ಕುಮಾರಸ್ವಾಮಿ ವಿರಕ್ತಮಠ, ಮೈಸೂರು
ಮನುಷ್ಯನ ಉಗಮಕ್ಕೂ ಮುನ್ನ ಭೂಮಿಯ ಮೇಲೆ ಜೀವಿಗಳ ಉಗಮವಾಗಿತ್ತು ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ದೃಢವಾಗಿದೆ. ಆದರೆ ಮನುಷ್ಯ ಮಾತ್ರ ಪ್ರಕೃತಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾನೆಯೇ ವಿನಾ ಅದು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಮರೆತಿದ್ದಾನೆ. ಪ್ರಕೃತಿಯನ್ನು ಕಡೆಗಣಿಸಿ ಆತ ಏನನ್ನೂ ಸಾಧಿಸಲಾರ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ ಕೂಡ.
ಭಾರತ ಕೃಷಿ ಪ್ರಧಾನ ರಾಷ್ಟ್ರ. ಭಾರತೀಯರಿಗೂ ಮಣ್ಣಿಗೂ ಭಾವನಾತ್ಮಕ ಸಂಬಂಧವಿದೆ. ‘ಮಣ್ಣಿಂದ ಕಾಯ ಮಣ್ಣಿಂದ’ ಎಂಬ ಪುರಂದರದಾಸರ ಕೀರ್ತನೆಯನ್ನು ಕೇಳಿದವರಿಗೆ ಮಣ್ಣಿನ ಮಹತ್ವ ಕಣ್ಣಿಗೆ ಕಟ್ಟುತ್ತದೆ. ಮಣ್ಣಿಂದ ಸಕಲ ದೇಶಗಳೆಲ್ಲ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣ ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರು ಕೇಳಿರಯ್ಯ ಎಲ್ಲ ಪ್ರಾಣಿಗಳೂ ಪ್ರಕೃತಿಯ ಜೊತೆಗೆ ಬೆರೆತು ಜೀವನ ಸಾಗಿಸುತ್ತಿದ್ದರೆ, ಮನುಷ್ಯ ಮಾತ್ರ ಪ್ರಕೃತಿಯೊಂದಿಗೆ ಸೆಣಸಾಡುತ್ತಾ ಪ್ರಾಕೃತಿಕ ವಿಕೋಪಗಳಿಗೆ ಕಾರಣನಾಗಿದ್ದಾನೆ. ಅರಣ್ಯ ನಾಶ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಕೃಷಿ ಭೂಮಿಗಳನ್ನು ನಾಶ ಮಾಡಿ ಕಟ್ಟಡಗಳ ನಿರ್ಮಾಣ ಮಾಡುತ್ತಿರುವುದು ಮಣ್ಣಿನ ಸವಕಳಿಗೆ ಕಾರಣವಾಗಿ ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಹೆಚ್ಚಳ, ಭೂಕಂಪದಂತಹ ನೈಸರ್ಗಿಕ ವಿಕೋಪಗಳಿಗೆ ಕಾರಣನಾಗುತ್ತಿದ್ದಾನೆ. ಕೃಷಿಯಲ್ಲಿ ಅತಿಯಾದ ರಾಸಾಯ ನಿಕ ಬಳಕೆಯಿಂದಾಗಿ ಇಂದು ಮಣ್ಣು ಸತ್ವವನ್ನು ಕಳೆದುಕೊಳ್ಳು ತ್ತಿದೆ. ಅರಣ್ಯ ನಾಶ, ಮರಗಿಡಗಳನ್ನು ನಾಶ ಮಾಡುವುದರಿಂದ ಮಣ್ಣಿನ ಸವಕಳಿ ಹೆಚ್ಚಾಗಿದ್ದು, ಭಾರತದಂತಹ ಕೃಷಿಯಾಧಾರಿತ ದೇಶಕ್ಕೆ ಇದು ಬಲುದೊಡ್ಡ ಪೆಟ್ಟು.
ಕೃಷಿ ಹೆಚ್ಚಾದಷ್ಟು ಅಧಿಕ ಇಳುವರಿಗಾಗಿ ಕೃಷಿಯಲ್ಲಿ ನಾನಾ ರೀತಿಯ ರಾಸಾಯನಿಕಗಳ ಬಳಕೆಯ ಜತೆಗೆ ಕೃಷಿಯಲ್ಲಿ ಬಳಸುವ ಅತ್ಯಾಧುನಿಕ ಸಲಕರಣೆಗಳು ಮಣ್ಣು ತನ್ನ ಸತ್ವ ಕಳೆದುಕೊಳ್ಳುವಂತೆ ಮಾಡಿದೆ. ರಾಸಾಯನಿಕಗಳ ಬಳಕೆಗೂ ಮುನ್ನ ಮಣ್ಣಿನಿಂದಲೇ ಮಡಕೆಗಳನ್ನು ಮಾಡಿಕೊಂಡು ಬಳಸುತ್ತಿದ್ದರು. ಮಣ್ಣಿನಲ್ಲಿ ಅಷ್ಟು ಸತ್ವವಿರುತ್ತಿತ್ತು.
ಸಾವಯವ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುವುದರಿಂದ ಮಣ್ಣಿನಲ್ಲಿ ಜೀವಾಣುಗಳು ವೃದ್ಧಿಯಾಗಿ ಮಣ್ಣು ಹೆಚ್ಚು ಫಲವತ್ತತ್ತೆ ಹೊಂದುತ್ತದೆ. ಕೃಷಿ ಭೂಮಿಯಲ್ಲಿ ಮರಗಿಡಗಳು ಹೆಚ್ಚಿದ್ದಷ್ಟೂ ಮಣ್ಣಿನ ಸವಕಳಿ ತಪ್ಪುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಯುವಪೀಳಿಗೆಗೆ ಕೃಷಿಯ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಅಽಕ ಲಾಭವಿಲ್ಲ ಎಂಬ ಕಾರಣಕ್ಕಾಗಿ ಯುವಸಮೂಹ ಕೃಷಿಯನ್ನು ತೊರೆದು, ನಗರಗಳತ್ತ ಮುಖ ಮಾಡುತ್ತಿದ್ದಾರೆ.
ಈ ಹಿಂದೆ ಕೃಷಿ ಎಂದರೆ ಕೇವಲ ಜೀವನೋಪಾಯ ಮಾರ್ಗವಾಗಿತ್ತು. ಮಣ್ಣಿಗೆ ಯಾವುದೇ ರಾಸಾಯನಿಕ ಬಳಸದೆ ಬೆಳೆ ಬೆಳೆಯಲಾಗುತ್ತಿತ್ತು. ದಿನಕಳೆದಂತೆ ಮನುಷ್ಯ ಕೃಷಿಯಲ್ಲಿ ಲಾಭ ಗಳಿಸುವ ಸಲುವಾಗಿ ಕೃಷಿಯಲ್ಲಿ ಪ್ರಗತಿ ಸಾಽಸುವ ಸಲುವಾಗಿ ವಿಜ್ಞಾನ-ತಂತ್ರಜ್ಞಾನಗಳ ಹೆಸರಿನಲ್ಲಿ ನೇಗಿಲುಗಳ ಬದಲು ಟ್ರ್ಯಾಕ್ಟರ್, ಸಾವಯವ ಗೊಬ್ಬರದ ಬದಲು ರಾಸಾಯನಿಕಗಳನ್ನು ಸೇರಿಸಿ ಮಣ್ಣಿನ ಗುಣಮಟ್ಟವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಮಣ್ಣಿನಲ್ಲಿ ವಿಷ ಸೇರಿ ಹಂತ ಹಂತವಾಗಿ ಮಣ್ಣು ತನ್ನ ಜೀವಸತ್ವವನ್ನು ಕಳೆದುಕೊಳ್ಳುತ್ತಿದೆ.
ರೈತರು ಬೆಳೆ ಬೆಳೆದ ನಂತರ ಧಾನ್ಯಗಳನ್ನು ಮಾತ್ರ ಕತ್ತರಿಸಿಕೊಂಡು ಹುಲ್ಲಿನ ತುಂಡು, ಎಲೆಗಳನ್ನು ಹಾಗೆಯೇ ಬಿಟ್ಟು ಉಳುಮೆ ಮಾಡುತ್ತಿದ್ದರು. ಇದರಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತಿತ್ತು. ಕೃಷಿಯೊಂದಿಗೆ ಹಸು, ಎತ್ತು, ಎಮ್ಮೆ, ಕುರಿಗಳನ್ನು ಸಾಕಿದ್ದರಿಂದ ಅವುಗಳ ಸಗಣಿಯನ್ನು ಗೊಬ್ಬರ ಮಾಡಿ, ಅದನ್ನು ತಮ್ಮ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಇದು ಮಣ್ಣಿಗೆ ಜೀವಾಮೃತವಾಗುತ್ತಿತ್ತು. ಮಣ್ಣಿನಲ್ಲಿ ಫಲವತ್ತತೆ ಇರುವವರೆಗೂ ಇತರೆ ಜೀವಿಗಳಿಗೂ ಅನುಕೂಲವಾಗುತ್ತಿತ್ತು. ಆದರೆ ಎಂದು ಕೃಷಿ ಪ್ರಕೃತಿಗೆ ವಿರೋಧವಾಗಿ ರಾಸಾಯನಿಕಗಳ ಬಳಕೆ ಎಂದು ಶುರುವಾಯಿತೋ ಅಂದಿನಿಂದಲೇ ಜೀವಿಗಳ ನಾಶವೂ ಆರಂಭವಾಯಿತು. ಮಣ್ಣಿನಲ್ಲಿ ಕೃಷಿಗೆ ಪೂರಕವಾಗಿ ವಾಸಿಸುತ್ತಿದ್ದ ಎರೆಹುಳುಗಳು, ಜೀವಜಂತುಗಳು ನಾಶವಾಗತೊಡಗಿದವು. ಇದರಿಂದ ಕೃಷಿಯು ಇಳಿಮುಖವಾಗಿದೆ.
ಈಗಾಗಲೇ ಮಣ್ಣಿನಲ್ಲಿ ಫಲವತ್ತಾದ ಸಾರಾಂಶ ನಾಶವಾಗುತ್ತಿದೆ. ಸಂಶೋಧನೆಗಳ ಪ್ರಕಾರ ಅದು ಮುಂದಿನ ೬೫ರಿಂದ ೭೦ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತ್ತಷ್ಟು ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅರ್ಥಾತ್ ಕೃಷಿ ಭೂಮಿಗಳೂ ಮರುಭೂಮಿಗಳಾಗಬಹುದು. ಇದು ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರಬಹುದು. ಮುಖ್ಯವಾಗಿ ಆಹಾರೋತ್ಪಾದನೆ ಇಳಿಮುಖವಾಗಿ, ಜನಜೀವನ ಅಸ್ತವ್ಯಸ್ತಗೊಳ್ಳಬಹುದು.
ಇಂದು ಮಣ್ಣು ಇಷ್ಟೊಂದು ಕಲುಷಿತವಾಗಿ ರುವುದಕ್ಕೆ ಎಲ್ಲರೂ ಕಾರಣರು. ಎಲ್ಲರೂ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕಿದೆ. ಮಣ್ಣಿನ ಸಂರಕ್ಷಣೆಗೆ ಏನೆಲ್ಲ ಮಾರ್ಗೋಪಾಯ ಗಳಿವೆಯೂ ಅವೆಲ್ಲವನ್ನೂ ತಪ್ಪದೇ ಪಾಲಿಸುವ ಮೂಲಕ ಮಣ್ಣಿನ ಸಂರಕ್ಷಣೆಗೆ ಮುಂದಾಗ ಬೇಕು. ಮಣ್ಣಿನ ಸವಕಳಿಯನ್ನು ತಪ್ಪಿಸಿ, ಆದಷ್ಟು ಕೃಷಿಗೆ ಸಾವಯವ ಗೊಬ್ಬರ ಬಳಸುವ ಮೂಲಕ ಮಣ್ಣಿನ ಸಂರಕ್ಷಣೆ ಮಾಡಿ ಉಳಿಸಬೇಕು. ಇವುಗಳೊಂದಿಗೆ ಮುಂದಿನ ಪೀಳಿಗೆಗೆ ಮಣ್ಣಿನ ಮಹತ್ವವನ್ನು ತಿಳಿಸಬೇಕು. ಶಾಲೆಯ ಪಠ್ಯಗಳಲ್ಲಿ ಮಣ್ಣಿನ ಸಂರಕ್ಷಣೆಯ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.





