Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕ್ರಾಂತಿ ಗೀತೆ ಬಿಡುಗಡೆ ಮಾಡಿದ ದರ್ಶನ್, ಜ. 26 ರಂದು ಚಿತ್ರ ತೆರೆಗೆ

ಮೈಸೂರು: ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಗಣರಾಜ್ಯೋತ್ಸವದಂದು, ಸಿನಿಮಾ ಬಿಡುಗಡೆಗೆ ಚಿತ್ರ ತಂಡ ನಿರ್ಧರಿಸಿದ್ದು, ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಕ್ರಾಂತಿ ಚಿತ್ರದ ಮೊದಲನೇ ಹಾಡನ್ನು ಬಿಡುಗಡೆ ಮಾಡಲಾಗಿದ್ದು ಈ ಸಂಬಂಧ ನಟ ದರ್ಶನ್‌ ಮತ್ತು ಚಿತ್ರ ತಂಡ ನಗರದ ಹೊಟೇಲೊಂದರಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಇಡೀ ಚಿತ್ರತಂಡ ಕ್ರಾಂತಿಯ ಸಂಕೇತವಾದ ಕೆಂಪು ದಿರಿಸಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ನಟಿ ರಚಿತಾ ರಾಮ್, ನಿರ್ದೇಶಕ ವಿ ಹರಿಕೃಷ್ಣ, ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶ ಸೇರಿದಂತೆ ಇಡೀ ಚಿತ್ರ ತಂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿತ್ತು.

ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಿದ ದರ್ಶನ್, ಸಿನಿಮಾದ ಕಥಾವಸ್ತುವಿನೊಂದಿಗೆ ರಾಜಿಯಾಗದೇ ಮಾಸ್ ವೀಕ್ಷಕರನ್ನು ರಂಜಿಸುವುದೇ ತಮ್ಮ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ.

ನಿರ್ದೇಶಕ ವಿ ಹರಿಕೃಷ್ಣ ಅವರ ಕ್ರಾಂತಿ ಸರ್ಕಾರಿ ಶಾಲೆಗಳ ಸುತ್ತ ಹೆಣೆಯಲಾಗಿರುವ ಕಥಾವಸ್ತುವಾಗಿದ್ದು, ಸರ್ಕಾರಿ ಶಾಲೆಯಲ್ಲೇ ಓದಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸರ್ ಎಂ ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರುಗಳ ಉದಾಹರಣೆಯನ್ನು ನೀಡಿದ್ದಾರೆ.

ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಗಳ ಮಹತ್ವ ಕಡಿಮೆಯಾಗುತ್ತಿದ್ದು, ಶಿಕ್ಷಣ ಖಾಸಗೀಕರಣದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಾಂತಿ ಈ ಎಲ್ಲಾ ಪ್ರಮುಖ ಥೀಮ್ ಅನ್ನು ನಿಭಾಯಿಸುತ್ತದೆ ಹಾಗೂ ಅಕ್ಷರ ಕ್ರಾಂತಿ ಸಿನಿಮಾದ ಸಂದೇಶವಾಗಿರಲಿದೆ ಎಂದು ದರ್ಶನ್ ಹೇಳಿದ್ದಾರೆ.

ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ನಡಿಯಲ್ಲಿ ಶೈಲಜಾ ನಾಗ್ ಕ್ರಾಂತಿ ಸಿನಿಮಾದ ನಿರ್ಮಾಪಕಿಯಾಗಿದ್ದು, ಬಿ ಸುರೇಶ ಸಹ ನಿರ್ಮಾಪಕರಾಗಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆ ದಿನದಂದೇ ಚಿತ್ರ ಬಿಡುಗಡೆಗೆ ಸೂಕ್ತ ದಿನ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಯಜಮಾನ ಸಿನಿಮಾ ಬಳಿಕ ಚಿತ್ರ ತಂಡ ದರ್ಶನ್ ಜೊತೆಗೆ ಎರಡನೇ ಬಾರಿಗೆ ಜೊತೆಗೂಡಿದ್ದು, ಪ್ರೊಡಕ್ಷನ್ ಹೌಸ್ ಆಗಿ ನಾವು ಹಲವು ಆಫ್ಬೀಟ್ ಚಲನಚಿತ್ರಗಳನ್ನು ಮಾಡಿದ್ದೇವೆ. ಆದರೆ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಅದರಲ್ಲೂ ದರ್ಶನ್ ಅವರಂತಹ ಸೂಪರ್ ಸ್ಟಾರ್ ಮೂಲಕ ವಿಷಯಾಧಾರಿತ ಕಥೆ ನಿರೂಪಣೆ ಮಾಡುವುದು ನಿಜವಾದ ಸವಾಲು ಈ ದೃಷ್ಟಿಯಿಂದ ಹರಿಕೃಷ್ಣ ಉತ್ತಮ ಕೆಲಸ ಮಾಡಿದ್ದಾರೆ ಕ್ರಾಂತಿ ಸಿನಿಮಾ ಕಮರ್ಷಿಯಲ್ ಮನರಂಜನೆ ಹಾಗೂ ಕಂಟೆಂಟ್ ಎರಡೂ ಹೊಂದಿರುವ ಉತ್ತಮ ಚಿತ್ರವಾಗಿರಲಿದೆ ಎಂದು ಚಿತ್ರ ತಂಡ ವಿಶ್ವಾಸ ವ್ಯಕ್ತಪಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ