ಬೆಂಗಳೂರು : ಹುಲಿ ಉಗುರು ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಮತ್ತು ನಟ ಜಗ್ಗೇಶ್ ಗೆ ನೀಡಲಾಗಿದ್ದ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಜಗ್ಗೇಶ್ ಅವರು ಹುಲಿ ಉಗುರು ಧರಿಸಿರುವ ಆರೋಪದ ಮೇಲೆ ಅರಣ್ಯ ಇಲಾಖೆ ನೀಡಿದ್ದ ನೋಟಿಸ್‌ಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜಗ್ಗೇಶ್ ಗೆ ನೋಟಿಸ್ ನೀಡಿದ ಕೆಲ ಗಂಟೆಗಳಲ್ಲೇ ಅವರ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿ ಇಲಾಖೆಯ ಕ್ರಮವು ಪ್ರಚಾರದ ಸಾಹಸದಂತೆ ತೋರುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಅಕ್ಟೋಬರ್ 25ರಂದು ಸಂಜೆ ಅರಣ್ಯಾಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದ ನಂತರ ರಾಜ್ಯಸಭಾ ಸದಸ್ಯರು ನೋಟಿಸ್ ಅನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಅವರ ಅನುಪಸ್ಥಿತಿಯಲ್ಲಿ ಜಗ್ಗೇಶ್ ಪತ್ನಿ ಲಾಕೆಟ್ ಅನ್ನು ನೀಡಿದ್ದರು.
ನೊಟೀಸ್ ಜಾರಿ ಮಾಡಿದ ಕೇವಲ ಒಂದು ಗಂಟೆಯಲ್ಲೇ ಅಧಿಕಾರಿಗಳು ಜಗ್ಗೇಶ್ ಅವರ ನಿವಾಸದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ನೊಟೀಸ್ ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ ನೋಟಿಸ್‌ಗೆ ಉತ್ತರಿಸಲು ಜಗ್ಗೇಶ್‌ಗೆ ಸಮಯ ಏಕೆ ನೀಡಲಿಲ್ಲ. ಅವರ ಮನೆಗೆ ಭೇಟಿ ನೀಡಿರುವುದು ಪ್ರಚಾರಕ್ಕಾಗಿಯೇ? ಅರಣ್ಯ ಅಧಿಕಾರಿಗಳು ಜನರ ಮನೆಗಳ ಮೇಲೆ ದಾಳಿ ನಡೆಸುವ ಬದಲು ಪ್ರಚಾರ ಗಿಟ್ಟಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಹುಡುಕಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜಗ್ಗೇಶ್ ಪರ ವಾದ ಮಂಡಿಸಿದ ವಕೀಲರು, ಅಕ್ಟೋಬರ್ 25ರಂದು ಅವರಿಗೆ ನೀಡಲಾದ ನೋಟಿಸ್‌ನಲ್ಲಿ ತಮ್ಮ ಬಳಿ ಇರುವ ಹುಲಿ ಉಗುರು ಇದ್ದರೆ ಕೊಡಬೇಕು ಎಂದು ಸೂಚಿಸಿದ್ದರು. ಆದರೆ ಅದಾಗಿ ಒಂದು ಗಂಟೆಯೊಳಗೆ ಅವರ ಮನೆಗೆ ಭೇಟಿ ನೀಡಿ ಶೋಧ ನಡೆಸಿದ್ದರು. 40 ವರ್ಷಗಳಷ್ಟು ಹಳೆಯದಾದ ಹುಲಿ ಉಗುರಿನ ಬಗ್ಗೆ ಹಲವಾರು ವರ್ಷಗಳ ಹಿಂದೆ ನಟ ನೀಡಿದ ಸಂದರ್ಶನವನ್ನು ಆಧರಿಸಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಜಗ್ಗೇಶ್ ವಿರುದ್ಧ ಸಾಕ್ಷಿಯಾಗಿರುವ ಹುಲಿ ಉಗುರನ್ನು ನಾಶಪಡಿಸಲು ಮುಂದಾಗುತ್ತಾರೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ್ದರು ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ನೋಟಿಸ್ ನೀಡಿದ ಒಂದು ಗಂಟೆಯೊಳಗೆ ಇಲಾಖೆಗೆ ಇಂತಹ ಮಾಹಿತಿ ನೀಡಿದವರು ಯಾರು ಎಂದು ಅಚ್ಚರಿ ವ್ಯಕ್ತಪಡಿಸಿದ ಕೋರ್ಟ್, ಇದು ಪ್ರಚಾರಕ್ಕಾಗಿ ಮಾಡಿದಂತಿದೆ ಎಂದು ಹೇಳಿದೆ. ಯಾವುದೇ ಕಾಡು ಪ್ರಾಣಿಗಳ ಭಾಗಗಳನ್ನು ಹೊಂದಿರುವುದು ಕಾನೂನುಬಾಹಿರವಾಗಿದ್ದರೂ, ಇಲಾಖೆಯ ಕ್ರಮವು ಪ್ರಶ್ನಾರ್ಹವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
ಸಂಸದರು ಸಂಸತ್ ಅಧಿವೇಶನಕ್ಕೆ ಸಿದ್ಧತೆ ನಡೆಸುತ್ತಿದ್ದು, ಅವರ ಅಧಿಕೃತ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ರೀತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಗ್ಗೇಶ್ ಪರ ವಕೀಲರು ಹೇಳಿದ್ದಾರೆ. ಇನ್ನು ಶೋಧ ಕಾರ್ಯದ ಹೆಸರಿನಲ್ಲಿ ಇಲಾಖೆಯ 14 ಅಧಿಕಾರಿಗಳು ತಮ್ಮ ಮನೆಗೆ ನುಗ್ಗಿದ್ದಾರೆ ಎಂದು ಜಗ್ಗೇಶ್ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ. ಇಲಾಖೆಯ ಕ್ರಮವನ್ನು ಕಾನೂನು ಬಾಹಿರ ಎಂದು ಘೋಷಿಸಿ, ತನಗೆ ನೀಡಿರುವ ನೋಟಿಸ್ ರದ್ದುಗೊಳಿಸುವಂತೆಯೂ ಜಗ್ಗೇಶ್ ನ್ಯಾಯಾಲಯವನ್ನು ಕೋರಿದ್ದಾರೆ.