Mysore
24
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಸುಸ್ಥಿರ ಆದಾಯ ಬೇಕೇ? ಸಮಗ್ರ ತೋಟಗಾರಿಕೆ ಕೈಗೊಳ್ಳಿ

ರಮೇಶ್ ಪಿ. ರಂಗಸಮುದ್ರ
ಒಂದು ಕಾಲದಲ್ಲಿ ನಮ್ಮ ದೇಶವು ಪಾರಂಪರಿಕ ಕೃಷಿ ಪದ್ಧತಿಯನ್ನು ಅನುಸರಿ ಸುತ್ತಿದ್ದಾಗ ಕೃಷಿಯಲ್ಲಿ ಬಹುಬೆಳೆಗಳ ಜತೆಗೆ ಕೃಷಿಗೆ ಪೂರಕವಾಗಿ ಹಸು, ಕುರಿ, ಮೇಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬು ಗಳಿಂದ ಸುಸ್ಥಿರವಾದ ಆದಾಯವನ್ನು ಪಡೆದು ‘ಕೃಷಿ ನಂಬಿದವರಿಗೆ ದುರ್ಭಿಕ್ಷವೇ ಇಲ್ಲ’ ಎನ್ನುವ ನಾಣ್ಣುಡಿಯಂತೆ ವಿಶ್ವಕ್ಕೆ ಮಾದರಿಯಾಗಿತ್ತು.

ಈಗ ಬಹು ಬೆಳೆ ಪದ್ಧತಿಯನ್ನು ಕೈಬಿಟ್ಟು, ಏಕ ಬೆಳೆ ಪದ್ಧತಿಯನ್ನು ಅನುಸರಿಸುವ ಜತೆಗೆ ಮಣ್ಣಿಗೆ ವಿಪರೀತ ರಾಸಾಯನಿಕ ಗೊಬ್ಬರ ಗಳನ್ನು ಸುರಿದು ಭೂಮಿಯ ಫಲವತ್ತತೆಯನ್ನು ಹಾಳು ಮಾಡಲಾಗಿದೆ. ಇದರಿಂದ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗಿ ಕೃಷಿ ನಷ್ಟದ ಕ್ಷೇತ್ರವೆಂದು ಅನೇಕ ರೈತರು ಕೃಷಿಯನ್ನು ಕೈಬಿಟ್ಟು ಜಮೀನು ಮಾರಿ ಪಟ್ಟಣ ಸೇರಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡ ಸರ್ಕಾರಗಳು ಸಮಗ್ರ ಸಾವಯವ ಕೃಷಿಯನ್ನು ಅಳವಡಿಸಿಕೊಂಡಾಗ ಕೃಷಿ ಕ್ಷೇತ್ರ ಆದಾಯದತ್ತ ಸಾಗಿತ್ತು. ಅನೇಕ ಕೃಷಿಕರು ತೆಂಗು, ಹಣ್ಣಿನ ಗಿಡಗಳು, ಅಡಕೆ ಬೆಳೆಯುವ ಉತ್ಸಾಹ ತೋರಿದರು. ಆದರೆ ತೆಂಗಿನ ಬೆಲೆ ಕುಸಿದ ಪರಿಣಾಮ ಕೇವಲ ತೆಂಗು, ಹಣ್ಣಿನ ತೋಟ ಮಾಡಿದವರಿಗೆ ನಿರಾಸೆ ಕಾಡತೊಡಗಿ ತೆಂಗಿನ ತೋಟವನ್ನು ತೆಗೆದು, ಭೂಮಿಯ ಇಳುವರಿ ಯನ್ನೂ ಕಳೆದುಕೊಂಡು ಕಂಗೆಟ್ಟು ಕುಳಿತರು.

ಇಂತಹ ಸಂದರ್ಭದಲ್ಲಿ ಮತ್ತೆ ವರವಾಗಿ ಕಾಣಿಸಿದ್ದು, ಸಮಗ್ರ ತೋಟಗಾರಿಕಾ ಪದ್ಧತಿ. ವಿಶೇಷವಾಗಿ ತೆಂಗಿನ ತೋಟಗಳನ್ನು ಮಾಡುವವರು ಒಂದು ಎಕರೆ ತೆಂಗಿನ ತೋಟದಲ್ಲಿ ಯಾವೆಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ತಿಳಿದು ಕೊಂಡು ಅವುಗಳನ್ನು ವೈಜ್ಞಾನಿಕವಾಗಿ ಬೆಳೆದರೆ ತೆಂಗಿನ ತೋಟಗಳಿಂದ ಖಂಡಿತವಾಗಿಯೂ ಸುಸ್ಥಿರ ಆದಾಯ ಗಳಿಸಬಹುದು.

ಮಾದರಿ ಸಮಗ್ರ ತೋಟ ಗಾರಿಕಾ ಪದ್ಧತಿ: ಒಂದು ಎಕರೆ ಭೂಮಿಯಲ್ಲಿ ಸಮಗ್ರ ತೋಟ ಗಾರಿಕಾ ಪದ್ಧತಿ ಅಳವಡಿಸಿ ಕೊಳ್ಳುವ ಮೂಲಕ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಯುವ ಮೂಲಕ ಅರಣ್ಯ ಕೃಷಿ ಮಾಡಬಹುದು. ಹೇಗೆ ಅನ್ನುತ್ತೀರಾ. . .
೧ ಎಕರೆಯ ಭೂಮಿಯಲ್ಲಿ ಪ್ರತಿ ಗುಂಟೆಗೊಂದರಂತೆ ೪೦ ತೆಂಗಿನ ಮರಗಳನ್ನು ಬೆಳೆಸುವುದು. ಪ್ರತಿ ನಾಲ್ಕು ತೆಂಗಿನ ಮರಗಳ ಮಧ್ಯೆ ೩ ಸಾಲಿನಲ್ಲಿ ೧೨ ಸೀಬೆಗಿಡ, ೨ ಸಾಲಿನಲ್ಲಿ ೮ ಸಪೋಟಾ ಗಿಡಗಳು, ೪ ವಿವಿಧ ಜಾತಿಯ ಮಾವಿನ ಗಿಡ, ೩ ರಾಮ ಫಲ, ೩ ಲಕ್ಷ ಣ ಫಲ, ೩ ಹನುಮ ಫಲ, ೩ ಸೀತಾ ಫಲ, ೩ ಜಂಬು ನೇರಳೆ, ೩ ವಿವಿಧ ಜಾತಿಯ ಹಲಸು, ಪೂರ್ವ ಪಶ್ಚಿಮವಾಗಿ ೮ ಸಾಲು ತೇಗ, ಪೂರ್ವ ಪಶ್ಚಿಮ ೮ ಸಾಲು ಹೆಬ್ಬೇವು, ೫ ದಾಳಿಂಬೆ ಜತೆಗೆ ೫ ಬೆಣ್ಣೆ ಹಣ್ಣು ಮತ್ತು ೫ ನೆಲ್ಲಿಕಾಯಿ ಸಸಿಗಳನ್ನು ನೆಟ್ಟು ಬೆಳೆಸಬಹುದು. ಇನ್ನು ಹಸು, ಕುರಿ, ಮೇಕೆಗಳಿಗಾಗಿ ೧೦ ಅಗಸೆ, ೧೦ ನುಗ್ಗೆ, ೩೦ ಹಿಪ್ಪು ನೇರಳೆ, ೩೦ ಸುಬಾಬುಲ್, ೧೦ ಗ್ಲಿರಿಸಿಡಿಯಾಗಳನ್ನು ಬೆಳೆಯಬಹುದು.

ಹೀಗೆ ೧ ಎಕರೆ ತೋಟದಲ್ಲಿ ೨ ಗುಂಟೆಯಲ್ಲಿ ತೋಟದ ಮನೆ, ೨ ಗುಂಟೆ ಯಲ್ಲಿ ಹಸು, ಕುರಿ, ಕೊಟ್ಟಿಗೆ. ನಾಟಿಕೋಳಿ ಶೆಡ್ ನಿರ್ಮಿಸಿಕೊಂಡು ಉಳಿದ ೧೦-೧೨ ಗುಂಟೆಯಲ್ಲಿ ವಿವಿಧ ಜಾತಿಗಳ ಬಹುವಾರ್ಷಿಕ ಹುಲ್ಲು, ದ್ವಿದಳ ಧಾನ್ಯಗಳನ್ನು ಬೆಳೆಯಬಹುದು. ಹೀಗೆ ಯೋಜಿಸಿಕೊಂಡು ತೆಂಗು ಎತ್ತರಕ್ಕೆ ಬೆಳೆದಂತೆ, ಜಾಯಿಕಾಯಿ, ಲವಂಗಾ, ಏಲಕ್ಕಿ, ಚಕ್ಕೆ, ಪಲಾವ್ ಎಲೆ, ಸುತ್ತಲಿನ ಮರಗಳಿಗೆ ಹಬ್ಬಿಸಲು ಕಾಳುಮೆಣಸು ಜತೆಗೆ ವಿವಿಧ ಬಗೆಯ ಹೂಗಳನ್ನೂ ಬೆಳೆದುಕೊಳ್ಳಬಹುದು.

ಸಮಗ್ರ ತೋಟಗಾರಿಕಾ ಪದ್ಧತಿಯ ಅನುಕೂಲಗಳು
೧. ಸಸ್ಯ ವೈವಿಧ್ಯತೆಯಿಂದ, ರೋಗ, ಕೀಟ ಬಾಧೆ, ಕಳೆ ನಿಮೂಲನೆಯಾಗುತ್ತದೆ.
೨ .ವೈವಿಧ್ಯಮಯವಾದ ಒಣಎಲೆ, ತರಗು ಗಳಿಂದ ಮಣ್ಣಿಗೆ ಮುಚ್ಚಿಗೆ ದೊರೆಯುತ್ತದೆ.
೩. ಸೂರ್ಯನ ಬಿಸಿಲಿನಿಂದ ಮಣ್ಣಿಗೆ ನೆರಳಾಗುತ್ತದೆ. ಇದರಿಂದ ಮಣ್ಣಿನಲ್ಲಿ ಜೈವಿಕ ಕ್ರಿಯೆ ಉಂಟಾಗಿ ಸೂಕ್ಷಾ ಣು ಜೀವಿಗಳ ಸಂಖ್ಯೆ ವೃದ್ಧಿಯಾಗುತ್ತದೆ. ತೇವಾಂಶವೂ ಹೆಚ್ಚುವುದರಿಂದ ಬೆಳೆಗಳಿಗೂ ಪೂರಕವಾಗಿರುತ್ತದೆ.
೪. ಹಸು, ಕುರಿ, ಮೇಕೆ, ಕೋಳಿ ಗೊಬ್ಬರಗಳಿಂದ ಇಡೀ ತೋಟ ರಾಸಾಯನಿಕ ಮುಕ್ತವಾಗಿರುತ್ತದೆ.
೫. ತೋಟಗಾರಿಕಾ ಬೆಳೆಗಳ ಜತೆಗೆ ಪಶು ಪಾಲನೆ, ಕುರಿ, ಮೇಕೆ, ಕೋಳಿಗಳ ಸಾಕಾಣಿಯಿಂದಾಗಿ ಕುಟುಂಬದ ಅಗತ್ಯವನ್ನು ಪೂರೈಸಿಕೊಂಡು ಹೆಚ್ಚಿನ ಆದಾಯವನ್ನು ಪಡೆಯಬಹುದಾ ಗಿದ್ದು, ಶುದ್ಧ ಪರಿಸರದಲ್ಲಿ ಆರೋಗ್ಯ ಕರ ಜೀವನವನ್ನು ಸಾಗಿಸಬಹುದು.
೬. ಇಂತಹ ಮಾದರಿ ೧ ಎಕರೆ ತೋಟದಲ್ಲಿ ೩-೪ ಲಕ್ಷ ರೂ. ಗಳಷ್ಟು ಆದಾಯವನ್ನು ಖಚಿತವಾಗಿ ಪಡೆದುಕೊಂಡು ಸುಖೀಜೀವನವನ್ನು ರೂಪಿಸಿಕೊಳ್ಳಬಹುದು.

ಸಮಗ್ರ ತೋಟಗಾರಿಕಾ ಪದ್ಧತಿಯಲ್ಲಿ ಹಸು, ಕುರಿ, ಮೇಕೆ, ಕೋಳಿಗಳನ್ನು ಸಾಕಬಹುದು. ಜತೆಗೆ ತೋಟದೊಳಗೆ ಸುಂದರವಾದ ಮನೆ, ಕೊಟ್ಟಿಗೆಗಳನ್ನು ನಿರ್ಮಿಸಿ ಹತ್ತಾರು ಬಗೆಯ ಸರ್ವಋತು ಹಣ್ಣುಗಳನ್ನು, ಹೂ-ತರಕಾರಿಗಳನ್ನು ಬೆಳೆದುಕೊಂಡು ಉತ್ತಮ ಆದಾಯ ಗಳಿಸಬಹುದು.

 

Tags:
error: Content is protected !!