ಬೆಂಗಳೂರು: ಕಿರುತೆರೆ ನಿರ್ಮಾಪಕರ ಸಂಘ, ಟೆಲಿವಿಷನ್ ಅಸೋಸಿಯೇಷನ್ ಹಾಗೂ ನಟ ಅನಿರುದ್ಧ ಅವರ ನಡುವೆ ಶನಿವಾರ(ಡಿ.10) ನಡೆದ ಸಂಧಾನ ಸಭೆ ಸಫಲವಾಗಿದೆ. ಈ ಮೂಲಕ ಕಿರುತೆರೆಯಿಂದ ಅನಿರುದ್ಧ ಅವರನ್ನು ತಾತ್ಕಾಲಿಕವಾಗಿ ಬಹಿಷ್ಕರಿಸಬೇಕು ಎನ್ನುವ ಆಗ್ರಹದ ವಿವಾದ ಸುಖಾಂತ್ಯಗೊಂಡಿದೆ.
ನಿರ್ದೇಶಕ ಪಿ.ಶೇಷಾದ್ರಿ ಅವರ ಸಮ್ಮುಖದಲ್ಲಿ ಈ ಸಭೆ ನಡೆದಿತ್ತು. ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅನಿರುದ್ಧ, ‘ಸಂಬಂಧಗಳಿಗೆ ಬೆಲೆ ಕೊಡುವವನು ನಾನು. ಸಂಬಂಧ ಉಳಿದುಕೊಳ್ಳಬೇಕು ಎನ್ನುವುದೇ ನನ್ನ ಉದ್ದೇಶವಾಗಿತ್ತು. ‘ಜೊತೆ ಜೊತೆಯಲಿ’ ದಾಖಲೆ ಸೃಷ್ಟಿ ಮಾಡಿದ ಧಾರಾವಾಹಿ. ಆ ಧಾರಾವಾಹಿಗೆ ಹೀಗಾಗಬಾರದಿತ್ತು. ಈ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರ ಜೊತೆ ನಾನು ಮೂರು ವರ್ಷ ಎರಡು ತಿಂಗಳು ಕೆಲಸ ಮಾಡಿದ್ದೇನೆ. ಈ ಸಂಬಂಧ ಬಿರುಕು ಬಿಡಬಾರದಿತ್ತು. ಏನೋ ಕಾರಣದಿಂದ ಹಾಗೆ ಆಗಿಹೋಯಿತು. ಅದು ದುರಂತ. ನಾನು ಅಭಿಮಾನಿಗಳ ಬಳಿ ಕ್ಷಮೆ ಕೋರುತ್ತೇನೆ. ಝೀ ವಾಹಿನಿಗೆ ಒಳ್ಳೆಯದಾಗಲಿ. ಆರೂರು ಜಗದೀಶ್ ಅವರಿಗೆ ಒಳ್ಳೆಯದಾಗಲಿ’ ಎಂದು ಜಗದೀಶ್ ಅವರನ್ನು ತಬ್ಬಿಕೊಂಡು ಭಾವುಕರಾದರು.
‘ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ, ಎಸ್. ನಾರಾಯಣ್ ಅವರ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಟಿಸುತ್ತಿದ್ದೇನೆ’ ಎಂದು ಇದೇ ವೇಳೆ ಅವರು ಹೇಳಿದರು.





