ಕಳೆದ ತಿಂಗಳು ನಟಿ ರಶ್ಮಿಕಾ ಮಂದಣ್ಣ ಅವರ ಎಡಿಟೆಡ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸದ್ದು ಮಾಡಿತ್ತು. ಜಾರಾ ಪಾಟೀಲ್ ಎಂಬಾಕೆಯ ವಿಡಿಯೊದಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಕಿಡಿಗೇಡಿಗಳು ಹರಿಬಿಟ್ಟಿದ್ರು.
ಅರೆಬೆತ್ತಲೆ ಪ್ರದರ್ಶನವಿದ್ದ ಈ ವಿಡಿಯೊ ನೋಡಿದ್ದ ಹಲವರು ಇದು ರಶ್ಮಿಕಾ ಮಂದಣ್ಣ ಅವರದ್ದೇ ಎಂದು ನಂಬಿಬಿಟ್ಟಿದ್ದರು. ಆದರೆ ಹಲವಾರು ಸೆಲೆಬ್ರಿಟಿಗಳು ಸೇರಿದಂತೆ ಸ್ವತಃ ರಶ್ಮಿಕಾ ಮಂದಣ್ಣ ಸಹ ಈ ಕುರಿತು ಪ್ರತಿಕ್ರಿಯಿಸಿ ಖಂಡಿಸಿದ್ದರು. ಈ ವಿಡಿಯೊ ನೋಡಿ ನಿಜವಾಗಿಯೂ ನೋವಾಗಿದೆ, ಭಯವಾಗಿದೆ ಎಂದು ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಎಐ ತಂತ್ರಜ್ಞಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸರ್ಕಾರ ಈ ಪ್ರಕರಣದ ಮೇಲೆ ನಿಗಾ ವಹಿಸಿತ್ತು. ಇದೀಗ ವಿಡಿಯೊ ಬಿಡುಗಡೆಯಾಗಿ ವೈರಲ್ ಆದ ತಿಂಗಳ ಬಳಿಕ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಮಹಿಳಾ ಆಯೋಗ ನಗರ ಪೊಲೀಸರಿಗೆ ನೋಟಿಸ್ ಕಳುಹಿಸಿದ ಬೆನ್ನಲ್ಲೇ ದೆಹಲಿ ಗುಪ್ತಚರ ಫ್ಯೂಷನ್ ಹಾಗೂ ಸ್ಟ್ರಾಟೆಜಿಕ್ ಆಪರೇಷನ್ ನವೆಂಬರ್ 11ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿತ್ತು.
ಸದ್ಯ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿದ್ದ ಡಿವೈಸ್‌ಗಳ ಐಪಿ ಅಡ್ರೆಸ್ ಬಳಸಿ ನಾಲ್ವರು ಸಂಕಿತರನ್ನು ಬಂಧಿಸಲಾಗಿದ್ದು ವಿಡಿಯೊ ರಚಿಸಿದವರು ಯಾರು ಎಂಬ ವಿಷಯ ತನಿಖೆಯಿಂದ ಹೊರಬೀಳುತ್ತಾ ಕಾದು ನೋಡಬೇಕಿದೆ.