Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಟ ಸುಶಾಂತ್​ ಸಿಂಗ್​ ಬಗೆಗಿನ ಸಿನಿಮಾಗೆ ತಡೆ ಕೋರಿದ್ದ ಅರ್ಜಿ ವಜಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದವು. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. 2020 ಜೂನ್ 14ರಂದು ನಿಧನರಾದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ. ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್​ಗೆ ಸಂಕಷ್ಟ ತಂದಿತ್ತು ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಮಧ್ಯೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನಾಧಾರಿತ ‘ನ್ಯಾಯ್ ದಿ ಜಸ್ಟೀಸ್’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಶಾಂತ್​ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಚಲನಚಿತ್ರ ನಿರ್ಮಾಪಕರು ವಾಣಿಜ್ಯ ಲಾಭಕ್ಕಾಗಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ. ಆದ್ದರಿಂದ ತಮ್ಮ ಮಗನ ಹೆಸರು ಅಥವಾ ಆತನ ಜೀವನದ ಹೋಲಿಕೆಯನ್ನು ಚಲನಚಿತ್ರಗಳಲ್ಲಿ ಬಳಸದಂತೆ ತಡೆಯುವಂತೆ ಅವರು ಕೋರಿದ್ದರು. ಆದರೆ ಹೈಕೋರ್ಟ್​ ನ್ಯಾಯಮೂರ್ತಿ ಸಿ.ಹರಿ ಶಂಕರ್​ ಅವರು ಈ ಅರ್ಜಿಯನ್ನು ವಜಾಗೊಳಿಸಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾದ ವಿಚಾರವು ಅವರ ಖಾಸಗಿತನದ ಹಕ್ಕಾಗಿ ಉಳಿದಿಲ್ಲ. ಇವು ಅವರ ಸಾವಿನೊಂದಿಗೆ ಕೊನೆಗೊಂಡಿವೆ ಎಂದು ಕೋರ್ಟ್​ ಹೇಳಿದೆ.

ಈ ಹಿಂದೆ ಕೂಡ ಸುಶಾಂತ್‌ ವೈಯಕ್ತಿಕ ಜೀವನ, ಹೆಸರು, ಚಿತ್ರಗಳು, ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್‌), ಜೀವನಶೈಲಿ, ಅಥವಾ ಅವರನ್ನು ಹೋಲುವ ಜೀವನಾಧಾರಿತ ಚಿತ್ರ ಅಥವಾ ಕತೆಯನ್ನು ಹೆಣೆಯಬಾರದು ಎಂದು ಆದೇಶಿಸುವಂತೆ ಕೋರಿ ಸುಶಾಂತ್‌ ತಂದೆ ಕೃಷ್ಣ ಕಿಶೋರ್‌ ಸಿಂಗ್‌ 2021ರಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ದೆಹಲಿ ಹೈಕೋರ್ಟ್​ ಅರ್ಜಿಯನ್ನು ವಜಾಗೊಳಿಸಿತ್ತು. ಈ ಸುಶಾಂತ್​ ಅವರ ಜೀವನಾಧಾರಿತ ಚಿತ್ರ ಎನ್ನಲಾದ ‘ನ್ಯಾಯ್ ದಿ ಜಸ್ಟೀಸ್’ ಗೆ ತಡೆ ನೀಡುವಂತೆ ಕೋರಿದ್ದ ಅವರ ಅರ್ಜಿಯನ್ನು ಹೈಕೋರ್ಟ್​ ಪುನಃ ವಜಾಗೊಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ