ಮದುವೆಯ ಬಳಿಕ ನಟಿ ಪೂಜಾ ಗಾಂಧಿಯವರು ತಮ್ಮ ಪತಿ ವಿಜಯ್ ಘೋರ್ಪಡೆ ಅವರೊಂದಿಗೆ ಕವಿಶೈಲಕ್ಕೆ ಭೇಟಿ ನೀಡಿದ್ದರು. ಇದೀಗ ಮುಂಗಾರು ಮಳೆ ಚಿತ್ರದ ಚಿತ್ರೀಕರಣ ನಡೆದ ಮನೆಗೆ ಮಳೆ ಹುಡುಗಿ ವಿಸಿಟ್ ಕೊಟ್ಟಿದ್ದಾರೆ.
ಮುಂಗಾರುಮಳೆ ಮನೆಗೆ ಹೊಗಿರುವ ವಿಡಿಯೋವನ್ನು ನಟಿ ಪೂಜಾಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಿನಿಮಾ ಚಿತ್ರೀಕರಣದ ಸಿಹಿ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಕುಪ್ಪಳಿ ಬಳಿಕ ಮುಂಗಾರು ಮಳೆ ಚಿತ್ರದ ಶೂಟಿಂಗ್ ನಡೆದಿದ್ದ ಸಕಲೇಶಪುರಕ್ಕೆ ಭೇಟಿ ಕೊಟ್ಟಿರುವ ಪೂಜಾ ಗಾಂಧಿ ಮುಂಗಾರು ಮಳೆ ಮನೆಯಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದು, ಮನೆಯ ವಿಡಿಯೋ ಮಾಡುತ್ತಾ ಮಾತನಾಡಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ನಡೆದಿದ್ದ ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದು, ಮನೆಯ ಯಾವ ಭಾಗದಲ್ಲಿ ಯಾವ ಸೀನ್ ಚಿತ್ರೀಕರಣ ಮಾಡಲಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಇನ್ನು ತಮ್ಮ ಅಚ್ಚು ಮೆಚ್ಚಿನ ಜಾಗವಾದ ಔಟ್ ಹೌಸ್ ನಲ್ಲಿ ಪದ್ಮಜಾ ರಾವ್, ಸುಧಾ ಬೆಳವಾಡಿ ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಅತ್ಯಂತ ಸಂತೋಷದಿಂದ ಮೆಲುಕು ಹಾಕಿರುವ ಪೂಜಾಗಾಂಧಿ ಇದು ನಮ್ಮೆಲ್ಲರ ಅಚ್ಚುಮೆಚ್ಚಿನ ಜಾಗವಾಗಿತ್ತು. ನಮ್ಮೆಲ್ಲರಿಗೂ ಇದು ಮೇಕಪ್ ರೂಮ್ ಆಗಿತ್ತು. ಎಲ್ಲರೂ ಇಲ್ಲಿ ಬಹಳಾ ಎಂಜಾಯ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನಾನು 2006 ರಲ್ಲಿ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದೆ. ಮುಂಗಾರು ಮಳೆ ಸಿನಿಮಾಗೆ ನಾಯಕಿಯಾಗಿ ಯೋಗರಾಜ್ ಭಟ್ ಅವರು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದರು. ಅವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. 2006 ರಲ್ಲಿ ನಾನು ಇಲ್ಲಿಗೆ ಬಂದಾಗ ಈ ಮನೆ, ಜನ ಎಲ್ಲರೂ ಹೊಸಬರು. ಆದರೆ ಈಗ ನಾವೆಲ್ಲರೂ ಚಿರಪರಿಚಿತರು ಎಂದಿದ್ದಾರೆ ನಟಿ ಪೂಜಾ ಗಾಂಧಿ.
ಮದುವೆಯ ಬಳಿಕ ನಾನು ಇಲ್ಲಿಗೆ ಬರಲೇ ಬೇಕು ಎಂದುಕೊಂಡಿದ್ದೆ. ಅದರಂತೆ ಬಂದಿದ್ದೇನೆ. ಈ ಜಾಗಗಳನ್ನು ನೋಡಿದ ಬಳಿಕ ನನ್ನ ಹಳೆಯ ನೆನಪುಗಳು ಮರುಕಳಿಸಿವೆ. ಇದರಿಂದ ಹೇಳಲಾರದಷ್ಟು ಖುಷಿಯಾಗುತ್ತಿದೆ. ಇದು ನನ್ನ ಗ್ರಾಟಿಟಿಟ್ಯೂಡ್ ಜರ್ನಿ ಎಂದಿದ್ದಾರೆ.