ನಟಿ ಸಮಂತಾ ರುತ್ ಪ್ರಭು ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಈ ವಿಚಾರವನ್ನು ಅವರು ಬಾಯ್ಬಿಟ್ಟು ಹೇಳುವುದಕ್ಕೂ ಮುನ್ನವೇ ಅನೇಕ ಮಾಧ್ಯಮಗಳಲ್ಲಿ ಜಗಜ್ಜಾಹೀರು ಆಗಿತ್ತು. ನಂತರ ತಮಗೆ Myositis ಎಂಬ ಕಾಯಿಲೆ ಇದೆ ಎಂದು ಸ್ವತಃ ಸಮಂತಾ ಒಪ್ಪಿಕೊಂಡರು. ಇದಕ್ಕೆ ಚಿಕಿತ್ಸೆ ಪಡೆಯಲು ಅವರು ಈ ಮೊದಲು ವಿದೇಶಕ್ಕೆ ತೆರಳಿದ್ದರು. ಬಳಿಕ ವಾಪಸ್ ಬಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಕೈಗೆ ಡ್ರಿಪ್ಸ್ ಹಾಕಿಕೊಂಡೇ ಅವರು ‘ಯಶೋದಾ’ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ಭಾರತದಲ್ಲಿ ಅವರು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೂ ಕೂಡ ಅವರಿಗೆ ಪೂರ್ತಿ ವಾಸಿ ಆಗಿಲ್ಲ. ಹಾಗಾಗಿ ದಕ್ಷಿಣ ಕೊರಿಯಾಗೆ ತೆರಳಿ, ಅಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸಮಂತಾ ತೀರ್ಮಾನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆಯುರ್ವೇದ ಔಷದಿ ಪ್ರಯತ್ನಿಸಿದ್ದ ಸಮಂತಾ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಅವರು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಹರಡಿದೆ. ಈ ಬಗ್ಗೆ ಸಮಂತಾ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದ ಶೂಟಿಂಗ್ನಲ್ಲಿ ಸಮಂತಾ ಈಗ ಭಾಗಿ ಆಗಬೇಕಿತ್ತು. ಆದರೆ ಆ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ.