• ಶುಭಮಂಗಳ ರಾಮಾಪುರ
ಗೋಡೆಗೆ ಮುಖ ಮಾಡಿ ತನ್ನ ಕಂದನ ತಲೆಯನ್ನು ನೇವರಿಸುತ್ತಾ ಆಗಾಗ ಮಗುವಿನ ಅಂಗಾಲಿಗೆ ಚುಂಬಿಸುತ್ತಾ ಒಂದು ಮುದ್ದಾದ ಎಳೆಗೂಸಿಗೆ ಹಾಲುಣಿಸುತ್ತಿದ್ದ ನಾಗಮ್ಗಳನ್ನು ನೋಡುತ್ತಿದ್ದಂತೆ ನಮ್ಮ ಶಿಕ್ಷಕಿಯರು ತಬ್ಬಿಬ್ಬಾದವರಂತೆ ನಿಂತುಬಿಟ್ಟರು. ಅವಳನ್ನೇ ದಿಟ್ಟಿಸುತ್ತಾ ನಿಂತಿದ್ದ ನಮ್ಮ ಶಿಕ್ಷಕಿಯರ ಕಾಲುಗಳನ್ನು ಹಿಡಿದು ಗೋಳಾಡಲಾರಂಭಿಸಿದಳು. ಆ ಮುಗ್ಧ ಹುಡುಗಿ ನಾಗಮ್ಮ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ದೈನ್ಯದಿಂದ ಬೇಡಿಕೊಂಡಳು. ನಾಗಮ್ಮಳ ಕಣ್ಣ ಹನಿಗಳ ಮುಂದೆ ಏನೂ ಮಾತನಾಡಲಾಗದೆ ಮೌನವಾಗಿ ನಿಂತಿದ್ದರು ನಮ್ಮ ಶಿಕ್ಷಕಿಯರು…
ನಾಗಮ್ಮ ಮುದ್ದಾದ ಹುಡುಗಿ, ವಯಸ್ಸು ಹನ್ನೆರಡು ವರ್ಷ. ಸರ್ಕಾರಿ ಶಾಲೆಯೊಂದರ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಕೂಲಿ ಮಾಡಿ ಸಂಸಾರ ನೋಡಿಕೊಳ್ಳುತ್ತಿದ್ದ ನಾಗಮ್ಮಳ ತಂದೆ ಹೃದಯಾಘಾತದಿಂದ ಸತ್ತು ಹೋದರು. ತಾಯಿ ಚೆನ್ನಿ ಶೌಚಾಲಯ ತೊಳೆಯುವ ಕೆಲಸಕ್ಕೆ ಸೇರಿದಳು. ದಿನವಿಡೀ ಶಾಲಾ-ಕಾಲೇಜಿನಲ್ಲಿಯೋ, ಸರ್ಕಾರಿ ಕಚೇರಿಯಲ್ಲಿಯೋ ಬ್ಯಾಂಕುಗಳಲ್ಲಿಯೋ ಶೌಚಾಲಯ ಸ್ವಚ್ಛ ಮಾಡಿ ರಾತ್ರಿಯಾದಂತೆ ಸಾರಾಯಿ ಕುಡಿದು ಮಲಗಿಬಿಡುತ್ತಿದ್ದಳು. ತನ್ನ ಮೂವರು ಮಕ್ಕಳ ಮೇಲೆ ಗಮನ ಕೊಡುತ್ತಿರಲಿಲ್ಲ. ಮನೆಕೆಲಸವೆಲ್ಲಾ ಹಿರಿಮಗಳಾದ ನಾಗಮ್ಮಳ ಹೆಗಲಿಗೆ ಬಂತು. ತಂದೆ ಸತ್ತ ಪ್ರಾರಂಭದಲ್ಲಿ ವಾರಕ್ಕೆರಡು ದಿನಗಳು ಶಾಲೆಗೆ ಗೈರಾಗುತ್ತಿದ್ದವಳು, ಕ್ರಮೇಣ ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಳು.
ದಿನ-ವಾರವಾಯಿತು, ವಾರ-ತಿಂಗಳಾದರೂ ನಾಗಮ್ಮ ಟೀಚರ್ ಶಾಲೆಯೆಡೆಗೆ ಸುಳಿಯಲಿಲ್ಲ. ಶಿಕ್ಷಕಿಯರು ಆಕೆಯ ಮನೆಗೆ ಭೇಟಿ ನೀಡಿದರೂ ನಾಗಮ್ಮಳನ್ನು ಶಾಲೆಗೆ ಕರೆತರಲಾಗಲಿಲ್ಲ. ತಾಯಿ ಚೆನ್ನಿ ತನ್ನ ಮಗಳನ್ನು ತವರಿನಲ್ಲಿ ಬಿಟ್ಟಿರುವುದಾಗಿ ಶಿಕ್ಷೆಯರಿಗೆ ಹೇಳಿಕೆ ಕೊಟ್ಟಳು. ಚೆನ್ನಿಯ ತವರೂರಿನಲ್ಲಿಯೇ ಶಾಲೆಗೆ ಸೇರಿಸುವಂತೆ ಶಿಕ್ಷಕಿಯರು ಸೂಚಿಸಲು ಚೆನ್ನಿ ನಾಗಮ್ಮಳ ವರ್ಗಾವಣೆ ಪತ್ರ ಪಡೆದು ಹೋಗಿದ್ದಳಾದರೂ ಶಾಲೆಗೆ ಸೇರಿಸಿರಲಿಲ್ಲ.
ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾದಂತೆ ಶಾಲೆಯ ಎಸ್‌ಎಟಿಎಸ್‌ನಲ್ಲಿ ನಾಗಮ್ಮಳ ಪ್ರಗತಿಯು ಪೆಂಡಿಂಗ್ ಇರುವುದನ್ನು ತಿಳಿದು ಶಿಕ್ಷಕಿಯರು ನಾಗಮ್ಮ ಓದುತ್ತಿರುವ ಶಾಲೆಯ ಮಾಹಿತಿಯನ್ನು ಪಡೆಯಲು ಮತ್ತೆ ಅವಳ ಮನೆಗೆ ಭೇಟಿ ಕೊಟ್ಟಾಗ ಚೆನ್ನಿ ಕಂಠಪೂರ್ತಿ ಕುಡಿದು ಎಚ್ಚರವಿಲ್ಲದೆ ಮಲಗಿದ್ದಳು! ಒಳಕೋಣೆಯಲ್ಲಿ ಹಿಂಬದಿಯಿಂದಲೇ ನಾಗಮ್ಮಳನ್ನು ಗುರುತಿಸಿದ ಶಿಕ್ಷಕಿಯರಿಗೆ ಜೀವ ಬಾಯಿಗೆ ಬಂದಿತ್ತು. ನಾಗಮ್ಮ ಒಂದು ಹಸುಗೂಸಿಗೆ ಹಾಲುಣಿಸುತ್ತಾ ಕುಳಿತಿದ್ದಳು ಅದು ತನ್ನ ಹದಿಮೂರನೇ ವಯಸ್ಸಿನಲ್ಲಿ! ಮುದ್ದಾಗಿದ್ದನಾಗಮ್ಮಳನ್ನು ತಮಿಳುನಾಡಿನ ದೂರದ ಸಂಬಂಧಿಕರ ಮಗನಿಗೆ ಹಣದಾಸೆಯಿಂದ ಚೆನ್ನಿ ಮದುವೆ ಎಂಬ ಹೆಸರಿನಲ್ಲಿ ಮಾರಾಟ ಮಾಡಿದ್ದಳು. ಶಾಲೆಬಿಡಿಸಿ ಚಿಕ್ಕ ಹುಡುಗಿಗೆ ಮದುವೆ ಮಾಡಿರುವುದು ತಪ್ಪು ಎಂಬುದನ್ನು ಅರ್ಥ ಮಾಡಿಸಲು ಹೋದ ಶಿಕ್ಷಕಿಯರ ಪ್ರಯತ್ನ ವಿಫಲವಾಯಿತು. “ತನ್ನ ತಾಯಿ ಕುಡಿದು ಮಲಗಿರುವಾಗ ಯಾರಾರೋ ಗಂಡಸರು ಮನೆಬಾಗಿಲು ತಟ್ಟಿ ಕೆಟ್ಟದಾಗಿ ಏನೇನೋ ಹೇಳುತ್ತಿದ್ದರು, ಈಗ ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನಾನೂ ಸುಖವಾಗಿದ್ದೇನೆ, ನನ್ನನ್ನು ದಯಮಾಡಿ ಬದುಕಲು ಬಿಡಿ” ಎಂದು ಗೋಳಿಟ್ಟಳು ಆ ಪುಟ್ಟ ಹುಡುಗಿ. ನಾಗಮ್ಮಳ ತಾಯಿಯಿಂದ ಹೇಳಿಕೆ ತೆಗೆದುಕೊಳ್ಳಲು ಆಕೆಗೆ ಪ್ರಜ್ಞೆಯೇ ಇರಲಿಲ್ಲ. ಸರಿ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಚಿಂತಿಸುವ ಎನ್ನುತ್ತಾ ಶಿಕ್ಷಕರು ಶಾಲೆಗೆ ಹಿಂತಿರುಗಿದವರೇ ಮುಖ್ಯ ಶಿಕ್ಷಕರಿಗೆ ವಿಚಾರ ತಿಳಿಸಿದರು. ಮರುದಿನ ಮುಖ್ಯ ಶಿಕ್ಷಕರು ಸೇರಿದಂತೆ ಕೆಲವು ಶಿಕ್ಷಕರು ನಾಗಮಳ ಮನೆಗೆ ತೆರಳಿದರು. ಮನೆಯ ಮುಂಬಾಗಿಲಿಗೆ ಬೀಗ ಜಡಿದಿತ್ತು. ಚೆನ್ನಿ ರಾತ್ರೋರಾತ್ರಿ ತನ್ನ ಮೂವರು ಮಕ್ಕಳು ಹಾಗೂ ಮೊಮ್ಮಗುವಿನೊಂದಿಗೆ ಎಲ್ಲಿಗೋ ಪರಾರಿಯಾಗಿದ್ದಳು. ಅವರೆಲ್ಲಿದ್ದಾರೆ ಎಂಬ ಸುಳಿವು ಅಕ್ಕಪಕ್ಕದ ಮನೆಯವರಿಗಾಗಲಿ ಶಿಕ್ಷಕರಿಗಾಗಲಿ ಸಿಗಲೇ ಇಲ್ಲ…
ಮನೆಯವರ ಒತ್ತಾಯಕ್ಕೆ ಮಣಿದು ನನ ಸಂಬಂಧಿಕರಾದ ಮೂವತ್ತು ವರ್ಷದ ಕುಮಾರಣ್ಣನನ್ನು ಮದುವೆಯಾಗಲು ಹದಿನಾರು ವರ್ಷದ ಹುಡುಗಿಯೊಬ್ಬಳು ಒಪ್ಪಿದ್ದಳು. ಹುಡುಗಿಗೆ ಹದಿನೆಂಟು ವರ್ಷಗಳಾಗಿರಲಿಲ್ಲವಾದ್ದರಿಂದ ದೇವಸ್ಥಾನದಲ್ಲಿ ತಾಳಿ ಹಾಕಿಸಿ ಬಿಡಬೇಕೆಂದು ನಿರ್ಧರಿಸಿದ್ದರು. ನನ್ನಮ್ಮನಿಗೂ ಮದುವೆಗೆ ಆಹ್ವಾನಿಸಿದ್ದರು. ವಿಷಯ ತಿಳಿದ ನನಗೆ ಇಕ್ಕಟ್ಟಿನ ಪರಿಸ್ಥಿತಿ. ಪೊಲೀಸರಿಗೆ ಬಾಲ್ಯವಿವಾಹವಾಗುತ್ತಿದೆಯೆಂದು ತಿಳಿಸಿದರೆ ದೂರದಿಂದಲೇ ನಾಗಮ್ಮಳನ್ನು ಗುರುತಿಸಿದ ಶಿಕ್ಷಕಿಯರಿಗೆ ಜೀವ ಬಾಯಿಗೆ ಬಂದಿತ್ತು. ನಾಗಮ್ಮ ಒಂದು ಹಸುಗೂಸಿಗೆ ಹಾಲುಣಿಸುತ್ತಾ ಕುಳಿತಿದ್ದಳು. ಅದೂ ತನ್ನ ಹದಿಮೂರನೇ ವಯಸ್ಸಿನಲ್ಲಿ! ಸಂಬಂಧಿಕರ ವಿರೋಧ ಕಟ್ಟಿಕೊಳ್ಳ ಬೇಕಾಗುತ್ತದೆಂಬುದು ಒಂದೆಡೆಯಾದರೆ, ಬಾಲ್ಯವಿವಾಹ ಮಾಡುವುದು ಅಪರಾಧ ಮತ್ತು ಕಾನೂನುಬಾಹಿರ. ಇದನ್ನು ತಡೆಯಲೇಬೇಕೆಂಬುದು ಮತ್ತೊಂದೆಡೆ. ಈ ನಡುವೆಯೇ ಮದುವೆಗೆ ಇನ್ನೆರಡು ದಿನಗಳಿವೆ ಎನ್ನುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿ ಹುಡುಗಿಯು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ತಾನು ಓದನ್ನು ಮುಂದುವರಿಸಲೇಬೇಕೆಂದು ಹಠಕೆ ಬಿದ್ದು ಹುಡುಗಿ ಮದುವೆಯಿಂದ ಹಿಂದೆ ಸರಿದುಬಿಟ್ಟಳು. ಮದುವೆ ಹುಡುಗನ ಮನೆಯಲ್ಲಿ ದುಃಖದ ಛಾಯೆ. ನನ್ನಮ್ಮ ಅವರಿಗೆ ಸಮಾಧಾನದ ಮಾತುಗಳನ್ನಾಡುತ್ತಿದ್ದರೆ, ನನ್ನ ಮುಖದಲ್ಲಿ ಮಂದಹಾಸ ನಲಿಯುತ್ತಿತ್ತು. ನನಗೆ ತಿಳಿದಂತೆ ನಡೆಯಬೇಕಿದ್ದ ಬಾಲ್ಯವಿವಾಹವೊಂದು ಮುರಿದು ಬಿತ್ತೆಂದು.
ಈ ಘಟನೆಗಳನ್ನು ಗಮನಿಸಿದಾಗ ಇನ್ನೂ ಸಮಾಜದಲ್ಲಿ ತೆರೆಮರೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವುದು ಕಂಡುಬರುತ್ತದೆ. ಬಾಲ್ಯದಲ್ಲೇ ಹಲವಾರು ಮಕ್ಕಳು ಮದುವೆ ಎಂಬ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರು ತಮ್ಮ ಆರ್ಥಿಕ ಪರಿಸ್ಥಿತಿಯಿಂದಲೋ, ಹೆಣ್ಣು ಮಕ್ಕಳು ತಮಗಿರುವ ಜವಾಬ್ದಾರಿಯೆಂತಲೋ, ಇಲ್ಲ ಬಾಲ್ಯದಲ್ಲಿಯೇ ಹೆಣ್ಣು ಮಕ್ಕಳು ಪ್ರೀತಿಯ ಜಾಲಕ್ಕೆ ಸಿಲುಕಿಯೋ ಸಮಾಜದಲ್ಲಿ ಹಲವಾರು ಬಾಲ್ಯವಿವಾಹಗಳು ನಡೆಯುತ್ತಿವೆ. ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆಯಾದರೂ ಅದರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲವೇ? ಇಲ್ಲಾ ಸಮಾಜದಲ್ಲಿ ಬಾಲ್ಯವಿವಾಹ ನಡೆಸುತ್ತಿರುವವರಿಗೆ ಕಾನೂನಿನ ಭಯವಿಲ್ಲವೇ? ಎಲ್ಲವೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಾಲ್ಯವಿವಾಹದಿಂದ ಆಗಬಹುದಾದ ತೊಂದರೆಗಳು, ಬಾಲ್ಯವಿವಾಹಕ್ಕೆ ಕೈಜೋಡಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಅರಿವು ಮಕ್ಕಳಿಗೆ ಹಾಗೂ ಹೆತ್ತವರಿಗೆ ಇದ್ದಾಗ ಮಾತ್ರ ಬಾಲ್ಯವಿವಾಹವನ್ನು ತಡೆಯಬಹುದಾಗಿದೆ. ಅಷ್ಟೇ ಅಲ್ಲ ಮಕ್ಕಳಿಗೆ ಜೀವನ ಶಿಕ್ಷಣವನ್ನು ನೀಡಬೇಕು. ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗೆಗಿನ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಇಡೀ ಸಮಾಜವೇ ಜಾಗೃತವಾದಾಗ ಮಾತ್ರ ಬಾಲ್ಯವಿವಾಹಕ್ಕೆ ಕಡಿವಾಣ ಹಾಕಬಹುದು.
ಒಂದೆರಡು ವಾರಗಳ ಹಿಂದೆಯಷ್ಟೇ, ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆಂದು ಬಂದಿದ್ದ ಹುಡುಗಿಗೆ ಆಕೆಯ ಆಧಾರ್ ಕಾರ್ಡಿನಲ್ಲಿರುವಂತೆ ಹದಿನೆಂಟು ವರ್ಷಗಳಾಗಿಲ್ಲವೆಂದು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆ ಹುಡುಗಿಯ ಗಂಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಹಾಗೆಯೇ ವಯಸ್ಸಿನ ದೃಢೀಕರಣಕ್ಕಾಗಿ ನಮ್ಮ ಶಾಲೆಗೆ ಪೊಲೀಸರು ಭೇಟಿಕೊಟ್ಟು ದಾಖಲಾತಿಯನ್ನು ಪರೀಕ್ಷಿಸಲಾಗಿ ಆ ಹುಡುಗಿಗೆ ಹತ್ತೊಂಬತ್ತು ವರ್ಷಗಳಾಗಿರುವುದು ಕಂಡುಬಂದು ಕೇಸು ವಜಾ ಗೊಂಡಿತಾದರೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಎಲ್ಲವೂ ಬಾಲ್ಯವಿವಾಹವನ್ನು ತಡೆಯುವಲ್ಲಿ ಕರ್ತವ್ಯಪರರಾಗಿರುವುದನ್ನ ಕಂಡು ಹೆಮ್ಮೆಯೆನಿಸಿತು.
shubhamangalamahesh@gmail.com