- ಎನ್.ಕೇಶವಮೂರ್ತಿ
ಕುಕ್ಕುಟ ವಾಣಿ ಎಂಬ ಬಾನುಲಿ ಸರಣಿಯನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡುತ್ತಿದ್ದ ಸಮಯ ದಲ್ಲಿ ನಾನು ಖಾಸಗಿ ಕೋಳಿ ಸಾಕಾಣಿಕಾ ಸಂಸ್ಥೆಗಳ ಪಶುವೈದ್ಯರ ಜತೆ ಸಮಾಲೋಚನೆ ಮಾಡುತ್ತಿದ್ದೆ. ಈ ವೇಳೆ ಅವರು ನೆರೆಯ ಕೇರಳ ರಾಜ್ಯದ ಬೆಳವಣಿಗಳ ಬಗ್ಗೆ ಮಾತ ನಾಡುತ್ತಿದ್ದರು. ಅಲ್ಲಿ ಸಣ್ಣ ಪುಟ್ಟ ಹಿಡುವಳಿ ರೈತರೇ ಹೆಚ್ಚು. ಇವರು ಸರ್ಕಾರದ ಆರ್ಥಿಕ ನೆರವು ಪಡೆದು ಇಪ್ಪತ್ತು ಕೋಳಿಗಳನ್ನು ಸಾಕಲು ಯೋಗ್ಯವಾಗುವಂತಹ ಪಂಜರಗಳನ್ನು ಖರೀದಿಸಿ ಮನೆ ಹಿತ್ತಲಿನಲ್ಲಿ ಇಟ್ಟು ಕೊಂಡಿರುತ್ತಾರೆ. ಈ ಪಂಜರಗಳಲ್ಲಿ ಅವರು ಸಾಕುವುದು ನಾಟಿ ನಾಟಿ ಕೋಳಿಗಳನ್ನು ಅಲ್ಲ! ಬದಲಾಗಿ ವರುಷಕ್ಕೆ 300-350 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ವಿರುವ ಖಾಸಗಿ ಹೈಬ್ರಿಡ್ ಕೋಳಿ ತಳಿಗಳನ್ನು.
ಕೇಳಿ ಅಚ್ಚರಿ ಆಯ್ತಾ? ಅವುಗಳಿಗೆ ನೀಡುವ ಆಹಾರವೂ ಸಹ ಮೊಟ್ಟೆ ಕೋಳಿಗಳಿಗೆ ನೀಡುವ ಸುಧಾರಿತ ಆಹಾರವನ್ನೇ. ಅನುಸರಿಸುವುದು ಆಧುನಿಕ ಕೋಳಿ ಸಾಕಾಣಿಕಾ ವಿಧಾನಗಳನ್ನೇ. ಇದರಿಂದ ಅನುಕೂಲ ಏನು ಅಂತೀರಾ? ದಿನಕ್ಕೆ ಇಪ್ಪತ್ತು ಮೊಟ್ಟೆ ಅಷ್ಟೇ! ಇದ್ಯಾವ ಮಹಾ ಅಂತಾ ಮೂಗೆಳೇಯಬೇಡಿ. ಒಮ್ಮೆ ಆಲೋಚನೆ ಮಾಡಿ,
ದಿನಕ್ಕೆ ಇಪ್ಪತ್ತು ಮೊಟ್ಟೆ! ಪಂಜರದ ಕೋಳಿ ಸಾಕಾಣಿಕೆ ಆಗಿರುವುದರಿಂದ ಮೊಟ್ಟೆ ಒಂದು ಕಡೆ ಸುಲಭವಾಗಿ ಸಂಗ್ರಹವಾಗುತ್ತದೆ. ಜತೆಗೆ ಹಾಳಾಗು ವುದಿಲ್ಲ. ಪಂಜರದ ಕೆಳಗೆ ಕೋಳಿ ಕಸ ಸಂಗ್ರಹವಾಯುತ ಕೋಳಿ ಗೊಬ್ಬರ ಸಿಗುತ್ತದೆ. ಇದನ್ನು ತಣಿಸಿ ಕೇರಳದ ಕೃಷಿಕರು ತಮ್ಮ ಮನೆಯ ಹಿತ್ತಲಿನಲ್ಲಿ ಬಗೆಬಗೆಯ ತರಕಾರಿ, ಸೊಪ್ಪುಗಳು ಹಾಗೂ ಹಣ್ಣು ಬೆಳೆಯುತ್ತಾರೆ. ಒಂದು ವೇಳೆ ಮೀನು ಸಾಕಾಣಿಕೆ ಗಾರರಿದ್ದರೆ ಮೀನು ಕೊಳದಲ್ಲಿನ ಮೀನಿಗೆ ಆಹಾರವಾಗಿ ಕೋಳಿ ಹಿಕ್ಕೆ ಬಳಸಬಹುದು. ಇಪ್ಪತ್ತು ಮೊಟ್ಟೆಗಳನ್ನು ಮಾರಾಟ ಮಾಡಿದರೆ ದಿನಕ್ಕೆ ನೂರು ರೂ. ಆದಾಯ. ಅಲ್ಲಿಗೆ ತಿಂಗಳಿಗೆ 3,000 ರೂ. ಆದಾಯ ಗಳಿಸಬಹುದು. ಕೋಳಿ ಸಾಕುವುದು ಏಕೆ? ಮೊಟ್ಟೆ ಮಾರುವುದಕ್ಕೋ? ಅಥವಾ ತಿನ್ನುವುದಕ್ಕೋ? ಕೋಳಿ ಮೊಟ್ಟೆ ಪೌಷ್ಟಿಕ ಆಹಾರ. ಪ್ರತಿ ನಿತ್ಯ ಕುಟುಂಬದ ಸದಸ್ಯರೂ ಮೊಟ್ಟೆ ತಿನ್ನಬಹುದು ಸಂಬಂಧಿಕರಿಗೂ ನೀಡಬಹುದು.
ಇಪ್ಪತ್ತು ಕೋಳಿಗಳನ್ನು ಹಿತ್ತಲಿನ ಪಂಜರದಲ್ಲಿ ಇಡುವುದರಿಂದ ಅದರ ವಾಸನೆಯೂ ಅಷ್ಟಾಗಿ ಇರುವುದಿಲ್ಲ. ಅದೊಂದು ಸಣ್ಣ ಕೋಳಿಗಳ ಗುಂಪಾದ್ದ ರಿಂದ ರೋಗ ತಗುಲುವ ಸಾಧ್ಯತೆಯೂ ತೀರಾ ತಂಡವನ್ನು ಬದಲಾಯಿಸಿಕೊಳ್ಳಬಹುದು. ಹೊಸದಾಗಿ ಇಪ್ಪತ್ತು ಕೋಳಿ ತಂದು ಹಳೆಯ ಕೋಳಿಗಳ ಮಾಂಸವನ್ನೂ ಪಡೆಯಬಹುದು. ಪ್ರತಿ ದಿನ ಆದಾಯ, ಪ್ರತಿ ದಿನ ಪೌಷ್ಟಿಕ ಆಹಾರ ಅನ್ನುವ ಕೋಳಿ ಸಾಕಾಣಿಕೆ ವಿಧಾನ ಇದು.
ಬಹಳ ಹಿಂದಿನಿಂದಲೂ ನಾವು ಹಿತ್ತಲಿನಲ್ಲಿ ಕೋಳಿಗಳನ್ನು ಸಾಕುತ್ತಿದ್ದೇವೆ. ಆದರೆ ಅವುಗಳೆಲ್ಲ ನಾಟಿ ಕೋಳಿ ತಳಿಗಳು. ವರ್ಷಕ್ಕೆ 50 ಅಥವಾ 70 ಮೊಟ್ಟೆಗಳನ್ನು ಇಡಬಹುದು. ಯಾವಾಗಲೂ ಅವುಗಳ ಜತೆಯಲ್ಲಿ ಹುಂಜಗಳು ಇರಲೇ ಬೇಕು. ತಿಪ್ಪೆ ಕರೆಯುತ್ತಾ ಬಿತ್ತಿದ ಬೀಜವನ್ನು ಉಳಿಸದೇ ಕಿತ್ತು ತಿಂದು ಹಾಕುತ್ತವೆ. ಜತೆಗೆ ಕೋಳಿಗಳು ಕೂಡುವುದು, ಅವುಗಳನ್ನು ಮೇಯಿಸುವುದು, ಮೊಟ್ಟೆ ಇಟ್ಟಾಗ ಕಾವಿಗೆ ಕೂರಿಸುವುದು ಬಲುಕಷ್ಟ ಇವುಗಳ ಮಧ್ಯೆ ಅವುಗಳನ್ನು ಹದ್ದು ಮುಂಗುಸಿ, ನಾಯಿಗಳಿಂದ ರಕ್ಷಿಸುವುದು ಸವಾಲಿನ ಕೆಲಸ. ಕೆಲವೊಮ್ಮೆ ಇಟ್ಟ ಮೊಟ್ಟೆ ಪರರ ಪಾಲಾಗುವುದೂ ಇದೆ. ಹಾಗಂತ ಇಲ್ಲಿ ನಾಟಿ ಕೋಳಿಗಳನ್ನು ಸಾಕಬೇಡಿ ಎನ್ನುವುದು ನನ್ನ ಉದ್ದೇಶವಲ್ಲ. ನಾಟಿ ಕೋಳಿಯ ರುಚಿ ಅದು ಬೇರೇ ಮಾತು ಬಿಡಿ. ಆದರೆ ಹಸು ಸಾಕಿ, ಹಾಲು ಮಾರಿ ಪ್ರತಿ ನಿತ್ಯ ಹಣ ಸಂಪಾದಿಸುವ ರೀತಿಯಲ್ಲಿಯೇ ಕೋಳಿ ಸಾಕಿಯೂ ಆದಾಯ ಗಳಿಸಬಹುದು ಅನ್ನುವುದಷ್ಟೇ ನನ್ನ ವಿಚಾರ.





