Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗ ಕ್ಷೇಮ:ದೀಪಾವಳಿಗೆ ಸಂಭ್ರಮದ ಜೊತೆಗೆ ಸುರಕ್ಷತೆಯೂ ಜೊತೆಗಿರಲಿ

ಸಂತೋಷ ಕಸಿಯದಿರಲಿ ಬೆಳಕಿನ ಹಬ್ಬ; ಸುರಕ್ಷತೆಗೆ ಇರಲಿ ಮೊದಲ ಆದ್ಯತೆ

ಮುಂದಿನ ವಾರ ಬೆಳಕಿನ ಹಬ್ಬ. ಸಂಭ್ರಮಕ್ಕೆ ಈಗಿನಿಂದಲೇ ಸಿದ್ಧತೆ ಶುರುವಾಗಿರುತ್ತದೆ. ಆದರೆ ಹಿಂದಿನ ಹಬ್ಬಗಳನ್ನು ತೆರೆದು ನೋಡಿದರೆ ಅಲ್ಲಿ ಪಟಾಕಿ ಸಿಡಿತದಿಂದ ಅನಾಹುತಗಳಾದ ಪ್ರಕರಣಗಳು ಸಾಕಷ್ಟು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ಸುರಕ್ಷಿತ ದೀಪಾವಳಿ, ಪರಿಸರ ಸ್ನೇಹಿ ದೀಪಾವಳಿ, ಮಕ್ಕಳ ಸ್ನೇಹಿ ದೀಪಾವಳಿಗೆ ಇಂದು ಹೆಚ್ಚಿನ ಒತ್ತು ಕೊಡಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಏನೇನು ಮಾಡಬಹುದು, ಹೇಗೆ ಸುರಕ್ಷತೆಯ ಜೊತೆಗೆ ಸಂಭ್ರಮದಿಂದ ಹಬ್ಬ ಆಚರಣೆ ಮಾಡಬಹುದು ಎನ್ನುವುದು ಇಬ್ಬರು ತಜ್ಞ ವೈದ್ಯರು ತಿಳಿಸಿದ್ದಾರೆ.


ಸಾಮೂಹಿಕವಾಗಿ ಪಟಾಕಿ ಹೊಡೆಯುವುದು ಸೂಕ್ತ

ದೀಪಾವಳಿಯನ್ನು ಪಟಾಕಿ ಸಿಡಿಸಿಯೇ ಆಚರಿಸಬೇಕು ಎಂದೇನಿಲ್ಲ. ಇಂದು ಹಸಿರು ಪಟಾಕಿ, ಪರಿಸರ ಸ್ನೇಹಿ ಎಂದುಕೊಂಡು ಹಲವಾರು ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಆದರೂ ಅವುಗಳಲ್ಲಿಯೂ ಕೆಮಿಕಲ್ ಮಿಕ್ಸ್ ಆಗಿರುತ್ತದೆ. ಇವು ಶ್ವಾಸಕೋಶದ ಮೇಲೆ ನೇರ ಪರಿಣಾಮ ಬೀರುತ್ತವೆ. ಈಗಷ್ಟೇ ಅಸ್ತಮಾಜೆನಿಕ್‌ನಿಂದ ಹಲವಾರು ಮಕ್ಕಳು ಬಳಲಿವೆ. ಅವರಿಗೆ ಮತ್ತೆ ಪಟಾಕಿ ಸಿಡಿಸುವುದರಿಂದ ಸಮಸ್ಯೆ ಆಗುತ್ತದೆ.

ಪ್ರತಿ ವರ್ಷ ದೀಪಾವಳಿ ಬಂದಾಗಲೂ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳಲಾಗುತ್ತದೆ. ಆದರೂ ಅನಾಹುತಗಳು ತಪ್ಪುತ್ತಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಪಟಾಕಿ ಹೊಡೆಯುವ ಬದಲು ಯುರೋಪ್‌ನಂತಹ ದೇಶಗಳ ರೀತಿ ಸಾಮೂಹಿಕವಾಗಿ, ಸುರಕ್ಷಿತವಾಗಿ ಪಟಾಕಿ ಸಿಡಿಸುವುದು ಉತ್ತಮ.

ತಂದೆಗೆ ಅಸ್ತಮಾ ಇದ್ದರೆ ಅದರ ಜೀನ್ಸ್ ಮಕ್ಕಳಿಗೂ ವರ್ಗಾವಣೆಯಾಗಿರುತ್ತದೆ. ಪಟಾಕಿಯಿಂದ ಹೊರ ಬಂದ ಹೊಗೆಯನ್ನು ಸೇವನೆ ಮಾಡುವುದರಿಂದ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಪಟಾಕಿ ಹೊಗೆ ಸೇವನೆಯಿಂದ ಕನಿಷ್ಟ ೧೫ ದಿನಗಳ ಕಾಲ ಶ್ವಾಸಕೋಶಕ್ಕೆ ಸಮಸ್ಯೆ ಆಗಬಹುದು. ನ್ಯುಮೋನಿಯಾ ಕೂಡ ಬರುವ ಸಾಧ್ಯತೆ ಹೆಚ್ಚು.

ಇನ್ನು ಈಗಷ್ಟೇ ಎಲ್ಲರೂ ಕೋವಿಡ್ ಸಂಕೋಲೆಯಿಂದ ತಪ್ಪಿಸಿಕೊಂಡಿದ್ದೇವೆ. ಕೋವಿಡ್‌ಗೆ ತುತ್ತಾಗಿದ್ದವರಿಗೆ ಪಟಾಕಿ ಸಿಡಿತದಿಂದ ಹೆಚ್ಚಿನ ಸಮಸ್ಯೆ ಆಗುತ್ತದೆ. ಈ ಬಗ್ಗೆ ಎಚ್ಚರಿಕೆ ಮತ್ತು ಸೂಕ್ತ ರಕ್ಷಣೆ ಅತ್ಯಗತ್ಯ.

ಡಾ. ಬಿ. ಕೃಷ್ಣಮೂರ್ತಿ, ನಿವೃತ್ತ ನಿರ್ದೇಶಕರು ಮತ್ತು ಡೀನ್, ಮೈಸೂರು ಮೆಡಿಕಲ್ ಕಾಲೇಜು

———

ಅಗತ್ಯ ಸಿದ್ಧತೆಯೊಂದಿಗೆ ಹಬ್ಬ ಆಚರಿಸಿ

ದೀಪಾವಳಿ ಎಂದರೆ ಅಲ್ಲಿ ದೀಪ ಮತ್ತು ಪಟಾಕಿ ಎರಡು ಮುಖ್ಯವಾದವು. ಜಾತಿ, ಧರ್ಮಗಳನ್ನು ಮೀರಿ ದೇಶಾದ್ಯಂತ ದೀಪಾವಳಿಯ ಆಚರಣೆ ನಡೆಯುತ್ತದೆ. ಈ ವೇಳೆ ಪಟಾಕಿ ಸುಡುವುದು ಬೇಡ ಎಂದರೆ ಹೆಚ್ಚಿನವರು ಕೇಳುವುದಿಲ್ಲ. ಆದರೆ ಸುರಕ್ಷತೆಯಿಂದ, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಕಡಿಮೆ ಶಕ್ತಿ ಇರುವ ಪಟಾಕಿಗಳನ್ನು ಹೊಡೆಯುವುದು ಸೂಕ್ತ.

ಮಕ್ಕಳ ಹಾದಿಯಾಗಿ ಪಟಾಕಿ ಹೊಡೆಯುವ ಎಲ್ಲರೂ ಕಾಟನ್ ಬಟ್ಟೆಗಳನ್ನು ಧರಿಸುವುದು ಸೂಕ್ತ. ನೈಲಾನ್, ಪಾಲಿಯಸ್ಟರ್ ಬಟ್ಟೆಗಳನ್ನು ಧರಿಸದಿರಿ. ಪಟಾಕಿ ಸುಡುವ ಜಾಗದಲ್ಲಿ ನೀರು, ಮಣ್ಣಿನ ಬಜೆಟ್, ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಇಟ್ಟುಕೊಂಡಿದ್ದು, ಅದರ ಬಳಕೆಯ ಬಗ್ಗೆ ಅರಿವು ಇಟ್ಟುಕೊಂಡಿರಬೇಕು. ಈಗ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹಸಿರು ಪಟಾಕಿಗಳು ಬಂದಿದ್ದು, ಅವುಗಳ ಬಳಕೆ ಸೂಕ್ತ. ಮುಖ್ಯವಾಗಿ ಪಟಾಕಿಗಳನ್ನು ದೂರದಿಂದ ಹೆಚ್ಚಬೇಕು. ಇದರಿಂದ ಚರ್ಮ, ಕಣ್ಣಿಗೆ ಆಗಬಹುದಾದ ಹಾನಿಯನ್ನು ತಪ್ಪಿಸಬಹುದು. ಕೆಲವು ಪಟಾಕಿಗಳು ಹಚ್ಚಿದ ಕೆಲ ಸಮಯದ ನಂತರ ಸಿಡಿಯುತ್ತವೆ. ಅಲ್ಲಿಯವರೆಗೂ ಕಾಯಬೇಕು. ತಕ್ಷಣ ಹತ್ತಿರಕ್ಕೆ ಹೋಗುವುದು, ಕೈಯಿಂದ ಮುಟ್ಟುವುದು ಮಾಡಬಾರದು. ಇದರಿಂದಲೇ ಹೆಚ್ಚಿನ ಅಪಾಯ ಆಗಿರುವುದು ವರದಿಯಾಗಿದೆ.

ಇನ್ನು ಹಬ್ಬದ ವೇಳೆಯಲ್ಲಿ ಜೀವನ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆ ಆಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಸಿಹಿ ಸೇವನೆ, ನಿಗದಿತ ಚಟುವಟಿಕೆಗಳನ್ನು ನಿಲ್ಲಿಸಬಾರದು. ಇದು ಬೇರೆ ರೀತಿಯ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ.

ಡಾ. ರಾಜೇಶ್ ಕುಮಾರ್ ಜೈನ್ ಎಸ್.

ಸಹ ಪ್ರಾಧ್ಯಾಪರು, ರೆಸ್ಪರೇಟರಿ ಮೆಡಿಸನ್ ವಿಭಾಗ, ಪಿಕೆಟಿಬಿ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ