Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಮಾಜ ಘಾತುಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ: ನಟ ಜಗ್ಗೇಶ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿಯಾಗಿದ್ದ ರೈತ ವರ್ತೂರು ಸಂತೋಷ್ ಬಂಧನ ನಂತರ ಹುಲಿ ಉಗುರಿನ ಸಂಕಷ್ಟು ಸ್ಯಾಂಡಲ್ ವುಡ್ ನ ಹಲವು ಕಲಾವಿದರ ಕೊರಳಿಗೆ ಸುತ್ತಿಕೊಂಡಿದೆ.ಹಲವು ಸೆಲೆಬ್ರಿಟಿಗಳ ಕತ್ತಿನಲ್ಲಿ ಹುಲಿ ಉಗುರಿನ ಲಾಕೆಟ್ ಇರುವ ಫೋಟೋ ವೈರಲ್ ಆಯಿತು.

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್, ಹಿರಿಯ ನಟ ಹಾಗೂ ರಾಜಕಾರಣಿ ಜಗ್ಗೇಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಹ ಪೆಂಡೆಂಟ್ ನಲ್ಲಿ ಹುಲಿ ಉಗುರು ಧರಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

https://x.com/Jaggesh2/status/1717187686434517313?s=20

ನಟ ಜಗ್ಗೇಶ್ ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಮಾತನಾಡುವ ವೇಳೆ ತಾವು ಒರಿಜಿನಲ್ ಹುಲಿ ಉಗುರು ಧರಿಸಿರುವುದಾಗಿ ಹೇಳಿಕೊಂಡಿದ್ದರು. ತಮಗೆ ತಮ್ಮ ತಾಯಿ ಪ್ರೀತಿಯಿಂದ ಹುಲಿ ಉಗುರಿನ ಪೆಂಡೆಂಟ್ ನೀಡಿದ್ದರು ಎಂಬುದಾಗಿ ಅವರು ಒಪ್ಪಿಕೊಂಡಿದ್ದರು. ಅದರ ಆಧಾರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿತ್ತು.  ಹೀಗಾಗಿ, ಅರಣ್ಯ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇರುವ ಅವರ ನಿವಾಸಕ್ಕೆ ಬಂದು ಶೋಧ ನಡೆಸಿದ್ದಾರೆ. ಈ ವೇಳೆ ಜಗ್ಗೇಶ್ ಅವರು ಲಾಕೆಟ್​ನ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ.

‘ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತುಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ, ಪಾಚ್ಕೊಳಿ’ ಎಂದು ನಿನ್ನೆ ರಾತ್ರಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ, ‘ಒಂದು ವಿಷಯ ಅದ್ಭುತವಾಗಿ ಅರಿತೆ. ಪ್ರೀತಿಸುವವರು 1000 ಜನ ಇದ್ದರೂ ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೇ ಇರುತ್ತಾರೆ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಒಳ್ಳೆಯ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರಮಂದಿ ಬಂದರೂ ಕಾಯಲು ಒಬ್ಬ ಬರುತ್ತಾನೆ ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶ ಎಂದು ಬರೆದಿದ್ದಾರೆ.

ಅಂದರೆ ತಾಯಿ ಕೊಟ್ಟ ಕಾಣಿಕೆ ಕೈತಪ್ಪಿ ಹೋದ ಹಿನ್ನೆಲೆಯಲ್ಲಿ ಜಗ್ಗೇಶ್ ಬೇಸರದ ನುಡಿಗಳನ್ನಾಡಿದ್ದು, ತನಗೆ ಕೇಡು ಮಾಡಲೆಂದೇ ಕೆಲವರು ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?: 40 ವರ್ಷಗಳ ಹಳೆಯದ್ದಾದರಿಂದ ಪೆಂಡೆಂಟ್ ಕೊಳೆತ ಸ್ಥಿತಿಯಲ್ಲಿದೆ. ಎಫ್‌ಎಸ್‌ಎಲ್ ರಿಪೋರ್ಟ್ ಬಂದ ನಂತರವೇ ಕ್ರಮ ಕೈಗೊಳ್ಳುತ್ತೇವೆ. ವರ್ತೂರ್ ಸಂತೋಷ್ ಅವರ ಬಂಧನವಾದಾಗ ಅದು ಹುಲಿಯದ್ದೇ ಉಗುರು ಅಂತ ನಮಗೆ ಗೊತ್ತಿತ್ತು. ಆದರೆ ಜಗ್ಗೇಶ್ ಅವರ ಪೆಂಡೆಂಡ್ ಬಗ್ಗೆ ನಮಗೆ ಖಾತ್ರಿಯಾಗಬೇಕಿದೆ ಎಂದು ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ರವೀಂದ್ರ ಹೇಳಿದ್ದಾರೆ.

ನಾವು ನೋಟಿಸ್‌ ಕೊಟ್ಟಾಗ ಜಗ್ಗೇಶ್‌ ಅವರ ಪತ್ನಿ ಪರಿಮಳಾ ಅವರು ಲಾಕೆಟ್‌ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ತಪಾಸಣೆ ನಡೆಸಿಲ್ಲ. ಜಗ್ಗೇಶ್‌ ಅವರು ಇದು ತಾಯಿ ಕೊಟ್ಟಿದ್ದು, ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದರು. ಹೀಗಾಗಿ ಡಿಎನ್‌ಎ ಪರೀಕ್ಷೆಗಾಗಿ ಮಾಡಲು ಡೆಹ್ರಾಡೂನ್‌ಗೆ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಇದು ನಿಜವಾದ ಹುಲಿಯುಗುರು ಆಗಿದ್ದರೆ, ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ರವೀಂದ್ರ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ