ಸಾವಯವ ಕೃಷಿ ಪದ್ಧತಿಯ ಮೂಲಕ ಡ್ರಾಗನ್ ಫುಟ್ ಬೆಳೆದು ವಿಶೇಷ ರೈತರೆನಿಸಿಕೊಂಡಿದ್ದಾರೆ ಬನ್ನೂರು ಸಮೀಪದ ನೀರಿನಹಳ್ಳಿ ಗ್ರಾಮದ ರೈತರಾದ ಯಮುನಾ ಸೂರ್ಯನಾರಾಯಣ.
ಯಮುನಾ ಸೂರ್ಯನಾರಾಯಣರವರು ತಮ್ಮ 5 ಎಕರೆ ಜಮೀನಿನಲ್ಲಿ 2 ಎಕರೆ ಡ್ರಾಗನ್ ಫುಟ್ ಬೆಳೆದು ಸಾಧನೆ ಮಾಡಿದ್ದಾರೆ. ಒಟ್ಟಾರೆ ಸಮಗ್ರ ಕೃಷಿ ಮಾಡುತ್ತಿರುವ ಇವರು 2 ಎಕರೆಯಲ್ಲಿ ಡ್ರಾಗನ್ ಫುಟ್, ಉಳಿದ ಮೂರು ಎಕರೆಯಲ್ಲಿ ಮಾವು, ಆಮ್ಲ, ನೇರಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅನುಸರಿಸುವ ಇವರು, ಆರಂಭದಲ್ಲಿ ತಮ್ಮ ಜಮೀನಿನಲ್ಲಿ ಸರಿಯಾಗಿ ನೀರು ಸಿಗುತ್ತಿಲ್ಲದ ಪರಿಣಾಮ ಮತ್ತು ಜಮೀನು ಕಲ್ಲುಭೂಮಿಯಾಗಿದ್ದರಿಂದ ಪ್ರಾಯೋಗಿಕವಾಗಿ ಡ್ರಾಗನ್ ಫುಟ್ ಬೆಳೆಯಲು ಆರಂಭಿಸಿದರು. ನಂತರ ಮಳೆ ಉತ್ತಮವಾದ್ದರಿಂದ ಜಮೀನಿನಲ್ಲಿಯೂ ನೀರು ಸಿಗಲು ಆರಂಭಿಸಿತು. ಬಳಿಕ ಜಲ ಮರುಪೂರಣ ಮಾಡಿಕೊಂಡಿದ್ದು, ನೀರು ಲಭಿಸುತ್ತಿದೆ. ಈ ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ.
ಮೇ ತಿಂಗಳ ಕೊನೆಯ ವಾರದಿಂದ ಫಲ ನೀಡಲು ಆರಂಭವಾಗುವ ಡ್ರಾಗನ್ ಫುಟ್ ಅಕ್ಟೋಬರ್ ತಿಂಗಳವರೆಗೂ ಫಲ ನೀಡಲಿದೆ. ಒಟ್ಟಾರೆ ಈ ಕೃಷಿಯಿಂದ ಉತ್ತಮ ಆದಾಯ ಪಡೆಯುತ್ತಿರುವ ಯಮುನಾ ಸೂರ್ಯನಾರಾಯಣರವರು ಡಾ.ರಾಜ್ ಕುಮಾರ್ ರವರ ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ರೈತರಾದೆವು ಎನ್ನುತ್ತಾರೆ.




