Mysore
15
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ʼಜೈಲರ್‌’ ಯಶಸ್ಸು: ನಿರ್ಮಾಪಕರಿಂದ ರಜಿನಿಕಾಂತ್‌, ನೆಲ್ಸನ್‌ಗೆ ದುಬಾರಿ ಕಾರು ಉಡುಗೊರೆ

ಚೆನ್ನೈ: ‘ಜೈಲರ್‌’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈಗಾಗಲೇ 600 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಯಶಸ್ಸಿನ ಸಂಭ್ರಮವನ್ನು ಚಿತ್ರದ ನಿರ್ಮಾಣ ಸಂಸ್ಥೆಯಾದ ಸನ್‌ ಪಿಕ್ಚರ್ಸ್‌, ನಟ ರಜಿನಿಕಾಂತ್‌ ಹಾಗೂ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಜೊತೆ ಹಂಚಿಕೊಂಡಿದೆ.

ರಜಿನಿಕಾಂತ್‌ ಅವರಿಗೆ ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿದಿ ಮಾರನ್ ಹೊಚ್ಚ ಹೊಸ BMW ಕಾರನ್ನು ಉಡುಗೊರೆಯಾಗಿ ನೀಡಿದ್ದು, ಚಿತ್ರದ ಲಾಭಾಂಶವಾಗಿ ಸುಮಾರು 100 ಕೋಟಿ ರೂ. ಮೊತ್ತದ ಚೆಕ್‌ ಅನ್ನೂ ವಿತರಿಸಿದ್ದಾರೆ ಎಂದು ವರದಿಯಾಗಿದೆ.

ಜೈಲರ್ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರಿಗೆ ಕೂಡಾ ಚಿತ್ರದ ಲಾಭದಿಂದ ಒಂದಂಶವನ್ನು ಹಾಗೂ ಹೊಸ ಪೋರ್ಷ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

ಸನ್ ಪಿಕ್ಚರ್ಸ್ ಸಿಇಒ ಮತ್ತು ‘ಜೈಲರ್’ನ ಫೈನಾನ್ಶಿಯರ್ ಕಲಾನಿದಿ ಮಾರನ್ ಅವರು ಆಗಸ್ಟ್ 31 ರಂದು ರಜನಿಕಾಂತ್ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಭೇಟಿ ಮಾಡಿ ಚೆಕ್‌ ವಿತರಿಸಿದ್ದಾರೆ.

ರಜನಿಕಾಂತ್ ಅವರು ಲಾಭ ಹಂಚಿಕೆ ಆಧಾರದ ಮೇಲೆ ಸನ್ ಪಿಕ್ಚರ್ಸ್ ಜೊತೆ ‘ಜೈಲರ್’ ಒಪ್ಪಂದಕ್ಕೆ ಸಹಿ ಹಾಕಿದ್ದರು.

ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಚಿತ್ರವು ಈಗಾಗಲೇ ಮೂರು ವಾರಗಳಿಂದ ಚಿತ್ರಮಂದಿರಗಳಲ್ಲಿದ್ದು, ಈ ಚಿತ್ರವು 2023 ರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರ ತಾರಾಗಣದಲ್ಲಿ ರಜನಿಕಾಂತ್, ರಮ್ಯಾ ಕೃಷ್ಣನ್, ಶಿವರಾಜಕುಮಾರ್, ಮೋಹನ್ ಲಾಲ್, ಟೈಗರ್ ಶ್ರಾಫ್, ಸುನೀಲ್, ತಮನ್ನಾ ಭಾಟಿಯಾ, ವಿನಾಯಕನ್, ವಸಂತ್ ರವಿ, ಮಿರ್ನಾ, ಯೋಗಿ ಬಾಬು ಮತ್ತು ಜಾಫರ್ ಸಾದಿಕ್ ಮೊದಲಾದವರು ಇದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!