Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಹೇಶ್‌ ಬಾಬು ತಂದೆ ಕೃಷ್ಣ ಘಟ್ಟಮನೇನಿ ನಿಧನ

ಹೈದರಾಬಾದ್: ನಟ ಮಹೇಶ್​ ಬಾಬು ಅವರ ತಂದೆ, ಸೂಪರ್​ ಸ್ಟಾರ್​​ ಕೃಷ್ಣ ಘಟ್ಟಮನೇನಿ ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಸುಕಿನ 4 ಗಂಟೆಗೆ ನಿಧನರಾದರು.

ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕೃಷ್ಣ ಘಟ್ಟಮನೇನಿ ಅವರ ‘ತೇನೆಮನಸಲು’, ‘ಸಾಕ್ಷಿ’, ‘ಅಲ್ಲೂರಿ ಸೀತಾರಾಮರಾಜು’ ಮುಂತಾದ ಚಿತ್ರಗಳು ಜನಪ್ರಿಯವಾಗಿದ್ದವು. ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಅವಿಭಜಿತ ಆಂಧ್ರಪ್ರದೇಶದ ಜನರು ‘ಬಾಂಡ್ ಕೃಷ್ಣ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು ಹಾಗೂ ಹಲವು ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಕೃಷ್ಣ ಅವರು ಸೂಪರ್ ಸ್ಟಾರ್​ ಆಗಿ ಮಿಂಚಿದವರು. 1965ರಲ್ಲಿ ಅವರು ನಟನೆಯ ಜರ್ನಿ ಆರಂಭಿಸಿದ್ದರು. ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದರು. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.

ಸೆಪ್ಟೆಂಬರ್​ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್​ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಒಟ್ಟಿನಲ್ಲಿ ಮಹೇಶ್​ ಬಾಬು ಕುಟುಂಬಕ್ಕೆ 2022ರಲ್ಲಿ ಒಂದರಮೇಲೊಂದು ಕಷ್ಟ ಎದುರಾಗುತ್ತಿದೆ. ಕೃಷ್ಣ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಕೃಷ್ಣ ತೇನಿಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು, ಸಿಂಹಾಸನಂ, ಪಾಡಿಪಂಟಲು, ಪಚ್ಚನಿಸಂಸಾರಂ, ಪಂಡಂಟಿಕಾಪುರಂ, ದೇವಡು ಚೇಸಿನ ಮನಷುಲು, ಅಗ್ನಿಪರ್ವತಂ, ಕಂಚುಕಾಗಡ, ನಂಬರ್​ ಒನ್​, ಬ್ರಹ್ಮಾಸ್ತ್ರಂ, ಮೋಸಗಾಳ್ಳಕು ಮೋಸಗಾಡು, ಮುಂದಡುಗು, ಕಂಚುಕಾಗಡ, ವಾರಸುಡು, ಒಸೆಯ್ ರಾಮುಲಮ್ಮ, ಪ್ರಜಾರಾಜ್ಯಂ, ಗೂಢಚಾರಿ 116, ಏಜೆಂಟ್ ಗೋಪಿ, ಅಶ್ವತ್ಥಾಮ, ಇದ್ದರು ದೊಂಗಲು, ಮುಗ್ಗುರು ಕೊಡುಕಲು, ಅನ್ನದಮ್ಮುಲ ಸವಾಲ್​, ಕೈದಿ ರುದ್ರಯ್ಯ, ಈನಾಡು ಸೇರಿದಂತೆ 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ಬಣ್ಣ ಹಚ್ಚಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ