲೆಂದೇ ಇಬ್ಬರು ಕಾವಲುಗಾರರಿದ್ದಾರೆ. ಹತ್ವಾಳು ಕಟ್ಟೆಯನ್ನು ೧೮೮೯ರಲ್ಲಿ ನಿರ್ಮಿಸಲಾಯಿತು ಎಂಬ ಫಲಕವನ್ನು ನಾವು ಇಲ್ಲಿ ಕಾಣಬಹುದು. ಅಂದರೆ ಇದು ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾದ ಅಣೆಕಟ್ಟೆ. ಆಗಿನಿಂದ ಈಗಿನವರೆಗೂ ಈ ಅಣೆಕಟ್ಟೆಯನ್ನು ಹಾಗೇ ಕಾಪಾಡಿಕೊಂಡು ಬರಲಾಗುತ್ತಿದೆ.

ಮೈಸೂರಿನಲ್ಲಿ ಇರುವವರು ಅಥವಾ ಮೈಸೂರಿಗೆ ಪ್ರವಾಸಕ್ಕೆಂದು ಬಂದವರು ನಗರದಿಂದ ಕೇವಲ ಮುಕ್ಕಾಲು ಗಂಟೆ ಪ್ರಯಾಣ ಮಾಡಿದರೆ ಈ ಸ್ಥಳ ತಲುಪಬಹುದು. ಹುಲ್ಲಹಳ್ಳಿ ಡ್ಯಾಂ ಐತಿಹಾಸಿಕ ಪ್ರಾಮುಖ್ಯತೆ ಯನ್ನು ಪಡೆದುಕೊಂಡಿದೆ. ಬರೋಬ್ಬರಿ ೧೩೫ ವರ್ಷಗಳ ಹಿಂದೆಯೇ ನಮ್ಮನ್ನಾಳುವವರಿಗೆ ಇಂತಹ ಯೋಜನೆ ರೂಪಿಸುವ ಯೋಚನೆ ಬಂದಿದೆ ಎಂದರೆ ಅಚ್ಚರಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಜೀವನಶೈಲಿಯೆಲ್ಲವೂ ಬಹಳವೇ ಮುಂದುವರಿದಿರುವ ಈ ಕಾಲದಲ್ಲಿ ಏನನ್ನಾದರೂ ಸಾಽಸಬಹುದು. ಆದರೆ ಆಗ ಲಭ್ಯವಿದ್ದ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಕರಿಗೆ ಅನುಕೂಲವಾಗುವಂತೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿರುವುದು ಶ್ಲಾಘನೀಯ ಸಂಗತಿ.

ಕಳೆದ ಒಂದು ಶತಮಾನ ದಿಂದಲೂ ಈ ಕಟ್ಟೆ ಇಲ್ಲಿನ ಕೃಷಿಕರಿಗೆ ಜೀವನಾಡಿ ಯಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಹತ್ವಾಳು ಕಟ್ಟೆಯನ್ನು ನೋಡುವುದೇ ಒಂದು ಚೆಂದ. ಬೇಸಿಗೆ ಕಾಲದಲ್ಲಿ ನೀರು ಕಡಿಮೆ ಯಾಗಿ ಕೊಂಚ ಖಾಲಿಯಾಗಿ ಕಾಣಿಸಿದರೂ ಕಟ್ಟೆಯ ಅಂದಕ್ಕೇನೂ ಕೊರತೆಯಿಲ್ಲ. ಸುತ್ತಲೂ ಹಸಿರು, ಹಕ್ಕಿಗಳ ಚಿಲಿಪಿಲಿ ಸದ್ದು, ತಂಪಾದ ಗಾಳಿ, ನೀರವ ವಾತಾವರಣ. ಒಂದು ಸುಂದರ ದಿನವನ್ನು ಪ್ರಶಾಂತ ವಾಗಿ ಕಳೆಯಲು ಇದಕ್ಕಿಂತ ಮತ್ತೇನು ಬೇಕು ಹೇಳಿ?

ಮಳೆಗಾಲದಲ್ಲಿ ನೀರು ಹೆಚ್ಚಾಗುವ ಕಾರಣ ಇಲ್ಲಿ ಈಜುವುದು ಯೋಗ್ಯವಲ್ಲ. ಬೇಸಿಗೆ ಕಾಲದಲ್ಲಿ ಈಜಲು ಅಥವಾ ನದಿ ಬದಿಯ ಮರದ ಕೆಳಗೆ ಕುಳಿತು ಪ್ರಶಾಂತವಾಗಿ ಸಮಯ ಕಳೆಯಲು ಇದು ಬಹಳ ಸೂಕ್ತ ಜಾಗ. ಅದರಲ್ಲೂ ಈ ಕಟ್ಟೆ ಪಶ್ಚಿಮ ದಿಕ್ಕಿಗೆ ಇರುವ ಕಾರಣ ಇಲ್ಲಿ ಸೂರ್ಯಾಸ್ತ ಮನಮೋಹಕವಾಗಿ ಕಾಣುತ್ತದೆ. ಮನಸ್ಸಿನಲ್ಲಿರುವ ಒತ್ತಡ, ಬೇಸರ, ದಿನನಿತ್ಯದ ಜಂಜಾಟಗಳೆಲ್ಲವೂ ದೂರವಾಗಿ ನಿರಾಳ ಭಾವ ಮೂಡುತ್ತದೆ

 

Tags: