Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ವಿವಾದ: ಹೈಕೋರ್ಟ್​ ಮೆಟ್ಟಿಲೇರಿದ ನಟ ಗಣೇಶ್​

ಗುಂಡ್ಲುಪೇಟೆ : ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಸಿಲುಕಿರುವ ನಟ ‘ಗೋಲ್ಡನ್​ ಸ್ಟಾರ್​’ ಗಣೇಶ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ನೀಡಿರುವ ನೋಟೀಸ್​ಗೆ ತಡೆಯಾಜ್ಞೆ ನೀಡುವಂತೆ ಗಣೇಶ್​ ಮನವಿ ಮಾಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿ ಗ್ರಾಮದಲ್ಲಿ ಗಣೇಶ್ ಅವರು ಕಟ್ಟಡ ನಿರ್ಮಿಸುತ್ತಿದ್ದಾರೆ. ಪರಿಸರ ಸೂಕ್ಷ್ಮ ವಲಯದಲ್ಲಿ ಶಾಶ್ವತ ಕಟ್ಟಡ ನಿರ್ಮಿಸಬಾರದು. ಹೀಗಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆಯು ಗಣೇಶ್ ಅವರಿಗೆ ನೋಟೀಸ್​ ನೀಡಿತ್ತು. ಇದನ್ನು ಪ್ರಶ್ನಿಸಿ ಗಣೇಶ್ ಪರ ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ.

ವಕೀಲರ ವಾದವೇನು? : ‘ನಟ ಗಣೇಶ್ ಅವರು ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುತ್ತಿಲ್ಲ. 10 ಕಿಲೋ ಮೀಟರ್ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಈಗ ಮಾರ್ಪಾಟಾಗಿದೆ. ಕೇವಲ ಭೂಮಿ ಸಮತಟ್ಟು ಮಾಡಿ ಸ್ಥಳಾಂತರಿಸಬಹುದಾದ ಸ್ಟೀಲ್ ಕಟ್ಟಡವನ್ನಷ್ಟೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ನೋಟೀಸ್​ಗೆ ತಡೆಯಾಜ್ಞೆ ನೀಡಬೇಕು’ ಎಂದು ಗಣೇಶ್ ಪರ ವಕೀಲರು ಮನವಿ ಮಾಡಿದರು.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠವು ಗಣೇಶ್ ಸಲ್ಲಿಸಿದ್ದ ಕಾಮಗಾರಿಯ ಫೋಟೋಗಳನ್ನು ಪರಿಶೀಲಿಸಿದೆ. ‘ಕಾಂಕ್ರಿಟ್ ತಳಪಾಯದ ಕಟ್ಟಡದ ಕಾಮಗಾರಿ ನಡೆಸಲಾಗುತ್ತಿದೆ. ಶಾಶ್ವತ ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು’ ಮೌಖಿಕವಾಗಿ ಕೋರ್ಟ್​ ಅಭಿಪ್ರಾಯಪಟ್ಟಿದೆ. ಅರಣ್ಯ ಇಲಾಖೆ ನೀಡಿರುವ ನೋಟೀಸ್​ಗೆ 1 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ನಟ ಗಣೇಶ್​ಗೆ ಸೂಚಿಸಿದೆ.

ನಾಲ್ಕು ವಾರದಲ್ಲಿ ವಿಚಾರಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಗಣೇಶ್ ಅವರಿಗೆ ಸಂಪೂರ್ಣ ರಿಲೀಫ್ ಸಿಗದಿದ್ದರೂ ಈಗ ಮತ್ತೆ ವಿವಾದ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದೆ. ಅರಣ್ಯ ಇಲಾಖೆ ಗಣೇಶ್ ಅಹವಾಲನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!