ನಿನ್ನೆಯಷ್ಟೇ ( ನವೆಂಬರ್ 27 ) ಚಾಪ್ಟರ್ ಒಂದರ ಮುಹೂರ್ತ ಆಚರಿಸಿಕೊಂಡ ಕಾಂತಾರ ಚಿತ್ರತಂಡ ವಿಶೇಷ ಫಸ್ಟ್‌ಲುಕ್ ಟೀಸರ್ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿದೆ.
ಕಾಂತಾರ 2ನಲ್ಲಿ ಕರಾವಳಿ ಭಾಗದ ಜನರ ದೈವಾರಾಧನೆ ಭೂತಕೋಲದ ಮಹತ್ವವನ್ನು ಸಾರಿ ಹೇಳಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು. ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.
ಈ ಬಾರಿ ದೊಡ್ಡ ಬಜೆಟ್‌ನೊಂದಿಗೆ ಚಿತ್ರವನ್ನು ಆರಂಭಿಸಿರುವ ಚಿತ್ರತಂಡ ಈ ಫಸ್ಟ್‌ಲುಕ್ ಟೀಸರ್ ಮೂಲಕ ದೇಶವ್ಯಾಪಿ ಸದ್ದು ಮಾಡಿದೆ. ಈ ಸದ್ದು ಎಷ್ಟರ ಮಟ್ಟಿಗೆ ಇದೆ ಎಂದರೆ ಗೂಗಲ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಂತಾರ ಅಧ್ಯಾಯ 1ರ ಬಿಡುಗಡೆ ದಿನಾಂಕದ ಫೋಟೊವನ್ನು ಹಂಚಿಕೊಂಡು ಫಸ್ಟ್‌ಲುಕ್ ಬಗ್ಗೆ ಬರೆದುಕೊಂಡಿದೆ.
“2024 ಮತ್ತಷ್ಟು ಕಾತರತೆಯನ್ನು ಪಡೆದುಕೊಂಡಿದೆ. ಈಗ ತಾನೇ ಕಾಂತಾರ ಫಸ್ಟ್‌ಲುಕ್ ಟೀಸರ್ ನೋಡಿದೆ ಹಾಗೂ ವೋಹ್….. ಎಂದು ಕೂಗಬೇಕೆನಿಸುತ್ತಿದೆ” ಎಂದು ಗೂಗಲ್ ಇಂಡಿಯಾ ಬರೆದುಕೊಂಡಿದೆ. ಕನ್ನಡ ಚಿತ್ರವೊಂದರ ಬಗ್ಗೆ ಗೂಗಲ್ ಈ ರೀತಿಯ ಟ್ವೀಟ್ ಮಾಡಿರುವುದನ್ನು ಕಂಡು ಕನ್ನಡಿಗರು ಹಾಗೂ ಕಾಂತಾರ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.