ಸದ್ಯ ಬೆಂಗಳೂರಿನಲ್ಲಿ ಕರಾವಳಿ ಭಾಗದ ಕ್ರೀಡಾ ಆಚರಣೆಯಾದ ಕಂಬಳವನ್ನು ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಉದ್ಯಾನನಗರಿಯಲ್ಲಿ ಕಂಬಳ ನಡೆಯುತ್ತಿದ್ದು ಇತಿಹಾಸ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಜವಾಬ್ದಾರಿಯನ್ನು ಪುತ್ತೂರು ಶಾಸಕ ಅಶೋಕ್ ರೈ ಹೊತ್ತುಕೊಂಡಿದ್ದಾರೆ.
ಇನ್ನು ಕಂಬಳಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದ್ದು ಹಲವಾರು ತಾರೆಯರಿಗೆ ಕಂಬಳಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಶೋಕ್ ರೈ ಬೆಂಗಳೂರು ಕಂಬಳಕ್ಕೆ ಯಾವೆಲ್ಲಾ ತಾರೆಯರು ಬರಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.
ತುಳುವಿನಲ್ಲಿಯೇ ಹೇಳಿಕೆ ನೀಡಿದ್ದ ಅಶೋಕ್ ರೈ “ಅನುಷ್ಕಾ ಶೆಟ್ಟಿ ಬರ್ತಾರೆ. ಐಶ್ವರ್ಯಾ ರೈ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ಕೆ ಎಲ್ ರಾಹುಲ್ ಮತ್ತೆ ದೀಪಿಕಾ ಪಡುಕೋಣೆ ಬರುತ್ತಾರೆ. ಆ ಮೇಲೆ ರಜನಿಕಾಂತ್ ಕೂಡ ಬರುವ ಸಾಧ್ಯತೆ ಇದೆ. ಹಾಗೇ ಕನ್ನಡದಿಂದ ಯಶ್.. ನನಗೆ ಕೇವಲ ಹೆಸರಷ್ಟೇ ಗೊತ್ತು. ಯಶ್ ಪುಶ್ ಬಗ್ಗೆ ಗೊತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೆ ವಿಡಿಯೊ ಕಟ್ ಆಗಿದ್ದು ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ರೊಚ್ಚಿಗೆದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಶೋಕ್ ರೈ ವಿರುದ್ಧ ಕಾಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಇನ್ನು ಯಶ್ ಗೊತ್ತಿಲ್ಲ ಎಂಬ ಹೇಳಿಕೆ ಇತ್ತೀಚೆಗೆ ಹೆಚ್ಚಾಗಿಬಿಟ್ಟಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ತೆಲುಗು ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಕೆಜಿಎಫ್ ಬರುವ ಮುಂಚೆ ಯಶ್ ದೊಡ್ಡ ನಟನಲ್ಲ, ಯಶ್ ಯಾರೆಂದು ಗೊತ್ತಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೂ ಮುನ್ನ ತೆಲುಗು ನಟ ರವಿತೇಜಾ ಸಹ ಇಂತಹದ್ದೇ ಹೇಳಿಕೆಯನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೀಡಾಗಿದ್ದರು.