Mysore
23
few clouds

Social Media

ಸೋಮವಾರ, 26 ಜನವರಿ 2026
Light
Dark

ನಟ ದುನಿಯಾ ವಿಜಯ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಮರುಜೀವ

ಬೆಂಗಳೂರು: ನಟ ದುನಿಯಾ ವಿಜಯ್‌ ಹಾಗೂ ಜಿಮ್‌ ತರಬೇತುದಾರ ಪಾನಿಪೂರಿ ಕಿಟ್ಟಿ, ಆತನ ಸಂಬಂಧಿ ಮಾರುತಿಗೌಡ ನಡುವೆ 2018ರಲ್ಲಿ ನಡೆದಿದ್ದ ಗಲಾಟೆ ಸಂಬಂಧ ಮಂಗಳವಾರ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐದು ವರ್ಷಗಳ ಬಳಿಕ ಪ್ರಕರಣಕ್ಕೆ ಮರುಜೀವ ಬಂದಿದೆ. ಹೈಕೋರ್ಟ್‌ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

‘ಅಂದು ವಿಜಯ್‌ ಪುತ್ರ ಸಾಮ್ರಾಟ್‌ ಮೇಲೆ ಕಿಟ್ಟಿ ಹಾಗೂ ಮಾರುತಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಕಾರಿನಲ್ಲಿ ಮಾರುತಿಯನ್ನು ನಟ ವಿಜಯ್‌ ಕರೆದೊಯ್ದು ಹಲ್ಲೆ ನಡೆಸಿದ್ದರು’ ಎಂಬ ಆರೋಪ ಕೇಳಿಬಂದಿತ್ತು. ಪರಸ್ಪರ ದೂರುಗಳು ದಾಖಲಾಗಿದ್ದವು.

‘ಸಾಕ್ಷ್ಯಾಧಾರಗಳ ಕೊರತೆಯಿಂದ ಮಾರುತಿ ಹಾಗೂ ಕಿಟ್ಟಿ ವಿರುದ್ಧದ ಪ್ರಕರಣ ಕೈಬಿಡಲಾಗಿತ್ತು. ಅದನ್ನು ಹೈಕೋರ್ಟ್‌ನಲ್ಲಿ ವಿಜಯ್‌ ಪ್ರಶ್ನಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ಮತ್ತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಾಟೆಯಲ್ಲಿ ಹಲ್ಲೆಗೆ ಒಳಗಾಗಿದ್ದ ಮಾರುತಿ ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆ ಪಡೆದುಕೊಂಡಿದ್ದರು.

ಘಟನೆ ಏನು?: 2018ರ ಸೆ.22ರಂದು ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಅಲ್ಲಿಗೆ ವಿಜಯ್ ಹಾಗೂ ಅವರ ಪುತ್ರ ಸಾಮ್ರಾಟ್‌ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿ, ವಾಪಸ್‌ ಬರುವಾಗ ಪಾನಿಪೂರಿ ಕಿಟ್ಟಿ ಹಾಗೂ ವಿಜಯ್‌ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು.

‘ಮಾರುತಿಗೌಡ (ಕಿಟ್ಟಿಯ ಅಣ್ಣನ ಮಗ) ನನ್ನ ಪುತ್ರನನ್ನು ನೋಡಿಕೊಂಡು ಜೀವ ಬೆದರಿಕೆ ಹಾಕಿದ್ದ. ಅದಕ್ಕೆ ಸ್ಥಳದಲ್ಲಿ ನನ್ನ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು’ ಎಂದು ಅಂದು ವಿಜಯ್‌ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ಎದುರೂ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!