ಬಾಲಿವುಡ್ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರು ಬುಧವಾರ (ಆಗಸ್ಟ್ 2) ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ತಮ್ಮ ಒಡೆತನದ ಎನ್ಡಿ ಸ್ಟುಡಿಯೋಸ್ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎನ್ಡಿ ಸ್ಟುಡಿಯೋದಲ್ಲಿ ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಶೂಟ್ ಮಾಡಲಾಗುತ್ತಿತ್ತು. ಆಗಸ್ಟ್ 9ರಂದು ಅವರು ಬರ್ತ್ಡೇ ಆಚರಿಸಿಕೊಳ್ಳಬೇಕಿತ್ತು. ಅದಕ್ಕೂ ಮೊದಲೇ ಅವರು ಪ್ರಾಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯ ಪೊಲೀಸರು ಇಲ್ಲಿಗೆ ಆಗಮಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ನಿತಿನ್ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
ನಿತಿನ್ ದೇಸಾಯಿ ಅವರ ಸಾವು ಅನೇಕರಿಗೆ ಶಾಕ್ ಮೂಡಿಸಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯಾವ ವಿಚಾರ ಕಾರಣ ಆಯಿತು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ನಿತಿನ್ ದೇಸಾಯಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನಿತಿನ್ ದೇಸಾಯಿ ಅವರು ಬಾಲಿವುಡ್ನಲ್ಲಿ ಖ್ಯಾತ ಕಲಾ ನಿರ್ದೇಶಕರಾಗಿದ್ದರು. ಅವರು ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಸ್ವೀಕರಿಸಿದ್ದರು. ಅವರು ನಿರ್ಮಾಣ ಮಾಡುತ್ತಿದ್ದ ಅದ್ದೂರಿ ಸೆಟ್ಗಳನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು. ಹಲವು ಸಿನಿಮಾ ಯಶಸ್ಸಿಗೆ ಇವರು ಹಾಕುತ್ತಿದ್ದ ಸೆಟ್ಗಳು ಕೂಡ ಕಾರಣ ಆಗಿದ್ದವು.
ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಹಾಗೂ ‘ಲಗಾನ್’ ಮೊದಲಾದ ಸಿನಿಮಾಗಳಿಗೆ ನಿತಿನ್ ಅವರು ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘1942: ಎ ಲವ್ ಸ್ಟೋರಿ’ ಸಿನಿಮಾದ ಸೆಟ್ ಸಾಕಷ್ಟು ಗಮನ ಸೆಳೆದಿತ್ತು. ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಚೋಪ್ರಾ, ರಾಜ್ಕುಮಾರ್ ಹಿರಾನಿ ಮೊದಲಾದ ಖ್ಯಾತ ನಾಮರ ಜೊತೆ ನಿತಿನ್ ಕೆಲಸ ಮಾಡಿದ್ದರು. ‘ಇದು ನಿಜಕ್ಕೂ ಶಾಕಿಂಗ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ನಿತಿನ್ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ನಿತಿನ್ ದೇಸಾಯಿ ಒಡೆತನದ ಎನ್ಡಿ ಸ್ಟುಡಿಯೋಸ್ನಲ್ಲಿ ಹಲವು ಸಿನಿಮಾಗಳನ್ನು ಶೂಟ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ಹೋಸ್ಟ್ ಮಾಡುವ ‘ಬಿಗ್ ಬಾಸ್’ನ ವೀಕೆಂಡ್ ಎಪಿಸೋಡ್ನ ಈ ಮೊದಲು ಇಲ್ಲಿಯೇ ಶೂಟ್ ಮಾಡಲಾಗುತ್ತಿತ್ತು. ನಿತಿನ್ ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.





