Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹೊಂಬೇಗೌಡರ ಸಾವಯವ ಕಾಯಕ

ಡಿ.ಎನ್.ಹರ್ಷ

ಕೃಷಿ ಈ ದೇಶದ ಬೆನ್ನೆಲುಬು. ಶೇ.60ರಷ್ಟು ಮಂದಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು ಎಂಬ ಕಾಲವೊಂದಿತ್ತು. ಆದರೆ ಈಗ ಆ ಕಾಲ ಬದಲಾಗಿದೆ. ಅಲ್ಪ ಸಂಬಳವಾದರೂ ಸರಿಯೇ ನಗರ ಪ್ರದೇಶದಲ್ಲಿ ಉದ್ಯೋಗ ಮಾಡಬೇಕು ಎಂಬ ಗೀಳಿಗೆ ಬಿದ್ದ ಯುವಕರು ಕೃಷಿಯನ್ನು ತ್ಯಜಿಸಿ ನಗರಗಳತ್ತ ಮುಖ ಮಾಡಿದ್ದಾರೆ. ಆದರೆ ಅಂತಹ ಯುವಕರಿಗೆ ಬಾಲ್ಯದಿಂದಲೂ ಕೃಷಿಯ ತುಡಿತದಿಂದಲೇ ಬೆಳೆದು ಎರಡು ದಶಕಗಳ ಹಿಂದೆ ಅಪಘಾತದಲ್ಲಿ ಬಲಗೈ ಕಳೆದುಕೊಂಡರೂ, ಬೆಳಿಗ್ಗೆಯಿಂದ ಸಂಜೆಯ ತನಕವೂ ಕಾಯಕಯೋಗಿಯಂತೆ ಜಮೀನಿನಲ್ಲಿ ದುಡಿಯುವ ಚೈತನ್ಯಶಾಲಿ ಹೊಂಬೇಗೌಡರ ಬದುಕು ಮಾದರಿಯಾಗಿದೆ.

ಹೊಂಬೇಗೌಡರವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಬಳಿಕ ತಮ್ಮ ಜೀವನವನ್ನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದವರಾದ ಇವರು, ಪಾಂಡವಪುರ ಸಮೀಪದ ಹರಳಹಳ್ಳಿ ಗ್ರಾಮದ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯ ಮೂಲಕ ಬೇಸಾಯ ಮಾಡುತ್ತಿದ್ದಾರೆ. ಮೂಲ ಬೆಳೆಯಾಗಿ ಕಬ್ಬು ಬೆಳೆಯುತ್ತಿರುವ ಇವರು, ಜಮೀನಿನಲ್ಲಿ 100ಕ್ಕೂ ಹೆಚ್ಚಿನ ತೆಂಗಿನ ಮರಗಳನ್ನು ಬೆಳೆದಿದ್ದು, ಇವರ ಆದಾಯ ಮೂಲಗಳಲ್ಲಿ ಅದೂ ಒಂದಾಗಿದೆ.

ಕೃಷಿಯಲ್ಲಿ ರಾಸಾಯನಿಕಗಳಿರಬಾರದು ಎಂದು ಕೃಷಿಕರನ್ನು ಕೆಮಿಕಲ್ ಬಳಕೆಯಿಂದ ದೂರ ಮಾಡಿ, ವಿಷಮುಕ್ತ ಆಹಾರ ಬೆಳೆಯಲು ಪ್ರೇರಣೆಯಾಗಿದ್ದಾರೆ ಹೊಂಬೇಗೌಡರು. ಅಲ್ಲದೆ ತಮ್ಮ ಅಕ್ಕಪಕ್ಕದ ಜಮೀನಿನ ರೈತರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಹೊಂಬೇಗೌಡರವರು ಪಾಂಡವಪುರದ ಡಾಕ್ಟರ್ ಸಾಯಿಲ್‌ನ ಪ್ರವರ್ತಕ ಸಿ.ಪಿ.ಕುಮಾರ್ ರವರ ವಿಚಾರಗಳಿಗೆ ಮನಸೋತು, 3 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾವಯವ ಕೃಷಿ ಮೂಲಕ ಕಬ್ಬನ್ನು ಬೆಳೆಯುವ ಇವರು, ಎಕರೆಗೆ ಮೊದಲ ಬೆಳೆಯಲ್ಲಿ 46 ಟನ್, ಎರಡನೇ ಬೆಳೆಯಲ್ಲಿ 65 ಟನ್ ಇಳುವರಿ ಪಡೆದಿದ್ದಾರೆ. ಮುಂದೆ ಬರುವ ಮೂರನೇ ಬೆಳೆಯಲ್ಲಿ 100 ಟನ್ ಪಡೆಯುವ ವಿಶ್ವಾಸ ಇದೆ ಎನ್ನುತ್ತಾರೆ.

ಹೊಂಬೇಗೌಡರ ಪತ್ನಿ ಮಮತಾ, ಎಂ.ಎ, ಬಿ.ಎಡ್ ಮತ್ತು ಎಂ.ಫಿಲ್ ಪದವೀಧರರಾಗಿದ್ದು, ಪಾಂಡವಪುರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೂವರ ಮಕ್ಕಳಲ್ಲಿ ಹಿರಿಯ ಮಗಳು ದೀಪಿಕಾ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವೀಧರಾ ಗಿದ್ದು, ಚಿಕ್ಕ ಬ್ಯಾಡರಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2ನೇ ಮಗಳು ಜಾಹ್ನವಿ ಹೋಮಿಯೋಪತಿ ವೈದ್ಯರು.

ಕೃಷಿಯಲ್ಲಿ ತೊಡಗಿರುವ ಹೊಂಬೇಗೌಡರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದು, ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್‌ಮೆಂಟ್ ಆರ್ಗನೈಜೇಷನ್‌ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ನಡೆದ ಕೃಷಿ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರಿಗೆ ‘ಕೃಷಿ ದೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೊಂಬೇಗೌಡರನ್ನು ಭೇಟಿ ಮಾಡಲು ಮೊಬೈಲ್ ಸಂಖ್ಯೆ 98804 03769.
harshayogi@gmail.com

Tags:
error: Content is protected !!