Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೌನ ಮುರಿದ ಕಿಚ್ಚ: ನಿರ್ಮಾಪಕರ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ!

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ, ವಿತರಕ ಎಂ.ಎನ್‌. ಕುಮಾರ್‌ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್‌ ಕೊನೆಗೂ ಮೌನ ಮುರಿದಿದ್ದಾರೆ. “ಕಿಚ್ಚ ಸುದೀಪ್‌ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್‌ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್‌ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್‌ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್‌ ಕೇಸ್‌ ಕೂಡ ದಾಖಲಿಸಿದ್ದಾರೆ.

ಇತ್ತೀಚೆಗೆ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಕಿಚ್ಚನ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಹಣ ಪಡೆದು ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದರು. ಆದರೆ ಈ ವಿಚಾರವಾಗಿ ಮೌನವಾಗಿದ್ದ ಕಿಚ್ಚ ಇದೀಗ ಕಾನೂನು ಮೊರೆ ಹೋಗಿದ್ದಾರೆ.

ಸುದೀಪ್‌ ಪರ ವಕೀಲರು ನೋಟಿಸ್‌ ಕಳುಹಿಸಿದ್ದಾರೆ. “ಸುದೀಪ್‌ ಅವರು ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿರುವ ಪ್ರತಿಭಾನ್ವಿತ ನಟರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸಮಾಜ ಸೇವೆಯ ಮೂಲಕವೂ ಜನರಿಗೆ ಮಾದರಿಯಾಗಿದ್ದಾರೆ. ಅವರ ವಿರುದ್ಧ ನೀವು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿವೆ. ಹಾಗಾಗಿ ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ಕೊಡಬೇಕು” ಎಂದು ಸುದೀಪ್‌ ಪರ ವಕೀಲರು ಕಳುಹಿಸಿದ ಲೀಗಲ್‌ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಿಚ್ಚ ಕಳುಹಿಸಿದ ನೊಟೀಸ್​ನಲ್ಲಿ ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ. ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ ದಂಡ ಕಟ್ಟಿಕೊಡಿ’ ಎಂದು ಹೇಳಿದ್ದಾರೆ.

ಸುದೀಪ್‌ ಅವರ ವಿರುದ್ಧ ನೀವು ಮಾಡಿರುವ ಆರೋಪಗಳಿಗೆ ಮುದ್ರಣ, ಎಲೆಕ್ಟ್ರಾನಿಕ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಹಾಗೆಯೇ, ಅವರ ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು. ನೋಟಿಸ್‌ ಕಳುಹಿಸಲು ತಗುಲಿದ 50 ಸಾವಿರ ರೂಪಾಯಿಯನ್ನೂ ನೀವೇ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ