Mysore
20
overcast clouds
Light
Dark

ಆಶಸ್‌ ಕಪ್‌ 2023: ನಾಲ್ಕನೇ ಟೆಸ್ಟ್‌ಗೆ ಪ್ಲೇಯಿಂಗ್‌ 11 ಪ್ರಕಟ ಮಾಡಿದ ಇಂಗ್ಲೆಂಡ್‌!

ಲಂಡನ್‌: ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ ದಿ ಆಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್‌ ತಂಡ ತನ್ನ ಆಡುವ 11ರ ಬಳಗವನ್ನು ಸೋಮವಾರ (ಜುಲೈ 17) ಪ್ರಕಟ ಮಾಡಿದೆ.

ಮ್ಯಾಂಚೆಸ್ಟರ್‌ನ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಜುಲೈ 19ರಂದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಶುರುವಾಗಲಿದೆ.

ಲೀಡ್ಸ್‌ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಅದ್ಭುತ ಕಮ್‌ಬ್ಯಾಕ್‌ ಮಾಡಿದ ಇಂಗ್ಲೆಂಡ್‌ ತಂಡ 3 ವಿಕೆಟ್‌ಗಳ ಜಯ ದಾಖಲಿಸಿತು. ಈ ಮೂಲಕ ಸರಣಿಯಲ್ಲಿನ ಹಿನ್ನಡೆಯನ್ನು 1-2 ಅಂತರಕ್ಕೆ ತಗ್ಗಿಸಿಕೊಂಡಿತು.

ಯುವ ಬ್ಯಾಟರ್‌ ಹ್ಯಾರಿ ಬ್ರೂಕ್‌, ರನ್‌ ಚೇಸಿಂಗ್‌ ವೇಳೆ 75 ರನ್‌ ಬಾರಿಸಿ ಗೆಲುವಿಗೆ ಬಲವಾದರು. ಇದೀಗ ನಾಲ್ಕನೇ ಟೆಸ್ಟ್‌ಗೆ ತನ್ನ ಆಡುವ 11ರ ಬಳಗದಲ್ಲಿ ಒಂದು ಮಹತ್ವದ ಬದಲಾವಣೆ ತಂದುಕೊಂಡಿರುವ ಇಂಗ್ಲೆಂಡ್‌, ಔಟ್‌ ಆಫ್‌ ಫಾರ್ಮ್‌ ವೇಗದ ಬೌಲರ್‌ ಓಲ್ಲೀ ರಾಬಿನ್ಸನ್‌ ಅವರನ್ನು ಕೈಬಿಟ್ಟಿದೆ. ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದ ಪಿಚ್‌ ವೇಗಿಗಳಿಗೆ ನೆರವಾಗುವುದರಿಂದ ಓಲ್ಲೀ ರಾಬಿನ್ಸನ್‌ ಸ್ಥಾನದಲ್ಲಿ ಅನುಭವಿ ಜೇಮ್ಸ್‌ ಆಂಡರ್ಸನ್‌ ಅವರನ್ನು ಆಡುವ 11ರ ಬಳಗಕ್ಕೆ ಕರೆತರಲಾಗಿದೆ.

ಮೊದಲ ಎರಡೂ ಟೆಸ್ಟ್‌ಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ ಜೇಮ್ಸ್‌ ಆಂಡರ್ಸನ್‌ ಅವರನ್ನು ಹೆಡಿಂಗ್ಲೇ ಟೆಸ್ಟ್‌ನಿಂದ ಕೈಬಿಡಲಾಗಿತ್ತು. ಇದೀಗ ತಾಂತ್ರಿಕ ಬದಲಾವಣೆ ರೂಪದಲ್ಲಿ ಆಂಡರ್ಸನ್‌ ಅವರಿಗೆ ಮರಳಿ ಅವಕಾಶ ನೀಡಲಾಗಿದೆ. ಸರಣಿಯಲ್ಲಿ ಗೆಲುವಿನ ಆಸೆ ಜೀವಂತವಾಗಿ ಉಳಿಸಿಕೊಳ್ಳಲು ಇಂಗ್ಲೆಂಡ್‌ ತಂಡಕ್ಕೆ ಈ ಪಂದ್ಯದಲ್ಲೂ ಜಯ ಅನಿವಾರ್ಯವಾಗಿದೆ.

ಈ ಪಂದ್ಯದಲ್ಲಿ ಏನಾದರೂ ಇಂಗ್ಲೆಂಡ್‌ ಸೋತರೆ, 2002ರ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಆಸ್ಟ್ರೇಲಿಯಾ ತಂಡ ದಿ ಆಷಸ್‌ ಟೆಸ್ಟ್ ಸರಣಿ ಗೆದ್ದ ಸಾಧನೆ ಮೆರೆಯಲಿದೆ. ಇದನ್ನು ತಪ್ಪಿಸಲು ಪಣ ತೊಟ್ಟಿರುವ ಇಂಗ್ಲೆಂಡ್‌ 2-2 ಅಂತರದ ಸಮಬಲವನ್ನು ಎದುರು ನೋಡುತ್ತಿದೆ.

ಮನೆಯಂಗಣದಲ್ಲಿ ಆಂಡರ್ಸನ್‌ ಅಂತಿಮ ಟೆಸ್ಟ್: ಮೊದಲ ಎರಡು ಟೆಸ್ಟ್‌ಗಳಲ್ಲಿ 40 ವರ್ಷದ ಹಿರಿಯ ವೇಗಿ ಜೇಮ್ಸ್‌ ಆಂಡರ್ಸನ್‌ 75.33ರ ಸರಾಸರಿಯಲ್ಲಿ ಕೇವಲ 3 ವಿಕೆಟ್‌ ಮಾತ್ರವೇ ಪಡೆದಿದ್ದರು. ಇನ್ನು ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆಂಡರ್ಸನ್‌ ಈವರೆಗೆ ಆಡಿರುವ 10 ಟೆಸ್ಟ್‌ಗಳಲ್ಲಿ 37 ವಿಕೆಟ್‌ಗಳನ್ನು ಉರುಳಿಸಿ ಉತ್ತಮ ದಾಖಲೆ ಹೊಂದಿದ್ದಾರೆ.

ಹೀಗಾಗಿ ಆಡುವ 11ರ ಬಳಗದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಇದು ಅವರ ಹೋಮ್‌ ಗ್ರೌಂಡ್‌ ಆಗಿದ್ದು, ವೃತ್ತಿಬದುಕಿನಲ್ಲಿ ಕೊನೇ ಬಾರಿ ತಾಯ್ನಾಡಿನಲ್ಲಿ ಟೆಸ್ಟ್‌ ಆಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ 4ನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಪ್ಲೇಯಿಂಗ್‌ 11 ವಿವರ
01. ಬೆನ್‌ ಡಕೆಟ್‌ (ಓಪನರ್‌)
02. ಝ್ಯಾಕ್‌ ಕ್ರಾವ್ಲಿ (ಓಪನರ್‌)
03. ಮೊಯೀನ್‌ ಅಲಿ (ಬ್ಯಾಟ್ಸ್‌ಮನ್‌)
04. ಜೋ ರೂಟ್‌ (ಬ್ಯಾಟ್ಸ್‌ಮನ್‌)
05. ಹ್ಯಾರಿ ಬ್ರೂಕ್‌ (ಬ್ಯಾಟ್ಸ್‌ಮನ್‌)
06. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌/ ಕ್ಯಾಪ್ಟನ್‌)
07. ಜಾನಿ ಬೈರ್‌ಸ್ಟೋವ್‌ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್‌)
08. ಕ್ರಿಸ್‌ ವೋಕ್ಸ್‌ (ಆಲ್‌ರೌಂಡರ್‌)
09. ಮಾರ್ಕ್‌ ವುಡ್‌ (ವೇಗದ ಬೌಲರ್‌)
10. ಸ್ಟುವರ್ಟ್‌ ಬ್ರಾಡ್‌ (ವೇಗದ ಬೌಲರ್‌)
11. ಜೇಮ್ಸ್‌ ಆಂಡರ್ಸನ್‌ (ವೇಗದ ಬೌಲರ್‌)

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ