ಹೊಂಬಾಳೆ ಫಿಲ್ಮ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಡುವೆ ಒಳ್ಳೆಯ ಸಂಬಂಧ ಇಲ್ಲ ಎಂಬ ರೂಮರ್ಸ್ ಗೆ ಸ್ವತಃ ಯಶ್ ಹಾಗೂ ಹೊಂಬಾಳೆ ಸಂಸ್ಥೆಯೇ ತೆರೆ ಎಳೆದಿದ್ದಾರೆ.
ತಮ್ಮ ನಡುವೆ ಉತ್ತಮ ಬಾಂಧವ್ಯ ಇದೇ ಎನ್ನುವುದನ್ನು ತಿಳಿಸುವ ಸಲುವಾಗಿ ಯಶ್ ಮತ್ತು ಹೊಂಬಾಳೆ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತಮ್ಮ ನಡುವಿನ ಬಾಂದವ್ಯಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದವರಿಗೆ ಚಾಟಿ ಬೀಸಿದ್ದಾರೆ.
ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭಕೋರಿದೆ. ಅಂತೆಯೇ ರಾಕಿಮಗ್ ಸ್ಟಾರ್ ಯಶ್ ಅವರೂ ಕೂಡ ಕಾಂತಾರ ಚಾಪ್ಟರ್ 1 ಹಾಗೂ ಸಲಾರ್ ಸಿನಿಮಾಗೆ ಅಭಿನಂದನೆ ತಿಳಿಸಿದ್ದು, ಎರಡೂ ಸಿನಿಮಾಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಸುಳ್ಳುಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಯಶ್ ಮುಂದಿನ ಸಿನಿಮಾ ಯಾವುದು ಅಂತಾ ಕಾಯುತ್ತಿದ್ದ ಅಭಿಮಾನಿಗಳ ಕಾತರಕ್ಕೆ ಡಿಸೆಂಬರ್ 8 ರಂದು ತೆರೆ ಬಿದ್ದಿತ್ತು.
ಕೆಜಿಎಫ್ ಚಿತ್ರ ಸರಣಿಯ ಬಳಿಕ ಕಥೆ ಆರಿಸಿಕೊಳ್ಳುವಲ್ಲಿ ತೀರ ನಿಗಾ ವಹಿಸಿದ ಯಶ್ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಹಲವಾರು ನಿರ್ದೇಶಕರ ಹೆಸರು ಕೇಳಿ ಬಂದಿತ್ತು. ಯಶ್ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಹಾಗೂ ಈ ಸಿನಿಮಾದ ಹೆಸರೇನು ಎಂಬ ಅಭಿಮಾನಿಗಳ ಕುತೂಹಲಕ್ಕೆ ಡಿಸೆಂಬರ್ 8 ರಂದು ತೆರೆ ಬಿದ್ದಿತ್ತು.
ಮಲಯಾಳಂನ ಮಾಜಿ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಜತೆ ತನ್ನ ಮುಂದಿನ ಚಿತ್ರ ʼಟಾಕ್ಸಿಕ್ʼ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು.
ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ ಬಂಡವಾಳ ಹೂಡಿದೆ. ಚಿತ್ರ 2025ರ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.