ಸ್ಯಾಂಡಲ್ವುಡ್ ನ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಆಗಾಗ ಯಶ್ ಮುಂದಿನ ಸಿನಿಮಾ ಬಗೆಗಿನ ಸುದ್ದಿ ಹರಿದಾಡುತ್ತಿರುತ್ತವೆ. ಮೊನ್ನೆಯಷ್ಟೇ ರಾಕಿ ಬಾಯ್ ತಮ್ಮ ಇನ್ಸ್ಟಾಗ್ರಾಮ್ ಪ್ರೋಫೈಲ್ ಫೋಟೋ ಬದಲಿಸಿದ್ದರು. ಇದರಿಂದ ಅಭಿಮಾನಿಗಳಲ್ಲಿ ಯಶ್ ತಮ್ಮ ಮುಂದಿನ ಚಿತ್ರದ ಅಪ್ಡೇಟ್ ನೀಡಿದ್ದಾರಾ ? ಎಂಬ ಕುತೂಹಲ ಮೂಡಿತ್ತು. ಇದೀಗ ಯಶ್ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಡಿಸೆಂಬರ್ 8 ಕ್ಕೆ ತಮ್ಮ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿನಿ ರಸಿಕರು ಫುಲ್ ಖುಷ್ ಆಗಿದ್ದಾರೆ. ರಾಕಿ ಬಾಯ್ ಮುಂದಿನ ಸಿನಿಮಾ ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಲಿದೆ.
ಮೊನ್ನೆ ಯಶ್ ಅವರು ಅಪ್ಲೋಡ್ ಮಾಡಿದ್ದ ಇಸ್ಟಾಗ್ರಾಮ್ ಪ್ರೊಫೈಲ್ ಫೋಟೋದಿಂದ ಯಶ್ 19 ಬಗ್ಗೆ ಮತ್ತೆ ಚರ್ಚೆ ಶುರುವಾಗಿತ್ತು. ಲೋಡಿಂಗ್ ಎಂಬ ಬರಹವಿರುವ ಫೋಟೊವನ್ನು ಯಶ್ ಅವರು ಅಪ್‌ಲೋಡ್ ಮಾಡಿದ್ದರು. ಈ ಫೋಟೊ ಮೂಲಕ ಯಶ್ ತಮ್ಮ ಮುಂದಿನ ಸಿನಿಮಾ ಅಪ್ಡೇಟ್ ನೀಡಿದ್ದಾರಾ ಎಂಬ ಕುತೂಹಲ ಮೂಡಿತ್ತು.
ಕಳೆದ ಕೆಲ ದಿನಗಳ ಹಿಂದೆ ಸ್ವತಃ ಯಶ್ ಅವರೇ ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದರು.ನವೆಂಬರ್ 23 ರಂದು ನಡೆದ ಕಾರ್ಯಕ್ರದ ವೇದಿಕೆ ಮೇಲೆ ಯಶ್ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್ ಅನ್ನು ಸ್ವತಃ ನಾನೇ ನೀಡಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹದ ಸುದ್ದಿಗಳಿಗೂ ತೆರೆ ಎಳೆದಿದ್ದರು.
ಇದೀಗ ಯಶ್ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್ ಗಾಗಿ ಅಭಿಮಾನಿಗಳು ಬಹಳಾ ಉತ್ಸಾಹದಿಂದ ಎದುರುನೋಡುತ್ತಿದ್ದಾರೆ.