ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಈ ಬಾರಿ ಬಾಲಿವುಡ್ ನಟಿ ರೇಖಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಈ ಕುರಿತು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಯಲಿದ್ದು, ನಾಳೆ ಫಿಲ್ಮ್ ಫೆಸ್ಟಿವಲ್ ಲೋಗೋವನ್ನು ಲಾಂಚ್ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲೇ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ, ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸರಕಾರದಿಂದ ಈವರೆಗೂ ಯಾವುದೇ ಅನುದಾನ ಬಾರದೇ ಇರುವ ಕಾರಣದಿಂದಾಗಿ ಈ ತಿಂಗಳು ನಡೆಸಲಿಕ್ಕೆ ಆಗಲಿಲ್ಲ. ಚಿತ್ರೋತ್ಸವ ನಡೆಯುವುದಕ್ಕೆ ಬರೋಬ್ಬರಿ ಮೂರು ತಿಂಗಳ ಕಾಲ ಸಿದ್ಧತೆ ಬೇಕು ಎನ್ನುವುದು ಅಕಾಡೆಮಿಯಲ್ಲಿ ಕೆಲಸ ಮಾಡಿರುವವರ ಹೇಳಿಕೆ. ಆದರೆ, ಕಂದಾಯ ಸಚಿವರು ಮಾರ್ಚ್ ನಲ್ಲಿ ಚಿತ್ರೋತ್ಸವ ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತು ನಾಳೆ ಅವರು ವಿವರಣೆ ನೀಡುತ್ತಾರೆ ಎನ್ನುವುದು ನಿರೀಕ್ಷೆ.





