Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನಟ ದರ್ಶನ್ ಹಾಗೂ ಮಾಧ್ಯಮ ನಡುವಿನ ವಿವಾದ ಸುಖಾಂತ್ಯ

ಬೆಂಗಳೂರು : ನಟ ದರ್ಶನ್ ಹಾಗೂ ಕನ್ನಡ ಮಾಧ್ಯಮದ ನಡುವೆ ಎರಡು ವರ್ಷಗಳಿಂದ ನೆಲೆಸಿದ್ದ ವೈಮನಸ್ಯ ಪರಸ್ಪರ ಮಾತುಕತೆಯಿಂದ ಇತ್ಯರ್ಥಗೊಂಡಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ್ಶನ್ ಮತ್ತು ಮಾಧ್ಯಮದ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ ಕಂಡಿದೆ.

ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ ಮುಂದೆ ಆ ವ್ಯಕ್ತಿ ಈರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.

ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ ಎಂದು ನಟ ದರ್ಶನ್ ಹೇಳಿದರು.

ಚಿತ್ರರಂಗ ಕಷ್ಟದಲ್ಲಿದೆ. ಹೊಸದಾಗಿ ಬರುತ್ತಿರುವ ನಿರ್ಮಾಪಕರ ಬೆಂಬಲಕ್ಕೆ ನಾವೆಲ್ಲ ನಿಲ್ಲಬೇಕಿದೆ. ಪರಭಾಷೆಯ ಚಿತ್ರಗಳ ಎದುರು ಕನ್ನಡ ಸಿನಿಮಾಗಳು ಗೆಲ್ಲಬೇಕಿದ್ದರೆ ಮಾಧ್ಯಮಗಳ ನೆರವೂ ಬೇಕು. ಹಲವು ದಶಕಗಳಿಂದ ಮಾಧ್ಯಮ ಮತ್ತು ಚಿತ್ರರಂಗ ಒಂದೇ ಕುಟುಂಬದಂತಿದೆ. ಇನ್ನು ಮುಂದೆಯೂ ಅದೇ ಭಾವನೆಯಲ್ಲಿ ಮುಂದುವರಿಯೋಣ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಜೀವನದಲ್ಲಿರುವ ಗಣ್ಯ ಹಾಗೂ ಜನಪ್ರಿಯ ವ್ಯಕ್ತಿಗಳು ನಡೆ ನುಡಿಯಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಅದು ಸೂಕ್ತವಾಗಿ ಪ್ರತಿಕ್ರಿಯಿಸುತ್ತಾ ಇರುತ್ತದೆ, ವಿಮರ್ಶಾತ್ಮಕ ನಿಲುವು ಹೊಂದಿರುತ್ತದೆ. ದರ್ಶನ್ ಕನ್ನಡದ ಹೆಮ್ಮೆಯ ನಟ ಎಂದು ಮಾಧ್ಯಮ ಯಾವತ್ತೂ ಭಾವಿಸಿದೆ. ಎಲ್ಲರೂ ಜತೆಯಾಗಿ ನಡೆಯೋಣ. ಪರಸ್ಪರರ ಬಗ್ಗೆ ಗೌರವ ಇಟ್ಟುಕೊಳ್ಳೋಣ ಎಂದು ಮಾಧ್ಯಮ ಸಂಪಾದಕರ ಸಭೆ ಅಭಿಪ್ರಾಯಪಟ್ಟಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ