Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಣ್ಣು ಸಾಯದ ಹಾಗೆ ನೋಡಿಕೊಳ್ಳಿ

• ಡಿಎನ್ ಹರ್ಷ
ಹೆಚ್ಚಿನ ಜನರು ಹೆಣ್ಣು, ಹೊನ್ನು ಮತ್ತು ಮಣ್ಣನ್ನು ಬಯಸುತ್ತಾರೆ ಎಂಬ ಮಾತಿದೆ. ಹಾಗೆಯೇ ಮಣ್ಣ ಸತ್ವ ಕಳೆದುಕೊಂಡು ಕಲುಷಿತವಾಗು ತ್ತಿದೆ ಎಂಬ ಮಾತೂ ಇದೆ. ಸಕಲ ಜೀವ ರಾಶಿಗೂ ಆಧಾರ ಮಣ್ಣು. ಅನ್ನ ಬೆಳೆಯುವ ರೈತನಿಗೆ ಮಣ್ಣೆ ಹೊನ್ನು, ಮಣ್ಣು ಫಲವತ್ತಾಗಿದ್ದಷ್ಟು ಬೆಳೆಗಳು ಉತ್ತಮವಾಗಿ ಬರುತ್ತವೆ.

ಆದರೆ ಮಣ್ಣಿನ ಮಹತ್ವ ಅರಿಯದ ಇಂದು ನಾವು ರಾಸಾಯನಿಕಗಳನ್ನು ಮಣ್ಣಿಗೆ ಹಾಕಿ ಮಣ್ಣನ್ನು ಮಾಲಿನ್ಯ ಮಾಡುತ್ತಿದ್ದೇವೆ. ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಸ್ಥಿತಿ ಗತಿಗಳನ್ನು ಅರಿತುಕೊಳ್ಳಬೇಕು.

ಹಿರಿಯರು ಈಗಿನ ಕಾಲದ ಯಾವುದೇ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳದೆ ತಮ್ಮ ಅನುಭವದಿಂದಲೇ ಜಮೀನಿನ ಮಣ್ಣಿನ ಸತ್ವ ವನ್ನು ಅರಿತು ಕೃಷಿ ಮಾಡುತ್ತಿದ್ದರು.

ಮಣ್ಣಿನಲ್ಲಿ ಮುಖ್ಯವಾಗಿ ಭೌತಿಕ, ಜೈವಿಕ ಮತ್ತು ರಾಸಾಯನಿಕ ಎಂಬಮೂರುಗುಣಗಳಿರುತ್ತವೆ. ಹಿಂದೆ ನಮ್ಮ ಹಿರಿಯರು ಭೂಮಿ ಯನ್ನು ಗೌರವಿಸುವ ಸಲುವಾಗಿ ತೋಟಗಳಿಗೆ ಪಾದರಕ್ಷೆಗಳನ್ನು ಧರಿಸದೆ ಹೋಗುತ್ತಿದ್ದರು. ಈ ರೀತಿ ಬರಿಗಾಲಿನಲ್ಲಿ ನಡೆಯುವ ಮೂಲಕ ಮಣ್ಣಿನ ಭೌತಿಕ ಸ್ಥಿತಿಯನ್ನು ಅರಿಯುತ್ತಿದ್ದರು. ಬರಿಗಾಲಿ ನಲ್ಲಿ ನಡೆಯುವುದರಿಂದ ಮಣ್ಣು ಗಟ್ಟಿಯಾಗಿ ಕಾಲಿಗೆ ಚುಚ್ಚುವಂತಿದ್ದರೆ ಅದು ಅನುತ್ಪಾದಕ ಮಣ್ಣು ಎಂದು, ಮೃದುವಾಗಿದ್ದು ಸ್ಪಂಜಿನ ರೀತಿ ಇದ್ದರೆ ಉತ್ಪಾದಕಮಣ್ಣು ಎಂದು ತಿಳಿದುಕೊಳ್ಳುತ್ತಿದ್ದರು.

ಎರಡನೆಯದಾಗಿ, ತೋಟ ಅಥವಾಭೂಮಿಯ ನಾಲ್ಕು ಬದಿಗಳಲ್ಲಿ ಮಣ್ಣನ್ನು ಸ್ಪರ್ಶ ಮಾಡಿ ಕೈಯಿಂದ ತೆಗೆಯಬೇಕು. ಸುಲಭವಾಗಿ ಅರ್ಧ ಅಡಿ ಅಥವಾ ಒಂದು ಅಡಿ ತೆಗೆಯುವಂತಿದ್ದರೆ ಉತ್ತಮ ಮಣ್ಣು ಎಂದರ್ಥ. ಗಟ್ಟಿಯಾಗಿದ್ದರೆ ಮಣ್ಣನ್ನು ತೆಗೆಯಲು ಗುದ್ದಲಿ ಬಳಸುವಂತಿದ್ದರೆ ಅದು ನಿರ್ಜೀವ ಮಣ್ಣು ಎಂದರ್ಥ.

ಮೂರನೆಯದಾಗಿ, ಕೈಯಿಂದ ತೆಗೆದ ಮಣ್ಣನ್ನು, ಮುಂಗೈ ಹಿಡಿಯಲ್ಲಿ ಅದುಮಿದರೆ ಮೃದುವಾಗಿದ್ದು ಚಹ ಪುಡಿ ಅಥವಾ ಎರೆಹುಳು ಗೊಬ್ಬರದ ರೀತಿ ಅನುಭವನೀಡಿದರೆ ಅದನ್ನು ಜೀವಂತಮಣ್ಣು ಎಂದು, ಗಟ್ಟಿಯಾಗಿದ್ದು ಅಥವಾ ಗಮ್ ರೀತಿ ಅಂಟು ಅಂಟಾ ಗಿದ್ದರೆ ಡೆಡ್ ಸಾಯಿಲ್ ಎಂದು ಪರಿಗಣಿಸ ಬಹುದು. ನಾಲ್ಕನೆಯದಾಗಿ ಕೈಯಿಂದ ಮಣ್ಣನ್ನು ಬಿಡಿಸುವಾಗ ಹೆಚ್ಚು ಹೆಚ್ಚು ಬಿಳಿ ಬೇರುಗಳು ಕಂಡು ಬಂದ್ರೆ ಅದು ಉತ್ಪಾದಕ ಮಣ್ಣು ಎಂದರ್ಥ. ಮಣ್ಣು ಗಟ್ಟಿಯಾಗಿದ್ದರೆ ಸೂಕ್ತ ಆಮ್ಲ ಜನಕ ದೊರೆಯದೆ ಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ ಹೆಚ್ಚು ವಾರದ ಬೇರು ಇಲ್ಲದ ಮಣ್ಣನ್ನು ನಿರ್ಜೀವ ಕೃಷಿ ಅಂಕಣ ಮಣ್ಣು ಎಂದು ಪರಿಗಣಿಸಬಹದು. ಐದನೆಯದಾಗಿ ಮಣ್ಣಿಗೆ ನೀರು ಸುರಿ ದಾಗ ಹಿಂಗಬೇಕು. ಆಗಿದ್ದರೆ ಅದು ಜೀವಂತ ಮಣ್ಣು. ಹಿಂಗದೆ ಹೋದರೆ ನಿರ್ಜೀವ ಮಣ್ಣು ಎಂದು ಅರಿತುಕೊಳ್ಳಬಹುದು. ಮೇಲೆ ತಿಳಿಸಿದ ಐದೂ ರೀತಿಯ ಭೌತಿಕ ಗುಣಗಳು ಇದ್ದರೆ ಮಣ್ಣನ್ನು ಜೀವಂತ ಎಂದು ಪರಿಗಣಿಸಿ ಕೃಷಿ ಮಾಡಲು ಯೋಗ್ಯ ವಾಗಿದೆ ಎಂದು ಭಾವಿಸಬಹುದು.

ಇನ್ನು ಜೈವಿಕ ಗುಣದ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಒಂದು ಗ್ರಾಂ ಜೀವಂತ ಮಣ್ಣಿ ನಲಿ 2 ಕೋಟಿ 90 ಲಕ್ಷ ಸೂಕ್ಷ್ಮಾಣು ಜೀವಿಗಳು ಇರುತ್ತವೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಎಲ್ಲ ಕೃಷಿಕರು ಮಣ್ಣನ್ನು ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಲು ಹೋಗುವುದಿಲ್ಲ. ತಮ್ಮ ತೋಟದಲ್ಲಿಯೆ ಮಣ್ಣಿನ ಜೈವಿಕ ಗುಣ ತಿಳಿದು ಕೊಳ್ಳಬಹದು. ಕೈಯಿಂದಮಣ್ಣನ್ನು ಬಿಡಿಸುವಾಗ ಎರೆಹುಳು ರೀತಿಯ ಜೀವಿಗಳು ಸಿಕ್ಕರೆ ಅದು ಉತ್ತಮ ಮಣ್ಣು, ಒಂದು ಚದರ ಅಡಿಯಲ್ಲಿ ಹತ್ತರಿಂದ, ಹದಿನೈದು ಎರೆಹುಳು ಸಿಕ್ಕರೆ, ಅಲ್ಲಿ ಜೀವಂತಿಕೆ ಇದೆ ಎಂದರ್ಥ.

ಇನ್ನು ರಾಸಾಯನಿಕ ಗುಣ ತಿಳಿಯಬೇಕೆಂದರೆ ಸಸ್ಯಗಳ ಬೆಳವಣಿಗೆಗೆ ಮುಖ್ಯ ಮತ್ತು ಕಿರು ಪೋಷಕಾಂಶಗಳ ಅಗತ್ಯವಿದೆ. ಸೂರ್ಯನ ಬೆಳಕಿನ ಮೂಲಕ ನಡೆಯುವ ದ್ಯುತಿಸಂಶ್ಲೇಷಣೆ (ಫೋಟೋ ಸಿಂಥಸಿಸ್) ಕ್ರಿಯೆಯಿಂದ ಮತ್ತು ರಾತ್ರಿ ಜರುಗುವ
ಡಾರ್ಕ್ ರಿಯಾಕ್ಷನ್ ಮೂಲಕ ಸಸ್ಯಗಳು ಆಹಾರ ತಯಾರು ಮಾಡಿಕೊಳ್ಳುತ್ತವೆ. ಈ ಎರಡೂ ಕ್ರಿಯೆಗಳು ಜರುಗಲು ನಮ್ಮ ಭೂಮಿಯಲ್ಲಿ ಹೆಚ್ಚಿನ ಮಟ್ಟದ ಇಂಗಾಲ ಪ್ರಮಾಣ ಇರಬೇಕು. ಶೇ.1 ಹೆಚ್ಚು ಇರಬೇಕಾದ ಕಾರ್ಬನ್ ಪ್ರಮಾಣ ಇಂದು ಶೇ.0.5ಗಿಂತ ಕಡಿಮೆ ಇದೆ. ಇದನ್ನು ಹೆಚ್ಚಿಸಬೇಕು. ಭೂಮಿಯಲ್ಲಿನ ಹೂಮಸ್‌ ಅನ್ನು ಹೆಚ್ಚಿಸಬೇಕು. ಭೂಮಿಯಲ್ಲಿ ಕಳಿಯುವ ಜೈವಿಕ ತಾಜ್ಯಗಳನ್ನು ಕಾಲ ಕಾಲಕ್ಕೆ ಸೇರಿಸುತ್ತಾ ಹೋದರೆ ಹೂಮಸ್ ಹೆಚ್ಚಿ, ಕಾರ್ಬನ್ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸೂಕ್ತ ಜೈವಿಕ ಕ್ರಿಯೆ ನಡೆಯುತ್ತದೆ.

ಹಿಂದೆ ಬದುಗಳಲ್ಲಿ, ಬೇಲಿಯ ಸುತ್ತ, ಹೊಂಗೆ, ಗೊಬ್ಬರದ ಗಿಡ ಗ್ಲಿರಿಸಿಡಿಯಾ ರೀತಿಯ ಮರ ಗಳನ್ನು ಬೆಳೆಸಿ, ಅವುಗಳ ಸೊಪ್ಪನ್ನು ಭೂಮಿಗೆ ಹಾಕುತ್ತಿದ್ದರು. ಉದುರಿದ ತರಗು ಎಲೆಗಳನ್ನು ಗುಡಿಸಿ ಮಣ್ಣಿಗೆ ಸೇರಿಸಿದರೆ, ರಸ್ತೆಯಲ್ಲಿ ಸಿಗುವ ಹಸು, ಎಮ್ಮೆಗಳ ಸೆಗಣಿಯನ್ನು ಆರಿಸಿ ಹೊಲಕ್ಕೆ ಹಾಕುತ್ತಿದ್ದರು. ಹೊಲದಲ್ಲಿ ಡ್ಯೂಮಸ್ ಉತ್ತಮ ವಾಗಿದ್ದರಿಂದ, ಬೆಳೆಯಲ್ಲಿ ಉತ್ತಮ ಸತ್ವ ಇರು ತ್ತಿತ್ತು. ತರಕಾರಿ ಸೊಪ್ಪು, ಕಾಳು ಕಡ್ಡಿಗಳು ಹೆಚ್ಚು ದಿನ ಇಟ್ಟರೂ ಕೆಡುತ್ತಾ ಇರಲಿಲ್ಲ.

ಹಾಗೇ ಬೆಳೆದ ಮೆಣಸಿನ ಕಾಯಿ ಕಾರವನ್ನು ಹೊರಳುಕಲ್ಲಿನಲ್ಲಿ ರುಬ್ಬುತ್ತಿದ್ದರೆ ಅದರ ಪರಿಮಳ ನಾಲ್ಕಾರು ಮನೆಗಳನ್ನು ಮುಟ್ಟುತ್ತಿತ್ತು. ಈಗ ಸರ್ಕಾರಿ ಗೊಬ್ಬರ ಹಾಕಿ ಭೂಮಿ ಹಾಳಾಗಿದೆ. ಈಗಲಾದರೂ ನಮ್ಮ ಕೃಷಿಕರು ಎಚ್ಚರವಾಗ ಬೇಕು. ಭೂಮಿಗೆ ಯಾವುದು ಬೇಕು ಯಾವುದು ಬೇಡ ಎಂಬುದನ್ನು ಅರಿತು ಮಣ್ಣಿನ ಸಾರವನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಬೇಕು.

ನಮ್ಮ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞ ಡಾ.ಕೆ.ಆರ್. ಹುಲ್ಲುನಾಚೆಗೌಡರು ಇಂದು ಎಲ್ಲ ಕಡೆ ಮಣ್ಣಿನ ಮಹತ್ವ ತಿಳಿಸಿ, ತಮ್ಮ ಮೈಕ್ರೋಬಿ ಫೌಂಡೇಶನ್ ವತಿಯಿಂದ ‘ಮಣ್ಣು ಜೀವಿಸಲಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸ ಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ