-ಸಿ.ಎಂ.ಸುಗಂಧರಾಜು
ನಂಜನಗೂಡು ತಾಲ್ಲೂಕಿನ ಚುಂಚನಕಟ್ಟೆ ನಮ್ಮ ತಂದೆಯವರ ಹುಟ್ಟೂರು. ಅಲ್ಲಿ ಮೊನ್ನೆಯಷ್ಟೇ ಮಹದೇಶ್ವರ ಜಾತ್ರಾ ಮಹೋತ್ಸವ
ಅದ್ಧೂರಿಯಾಗಿ ನಡೆಯಿತು. ಗ್ರಾಮೀಣ ಭಾಗಗಳಲ್ಲಿ ಹಬ್ಬ-ಹರಿದಿನಗಳು, ಜಾತ್ರೆ-ಮಹೋತ್ಸವಗಳು ಹೆಚ್ಚು ಜನರನ್ನು ಆಕರ್ಷಿಸಿ ಒಂದೆಡೆ ಸೇರಿಸುವ
ಕಾರ್ಯಕ್ರಮಗಳಾಗಿವೆ. ಅದರಲ್ಲಿಯೂ ಜಾತ್ರೆ ಎಂದಾಕ್ಷಣ ಗ್ರಾಮೀಣ ಭಾಗದ ಯುವಕರಿಗೆ ನೆನಪಾಗುವುದು ಅಜ್ಜನೊಂದಿಗೆ ಜಾತ್ರೆ ನೋಡಿದ ಬಾಲ್ಯದ ನೆನಪು. ಚುಂಚನಕಟ್ಟೆಯ ಜಾತ್ರೆಗೆ ಬಾಲ್ಯದಲ್ಲಿ ನಮ್ಮ ತಾತನೊಂದಿಗೆ ನಾನು ಹೋಗದಿದ್ದರೂ ಈಗ ಜಾತ್ರೆ ನೋಡಿದಾಕ್ಷಣ ನೆನಪಾಗಿದ್ದು, ನನ್ನ ಅಜ್ಜನೇ.
ನಂಜನಗೂಡು ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಅನೇಕ ಜಾತ್ರೆಗಳಿಗೆ ನಾನು ತಾತನೊಂದಿಗೆ ಹೋಗಿದ್ದೇನೆ. ಆ ಜನಸಂದಣಿಯ ನಡುವೆ ತಾತನ ಹೆಗಲೇರಿ ರಥೋತ್ಸವ ಕಣ್ತುಂಬಿಕೊಂಡಿದ್ದೇನೆ. ಇವೆಲ್ಲ ನೆನಪಾಗಿದ್ದು, ಚುಂಚನಕಟ್ಟೆ ಮಹದೇಶ್ವರ ಜಾತ್ರೆಗೆ ಹೋಗಿದ್ದಾಗ.
ತಾತನ ಹೆಗಲು ಹೆಗಲೇರಿ ಜಾತ್ರೆಗೆ ಹೋಗುತ್ತಿದ್ದ ನನಗೆ, ತಾತ ಮೊದಲು ದೇವಾಲಯ ತೋರಿಸುತ್ತಿದ್ದ. ದೇವರಿಗೆ ಕೈಮುಗಿಸಿ ರಥೋತ್ಸವ ಚೆನ್ನಾಗಿ ಕಾಣುವಂತಹ ಎತ್ತರದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಹೆಗಲ ಮೇಲೆ ಕೂರಿಸಿಕೊಂಡು ರಥೋತ್ಸವ ತೋರಿಸುತ್ತಿದ್ದ. ರಥೋತ್ಸವ ಹೊರಟಾಗ ‘ಕೈ ಮುಕ್ಕ ಮಗ’ ಎಂದು ಹೇಳುತ್ತಾ ತಾನೂ ನಮಿಸಿ ನಮಗಾಗಿ ಬೇಡಿಕೊಳ್ಳುತ್ತಿದ್ದ.
ನಮ್ಮ ಧಾರ್ಮಿಕ ಕಾರ್ಯಕ್ರಮಗಳು, ಆಚಾರ-ವಿಚಾರಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಲ ಉರುಳಿದಂತೆ ಆಚರಣೆ ಪದ್ಧತಿಯಲ್ಲಿ
ಬದಲಾವಣೆಯಾಗಿದ್ದರೂ, ಆಚರಣೆಗಳು ಮುಂದುವರಿದಿವೆ. ಈ ಎಲ್ಲ ಆಚರಣೆಗಳನ್ನೂ ಮಕ್ಕಳಿಗೆ ಪರಿಚಯಿಸುವವರೇ ಅಜ್ಜಂದಿರು. ಮುಂದಿನ ಪೀಳಿಗೆಗೆ ಆಚಾರ-ವಿಚಾರಗಳನ್ನು ಪರಿಚಯಿಸಿ ಕಲೆ, ಸಂಸ್ಕೃತಿಯನ್ನುಉಳಿಸುವುದರಲ್ಲಿ ಹಿರಿಯರ ಮಾರ್ಗದರ್ಶನವನ್ನು ಕಡೆಗಣಿಸುವಂತಿಲ್ಲ.
ಗ್ರಾಮೀಣ ಭಾಗದಲ್ಲಿ ಹಬ್ಬ ಜಾತ್ರೆ ಎಂದರೆ ಸಡಗರ ಸಂಭ್ರಮ ಮನೆ ಮಾಡಿರು ತ್ತದೆ. ಕಳೆದ 25 ವರ್ಷಗಳ ಹಿಂದೆ ಒಂದು ತುತ್ತು ಅನ್ನಕ್ಕೂ ಪರದಾಟವಿತ್ತು. ವರ್ಷಕ್ಕೊಮ್ಮೆ ಬರುವ ಜಾತ್ರೆಗೆ ಹೊಸ ಬಟ್ಟೆ ಧರಿಸಿ ಸಂತೋಷ ಪಡುತ್ತಿದ್ದ ನಾವು, ವರ್ಷವಿಡಿ ಒಂದೆರಡು ಜೊತೆ ಬಟ್ಟೆಯಲ್ಲಿಯೇ ಕಾಲ ಕಳೆಯುತ್ತಿದ್ದೆವು.
ಜಾತ್ರೆಯ ದಿನ ನಮ್ಮ ಸಂಭ್ರಮವನ್ನು ಇಮ್ಮಡಿ ಗೊಳಿಸುತ್ತಿದ್ದವರೇ ನಮ್ಮ ಅಜ್ಜ-ಅಜ್ಜಿಯರು. ಜಾತ್ರೆಯ ಖರ್ಚಿಗೆಂದು ಅವರು ಕೊಡುತ್ತಿದ್ದ ಒಂದು ರೂಪಾಯಿ ಹಿಡಿದು ಜಾತ್ರೆಯಲ್ಲಿ ಬೇಕಾದನ್ನು ಖರೀದಿಸಿ ಸಂಭ್ರಮಿ ಸುತ್ತಿದ್ದೆವು. ಈಗ ಜೇಬಲ್ಲಿ ಸಾವಿರಾರು ರೂ. ಇದ್ದರೂ ಆ ಸಂತೋಷವೇ ಇಲ್ಲ.
ಜಾತ್ರೆಯ ತಿಂಡಿಗಳು ಎಂದರೆ ನನಗೆ ಬಲು ಇಷ್ಟ, ತಾತ ಕೊಡಿಸುವವರೆಗೂ ಬಿಡದೆ ಕಾಡಿ ಕೊನೆಗೂ ಜಾಹಂಗೀರ್, ಕಡ್ಲೇಪುರಿ ಕೊಂಡು ತಿಂದು ಮನೆಗೆ
ಹೋಗುತ್ತಿದ್ದವು. ಈ ತಿಂಡಿಗಳಿಗಾಗಿ ನಾವು ಮುಂದಿನ ಜಾತ್ರೆಯನ್ನೇ ಕಾಯಬೇಕಿತ್ತು.
ಈಗ ಕಾಲ ಬದಲಾಗಿದೆ. ತಂದೆ ತಾಯಿಯನ್ನೇ ಊರಲ್ಲಿ ಬಿಟ್ಟು ನಗರಗಳಲ್ಲಿ ವಾಸಿಸುವ ಜನರಿಗೆ ಅಜ್ಜಿ-ಅಜ್ಜ, ಜಾತ್ರೆ, ಹಬ್ಬದ ಸಂಭ್ರಮ ನೆನಪಾಗುವುದಾ
ದರೂ ಹೇಗೆ? ಸಂಭ್ರಮದ ಕ್ಷಣಗಳನ್ನು ಸದಾ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವುದರಲ್ಲೇ ಜನರು ಉತ್ಸಾಹಿಗಳಾಗಿದ್ದಾರೆಯೇ ವಿನಾ, ಕುಟುಂಬದೊಂದಿಗೆ ಸಮಯ ಕಳೆಯಬೇಕು ಎಂಬುದನ್ನೇ ಮರೆತ್ತಿದ್ದಾರೆ. ತಾತ -ಮೊಮ್ಮಕ್ಕಳ ಬಾಂಧವ್ಯದ ಕೊಂಡಿ ಕಳಚುತ್ತಿರುವುದನ್ನು
ನೋಡಿದರೆ ಮುಂದಿನ ದಿನಗಳಲ್ಲಿ ಹಿರಿಯರಿಗೆ ಆಸರೆ ಇಲ್ಲದಂತಾಗ ಬಹುದು ಎಂಬ ಆತಂಕ ಸೃಷ್ಟಿಯಾಗುವುದು ಖಂಡಿತ.
cmsugandharaju@gmail.com