ಕೀರ್ತಿ
‘ಮಗಾ ಹೇಗಿದ್ದೀಯಾ?’ ಎಂದು ತಾಯಿ ತನ್ನ ಮಗನಿಗೆ ಮೆಸೇಜ್ ಕಳಿಸುವಾಗ ಬೆಳಗಿನ ಜಾವ ಮೂರರ ಹೊತ್ತು. ವಾಟ್ಸಾಪ್ ಸಂದೇಶವನ್ನು ಅವನಿನ್ನೂ ಕಂಡಿರಲಿಲ್ಲ. ಬೆಳಕು ಬಿದ್ದು, ಬಿಸಿಲಾಗುತ್ತಿದೆ ಎಂದಾಗ ಕರೆ ಮಾಡಿದಳು. ‘ಅಮ್ಮಾ…’ ಮಗನಾಡಿದ ಮಾತು. ಅಲ್ಲಲ್ಲ, ಒಂದೇ ಪದ. ಹೆಚ್ಚುವರಿ ಮಾತಿಗೆ ಅವಕಾಶವಿಲ್ಲದೆ, ಫೋನ್ ಕಟ್ ಆಯಿತು. ತಾಯಿಯ ಮನಸ್ಸೀಗ ನಿರಾಳ.
ಮಗ ಈಗ ಭಾರತೀಯ ಸೇನೆಯ ವಾಯುದಳದಲ್ಲಿ -ಯಿಂಗ್ ಆಫೀಸರ್. ಅಂಬೆಗಾಲು ಇಡುವುದನ್ನೇ ತಾನು ಕಾತರದಿಂದ ಕಾಯುತ್ತಿದ್ದ ಒಬ್ಬನೇ ಮಗ, ತನ್ನ ಮಗ ದೇಶ ಸೇವೆಗಾಗಿ ಆಗಸದಲ್ಲಿ ಗರುಡನಂತೆ ಹಾರಾಡುತ್ತಿದ್ದಾನೆ ಎಂದು ತಾಯಿಗೆ ವಿಶೇಷ ಹೆಮ್ಮೆ. ಚಿಕ್ಕಂದಿನಿಂದಲೂ ಅವನು ಬಹು ಚುರುಕಿನ ಹುಡುಗ. ಬರೀ ಓದುವುದಕ್ಕೆ ಮಾತ್ರ ಅಲ್ಲ. ಆಟಕ್ಕೂ ಸಂಗೀತಕ್ಕೂ ಅಷ್ಟೇ ಮಹತ್ವ ಕೊಡುತ್ತಿದ್ದ. ನಿತ್ಯವೂ ಟೆನ್ನಿಸ್ ಆಡುವುದನ್ನು, ಸೈಕಲ್ ಓಟವನ್ನು ತಪ್ಪಿಸುತ್ತಿರಲಿಲ್ಲ. ಶಾಲೆಗೆ ಹೇಗೆ ಹೋಗುತ್ತಿದ್ದನೋ, ಅಂತೆಯೇ ಸಂಗೀತ ತರಗತಿಗಳಿಗೂ ತಪ್ಪದೇ ಹಾಜರಾಗುತ್ತಿದ್ದ. ಹಾಡುವ ಕಡೆ ಗಮನಹರಿಸದೆ, ಅನೇಕ ವಾದ್ಯಗಳನ್ನು ಹೇಗೆ ನುಡಿಸಬೇಕೆಂದು ಕಲಿತ. ಇಂದಿಗೂ ಮನೆಗೆ ಬಂದಾಗೆಲ್ಲ ವಾದ್ಯಗಳೊಂದಿಗೆ ಕೆಲ ಹೊತ್ತು ಒಡನಾಡುತ್ತಾನೆ.
ತನಗೆ, ಈ ಮನೆಗೆ ಅವನೆಷ್ಟು ಆಧಾರವಾಗಿದ್ದ ಎನ್ನುವ ಚಿತ್ರಣಗಳೆಲ್ಲ ತಾಯಿಯ ಕಣ್ಣುಗಳಲ್ಲಿ ಅಚ್ಚೊತ್ತಿದಂತಿವೆ. ಮನೆಗೆಲಸ ಮಾಡಿಕೊಂಡು, ಮಕ್ಕಳ ಬುತ್ತಿ ಕಟ್ಟಿ, ದನಕರುಗಳನ್ನೆಲ್ಲ ನೋಡಿಕೊಳ್ಳುವುದು ತ್ರಾಸದಾಯಕವಾಗಿರುತ್ತಿತ್ತು. ಒಮ್ಮೆ ನೋಡಿದವನೇ, ‘ಹಾಲು ಕರೆದು, ಡೇರಿಗೆ ಕೊಟ್ಟು ಬಂದರೆ ನಿಂಗೆ ಸಹಾಯ ಆಗುತ್ತಲ್ವಾ ಅಮ್ಮಾ?’ ಕೇಳಿದ್ದಷ್ಟೇ ಅಲ್ಲ. ತಾಯಿಗೆ ನೆನಪಿರುವ ಪ್ರಕಾರ ಒಂದು ದಿನವೂ ತಪ್ಪಿಸಲಿಲ್ಲ. ಸೈಕಲ್‌ನಲ್ಲಿ ಒಂದಷ್ಟು ದೂರ ಸುತ್ತಾಡಿ ಬರುತ್ತಿದ್ದ ಮಗ, ಅಂದಿನಿಂದ ಡೇರಿಗೆ ಹೋಗುವುದನ್ನು ಕೆಲಸವೆಂದು ಭಾವಿಸದೆ, ತನ್ನ ಆಟದ ವಲಯಕ್ಕೆ ಅದನ್ನೂ ಸೇರಿಸಿಕೊಂಡ.
ಇವರಿದ್ದ ಮನೆಯ ಸುತ್ತ ಕಣ್ಣಾಡಿಸಿದರೆ ಬರೀ ಹಸಿರು. ಪ್ರಾಣಿ, ಪಕ್ಷಿಗಳ ಒಡನಾಟ ಸಹಜವಾಗಿಯೇ ಬೆಳೆಯಿತು. ಮನೆಯಲ್ಲಿದ್ದ ಅಕ್ವೇರಿಯಂನಲ್ಲಿ ಆಮೆ ಸಾಕಬಹುದೆಂದು ಅಮ್ಮನಲ್ಲಿ ಕೇಳಿದ್ದ. ಬೇಡವೆನ್ನುವುದಕ್ಕೆ ಇವರಿಗೂ ಮನಸ್ಸಾಗದೇ ಆಯಿತು ಎಂದಿದ್ದರು. ಮನೆಗೆ ಬಂದ ನೆಂಟರೊಬ್ಬರು ಮೀನುಗಳಿಗೆಂದು ಇಟ್ಟಿದ್ದ ಅಷ್ಟು ಆಹಾರವನ್ನೂ ಆ ನೀರಿಗೆ ಹಾಕಿದ್ದರು. ಮೀನು, ಆಮೆಗಳೆಲ್ಲ ಸತ್ತಿದ್ದವು! ಎಲ್ಲವನ್ನೂ ಒಂದೇ ಜಾಗದಲ್ಲಿ ಕೂಡಿಟ್ಟರೆ ಆಗಬಹುದಾದ ಅನಾಹುತದ ಅರಿವಾಗಿ, ಅದೇ ಕೊನೆ ಮತ್ತೆಂದೂ ಸಾಕಲಿಲ್ಲ. ಆದರೆ, ಹಕ್ಕಿಗಳನ್ನು ಕಾಣುವುದು, ಚಿಟ್ಟೆಯ ಓಡಾಟ ಗಮನಿಸುವ ಕುತೂಹಲ ಮಾತ್ರ ಅವನಲ್ಲಿ ಹಾಗೇ ಇದೆ.
ಶಾಲೆಯಲ್ಲಿ ನಡೆದ ಆ ಕತೆ ಹೇಳದಿದ್ದರೆ ಹೇಗೆ! ಅವನೆಂದರೆ ಎಲ್ಲ ಮಕ್ಕಳಿಗೂ ಮೆಚ್ಚು. ಯಾರೊಂದಿಗೂ ಜಗಳವಾಡುತ್ತಿರಲಿಲ್ಲ. ‘ಇದೇನೊ ಗೊತ್ತಾಗ್ಲಿಲ್ಲ ಕಣೋ’ ಎಂದರೆ ಮೀನಮೇಷ ಎಣಿಸದೇ ತನಗೆ ತಿಳಿದಷ್ಟನ್ನು ಹೇಳಿಕೊಡುತ್ತಿದ್ದ. ಹಾಗೆಂದು ಮನೆಗೆ ಬಂದು ಪಠ್ಯವನ್ನು ಬಾಯಿಪಾಠ ಮಾಡಿದ್ದನ್ನು ಕಂಡೇ ಇಲ್ಲ. ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿ, ಅವನೇ ಮುಂದಾಳತ್ವ ವಹಿಸುತ್ತಿದ್ದ. ಮಗನ ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದ್ದ ಶಿಕ್ಷಕಿಯೊಬ್ಬರು, ‘ಮುಂದೆ ಫ್ರೀಡಂ ಫೈಟರ್ ಆಗ್ತೀಯಾ?’ ಎಂದು ಕೇಳಿದ್ದರಂತೆ. ಬದುಕಿನ ಗಮ್ಯ ಅವನನ್ನು ಅಲ್ಲಿಗೆ ಕರೆದೊಯ್ದಿದೆ ಎಂದು ತಾಯಿ ಹೇಳುತ್ತಾರೆ.
ಅವನು ಇಂಜಿನಿಯರಿಂಗ್ ಓದುತ್ತಿದ್ದ. ಪದವಿಯ ಕೊನೆಯ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯುತ್ತಿದ್ದ ಸಂದರ್ಭ. ತಾನು ಸಂದರ್ಶನಕ್ಕೆ ಹೋಗಿ ಅಗತ್ಯ ಇರುವವರ ಕೆಲಸವನ್ನು ಕಿತ್ತುಕೊಳ್ಳಬಾರದೆಂದು, ‘ಅಮ್ಮಾ, ಕ್ಯಾಂಪಸ್ ಇಂಟರ್‌ವ್ಯೂ ಹೇಗಿರುತ್ತೆ ಅಂತ ಸುಮ್ನೆ ಒಂದನ್ನೇ ನೋಡ್ತೀನಿ’ ಎಂದಿದ್ದನಂತೆ. ಅವನ ಆದ್ಯತೆ ಮಾತ್ರ ದೇಶಸೇವೆಯೇ ಆಗಿತ್ತು. ವಾಯುದಳಕ್ಕೆ ಆಯ್ಕೆಗೊಂಡ ಮೇಲೆ ಟ್ರೈನಿಂಗ್‌ಗೆಂದು ಮಗನನ್ನು ಕಳುಹಿಸಿಕೊಡುವಾಗ ಹೆಮ್ಮೆ – ಆತಂಕ, ಗರ್ವ – ಕಳವಳ. ಈ ತಾಯಿಯ ಒಡಲಲ್ಲಿ ಅದೆಷ್ಟು ಭಾವಗಳು ಕರಗಿತ್ತೋ! ಟ್ರೈನಿಂಗ್ ಕಷ್ಟವಿರುತ್ತದೆ, ಜಯಿಸಬೇಕು ಎಂದು ಇಲ್ಲಿ ತಾಯಿ ಹೇಳುವುದಿಲ್ಲ. ಬದಲಿಗೆ ಮಗನೇ ತಾಯಿಯನ್ನು ಗಟ್ಟಿಗೊಳಿಸುತ್ತಿದ್ದ. ‘ದೇಶಕ್ಕೋಸ್ಕರ’ ಎಂದು ಇಬ್ಬರೂ ಪರಸ್ಪರ ಹೇಳಿಕೊಳ್ಳಲಾರಂಭಿಸಿದರು. ಆದರೂ ತಾಯಿಯ ಮಮತೆಗೆ ಎಣೆಯುಂಟೆ? ಮಗ ಊಟ ಮಾಡುತ್ತಿದ್ದಾನೋ ಇಲ್ಲವೋ ಎಂದು ಯೋಚಿಸುತ್ತಿರುವಾಗ ಇವರಿಗೊಂದು ಯೋಚನೆ ಹೊಳೆಯಿತು, ‘ಮಾಡಿ ಕಳುಹಿಸಿಕೊಟ್ಟರೆ ಹೇಗೆ?’ ಎಂದು. ಅವನಲ್ಲಿ ಕೇಳಿದರೆ, ತನ್ನಿಷ್ಟದ ತಿಂಡಿಯೊಂದನ್ನು ಹೇಳಿ ‘ಎಲ್ಲರಿಗೂ ಕೊಡಿಸಬೇಕು. ನೀನೀಗ ದುಡ್ಡು ಕೊಟ್ಟಿರು. ಆಮೇಲೆ ಒಟ್ಟು ಸೇರಿಸಿ, ಕೊಡ್ತೇನೆ’ ಎಂದ. ಮಗನ ಬುದ್ಧಿವಂತಿಕೆಗೆ ನಕ್ಕು, ಒಪ್ಪಿದ ತಾಯಿ, ಹೈದರಾಬಾದ್‌ನಿಂದ ದೆಹಲಿಗೆ ಟ್ರೈನ್‌ನಲ್ಲಿ ಹೊರಡುತ್ತಿದ್ದ ಮಗನ ಅರವತ್ತು ಸೈನಿಕ ಮಿತ್ರರಿಗೆಲ್ಲ ಅಲ್ಲಿಂದಲೇ ತಿಂಡಿ ತರಿಸಿಕೊಟ್ಟಿದ್ದರು.
ಅವನು ಇವತ್ತಿಗೂ ಮನೆಗೆ ಬಂದರೆ ಪರೋಟ, ಮೈಸೂರು ಪಾಕ್, ತುಪ್ಪ, ಚಟ್ನಿಪುಡಿಯನ್ನೆಲ್ಲ ಬುತ್ತಿ ಕಟ್ಟಿಸಿಕೊಂಡು ಹೊರಡುತ್ತಾನೆ. ಅವುಗಳನ್ನೆಲ್ಲ ಸೈನ್ಯದ ಮೆಸ್‌ಗೆ ನೀಡಿ, ಊಟದ ವೇಳೆಯಲ್ಲಿ ಎಲ್ಲರೊಂದಿಗೆ ಹಂಚಿ ತಿನ್ನುವುದೇ ಖುಷಿ ಮಗನಿಗೆ ಎಂದು ಈ ತಾಯಿಗೆ ಸಂಭ್ರಮ. ಉತ್ತರ ಭಾರತದಲ್ಲಿ ಬಹುತೇಕ ಎಲ್ಲ ಸಿಹಿತಿನಿಸುಗಳೂ ಸಿಗುತ್ತವೆ. ಆದರೆ ಮೈಸೂರಿನಲ್ಲಿ ಸಿಗುವ ಮೈಸೂರು ಪಾಕ್ ರುಚಿ, ಮತ್ತೆಲ್ಲೂ ಸಿಗದು ಎಂದು ಮಗ ಹೇಳುತ್ತಲಿರುತ್ತಾನೆ. ಅದಕ್ಕಾಗಿ ಮೈಸೂರು ಪಾಕ್ ಕಳಿಸಿಕೊಡು ಎಂದು ಅವತ್ತು ಬೇಡಿಕೆ ಸಲ್ಲಿಸಿದ್ದ. ಬೇಡಿಕೆಯ ಪಟ್ಟಿಯಲ್ಲಿ ನಿಯಮಗಳೂ ಸೇರಿದ್ದವು. ಇಪ್ಪತ್ತು ಕೆ.ಜಿ. ಮೈಸೂರು ಪಾಕ್‌ನ್ನು ಬಿಡಿಯಾಗಿ ಪ್ಯಾಕ್ ಮಾಡಬೇಕಿತ್ತು. ಬಿಡಿಯಾಗಿದ್ದನ್ನು ಇಡಿಯಾಗಿ ಒಟ್ಟು ಸೇರಿಸಿ, ಮತ್ತೆರಡು ಪ್ಯಾಕ್ ಮಾಡಿ, ಚೂರೇ ಚೂರು ತುಪ್ಪದ ಪಸೆ ತಾಕದಂತೆ ಜಾಗೃತೆಯಿಂದ ಹೊಂದಿಸಿಡಬೇಕಿತ್ತು. ಅದಿರಲಿ, ಅಂಚೆಯಲ್ಲಿ ಇಂದು ಕಳಿಸಿದರೆ, ಮಗನ ಕೈಸೇರಲು ಕನಿಷ್ಠ ನಾಲ್ಕು ದಿನಗಳಾದರೂ ಬೇಕು. ಹಾಗಾಗಿ, ಮೈಸೂರು ಪಾಕ್ ಮಾಡುವಲ್ಲಿಗೇ ಹೋಗಿ ತಂದಿದ್ದು ಸವಾಲೆನಿಸಿದರೂ ಮಗನಿಗಾಗಿ ಎಲ್ಲವೂ ಸೈ. ಸಿಹಿ ಸವಿದ ಮಗ ಮತ್ತವನ ಗೆಳೆಯರು ಖುಷಿಗೊಂಡಿದ್ದು ತಾಯಿಯ ಪಾಲಿಗೆ ಮಧುರ ಕ್ಷಣ. ಸಾಮಾಜಿಕ ಜಾಲತಾಣ, ಮಾಧ್ಯಮಗಳನ್ನು ನೋಡಬೇಡ ಎಂದು ಮಗ ಆಗಾಗ ಬುದ್ಧಿ ಹೇಳುತ್ತಲೇ ಇರುತ್ತಾನೆ. ‘ಬಿ ಪಾಸಿಟಿವ್’ ಎಂಬ ಸೂತ್ರ ಮಕ್ಕಳಿಂದಲೇ ಕಲಿತಿದ್ದಾರೆ. ‘ಮಗ ಅನ್ನೋ ಮಮಕಾರ ಖಂಡಿತಾ ಇದೆ. ಆದ್ರೆ ಇವನೊಬ್ನೇ ಅಲ್ವಲ್ಲಾ, ಇವನ ಜೊತೆಗಿರುವ ಎಲ್ಲರೂ ಭಾರತೀಯರೇ. ದೇಶಕ್ಕಾಗಿ ಕೆಲ್ಸ ಮಾಡ್ತಿದ್ದಾರೆ ಅನ್ನೋ ಅಭಿಮಾನ ಇದೆ’ ಎನ್ನುತ್ತಾರೆ, ದೇಶ ಕಾಯ್ವ ಸೈನಿಕನ ತಾಯಿ.
” ಮಗನ ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದ್ದ ಶಿಕ್ಷಕಿಯೊಬ್ಬರು, ‘ಮುಂದೆ ಫ್ರೀಡಂ ಫೈಟರ್ ಆಗ್ತೀಯಾ?’ ಎಂದು ಕೇಳಿದ್ದರಂತೆ. ಬದುಕಿನ ಗಮ್ಯ ಅವನನ್ನು ಅಲ್ಲಿಗೆ ಕರೆದೊಯ್ದಿದೆ”





