ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ಆರ್ ಮಯಿಲ್‌ಸಾಮಿ (57) ಅವರು ಭಾನುವಾರ ಮುಂಜಾನೆ ಹಠಾತ್ತನೆ ನಿಧನ ಹೊಂದಿದ್ದಾರೆ.
ವರದಿಗಳ ಪ್ರಕಾರ ಮಯಿಲ್‌ಸಾಮಿ ಅವರಿಗೆ ಶನಿವಾರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಅವರನ್ನು ಕುಟುಂಬಸ್ಥರು ಪೋರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದು, ಬಳಿಕ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಯಿಲ್‌ಸಾಮಿ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಸ್ಟ್ಯಾಂಡ್ ಅಪ್ ಹಾಸ್ಯನಟ, ನಿರೂಪಕ, ರಂಗಭೂಮಿ ಕಲಾವಿದರಾಗಿಯೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಹಾಸ್ಯ ಕಾರ್ಯಕ್ರಮವೊಂದರ ನಿರೂಪಕ ಹಾಗೂ ತೀರ್ಪುಗಾರರಾಗಿ ಮೊದಲ ಬಾರಿಗೆ ಅವರು ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 1984ಲ್ಲಿ ಬಿಡುಗಡೆಯಾದ ನಿರ್ಮಾಪಕ ಹಾಗೂ ನಟ ಕೆ ಭಾಗ್ಯರಾಜ್ ಅವರ ಚಿತ್ರ ಧವನಿ ಕನವುಗಲ್ ಮೂಲಕ ಹಾಸ್ಯ ನಟರಾಗಿ ತಮಿಳು ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ಮಯಿಲ್‌ಸಾಮಿ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.





