Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಥಿಯೇಟರ್‌ ಒಳಗೆ ಅಭಿಮಾನಿಗಳ ದುರ್ವರ್ತನೆ: ಪಟಾಕಿ ಸಿಡಿಸಬೇಡಿ ಎಂದ ಸಲ್ಮಾನ್‌ ಖಾನ್‌

ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಸಿನಿಮಾ ಟೈಗರ್‌-3 ಭಾನುವಾರ (ನ.12) ದಂದು ರಿಲೀಸ್‌ ಅಗಿದೆ. ಅಭಿಮಾನಿಗಳ ಕ್ರೇಜ್‌ ಹೇಳ ತೀರದು, ಸಲ್ಲುವನ್ನು ಭಾಯ್‌ ರೀತಿಯಲ್ಲಿ ದೇಶಾದ್ಯಂತ ಅಭಿಮಾನಿಗಳು ಬರಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ರಿಲೀಸ್‌ ಆದ ಟೈಗರ್-‌3ಗೆ ಅದ್ದೂರಿ ವೆಲ್‌ಕಮ್‌ ದೊರೆಯಿತು. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದರೂ ಅಭಿಮಾನಿಗಳಿಗೆ ಮೆಚ್ಚಿನ ಸಿನಿಮಾ ಆಗಿದ್ದು ಸುಳ್ಳಲ್ಲ. ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ತಲುಪಿದ್ದು, ಸಲ್ಲು ಕಟೌಟ್‌ಗೆ ಹಾರ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಾ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರಮಂದಿರ ಒಳಗಡೆ ಪಟಾಕಿ ಸಿಡಿಸಿದ್ದು, ಸಲ್ಲು ಅಭಿಮಾನಿಗಳ ದುರ್ವರ್ತನೆಯಿಂದ ಚಿತ್ರ ವೀಕ್ಷಣೆಗೆ ಬಂದಿದ್ದವರು ಕಕ್ಕಾಬಿಕ್ಕಿಯಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಪಟಾಕಿ ಸಿಡಿದಿದ್ದು, ವೀಕ್ಷಕರೆಲ್ಲಾ ಎದ್ನೊ ಬಿದ್ನೋ ಎಂದು ಥಿಯೇಟರ್‌ನಿಂದ ಕಾಲ್ಕಿತ್ತಿದ್ದಾರೆ.

ಈ ಘಟನೆಯಿಂದ ಹಲವಾರು ಜನರು ಕಾಲ್ತುಳಿತಕ್ಕೆ ಒಳಗಾಗಿದ್ದು, ಹಲವಾರು ಮಂದಿಗೆ ಗಾಯಗಳಾಗಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ ಚಿತ್ರಮಂದಿರದಲ್ಲಿ ನಡೆದ ಘಟನೆ: ಸಲ್ಲು ಭಾಯ್‌ ಎಂಟ್ರಿ ವೇಳೆ ಸ್ಕ್ರೀನ್‌ ನ ಒಂದು ಬದಿಯಲ್ಲಿ ಪಟಾಕಿ ಸಿಡಿಸಿದ್ದಾರೆ. ಚಿತ್ರಮಂದಿರ ತುಂಬೆಲ್ಲಾ ರಾಶಿ ರಾಶಿ ಕಸ, ದಟ್ಟ ಹೊಗೆ ಆವರಿಸಿದ್ದು ಕೆಲಕಾಲ ಆತಂಕ ಮನೆಮಾಡಿತ್ತು. ಅಂದಹಾಗೆ ಈ ಘಟನೆ ನಡೆದದ್ದು, ಮಹಾರಾಷ್ಟ್ರದ ನಾಸಿಕ್‌ನ ಮಾಲೇಗಾಂವ್‌ ಮೋಹನ್‌ ಚಿತ್ರಮಂದಿರದಲ್ಲಿ.

ಸಲ್ಲು ಫ್ಯಾನ್ಸ್‌ ವಿರುದ್ಧ ಖಂಡನೆ: ಸೋಷಿಯಲ್‌ ಮೀಡಿಯಾದಲ್ಲಿ ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಸಲ್ಲು ಫ್ಯಾನ್ಸ್‌ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಿತಿ ಮೀರಿದ ಹುಚ್ಚುತನ ಇದಾಗಿದ್ದು, ಚಿತ್ರಮಂದಿರದಲ್ಲಿ ಇವರಿಗೆ ಪಟಾಕಿ ಹಚ್ಚಲು ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಸಲ್ಲು ರಿಯಾಕ್ಷನ್‌ : “ನನ್ನ ಎಲ್ಲಾ ಅಭಿಮಾನಿಗಳಿಗೆ ಬೆಂಕಿ ಪಟಾಕಿಗಳನ್ನು ಆಡಿಟೋರಿಯಂ ಒಳಗೆ ತೆಗೆದುಕೊಂಡು ಹೋಗಬೇಡಿ ಎಂದು ವಿನಂತಿಸುತ್ತೇನೆ ಬೆಂಕಿಯಿಂದ ದೊಡ್ಡ ಅನಾಹುತ ಆಗಬಹುದು ಮತ್ತು ಇದರಿಂದಾಗಿ ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವಿದೆ. ಚಿತ್ರಮಂದಿರದೊಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಲು ಬಿಡಬೇಡಿ ಮತ್ತು ಪ್ರವೇಶ ದ್ವಾರದಲ್ಲಿ ಸೆಕ್ಯೂರಿಟಿ ನಿಲ್ಲಿಸುವಂತೆ ಥಿಯೇಟರ್ ಮಾಲೀಕರಿಗೆ ನನ್ನ ವಿನಂತಿ.  ಚಿತ್ರವನ್ನು ಆನಂದಿಸಿ ಆದರೆ ದಯವಿಟ್ಟು ಇದನ್ನು ತಪ್ಪಿಸಿ” ಎಂದು ಅಭಿಮಾನಿಗಳಲ್ಲಿ ಸಲ್ಲು ಮನವಿ ಮಾಡಿದ್ದಾರೆ.

ಟೈಗರ್‌-3 ಚಿತ್ರವನ್ನು ಮನೀಷ್‌ ಶರ್ಮಾ ನಿರ್ದೇಶಿಸಿದ್ದು, ಯಶ್‌ರಾಜ್‌ ಫಿಲಂಸ್‌ ನಿರ್ಮಾಣ ಮಾಡಿದೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ, ರಿದ್ಧಿ ಡೋಗ್ರಾ, ಅಶುತೋಷ್‌ ರಾಣಾ, ರೇವತಿ, ವಿಶೇಷ ಪಾತ್ರದಲ್ಲಿ ಶಾರುಖ್‌ ಖಾನ್‌, ಹೃತಿಕ್‌ ರೋಷನ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ