ಬೆಂಗಳೂರು : ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ನಟ ಉಪೇಂದ್ರ ಅವರನ್ನು ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಭೈರಪ್ಪ ಹರೀಶ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಕಾರ್ಯಕರ್ತರು ಉಪೇಂದ್ರ ಅವರನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೈರಪ್ಪ ಹರೀಶ್ ಕುಮಾರ್, ದಲಿತಕೇರಿ, ಊರಲ್ಲಿ ಯಾರು ಯಾರು ಇರಬೇಕು ಅಂತಾ ಹೇಳಬೇಕು. ಇವರೆಲ್ಲ ಸಿನಿಮಾಗಳಲ್ಲಿ ಮಾತ್ರ ನಾಯಕರು. ನಿಜವಾದ ನಾಯಕ ಓಡಿ ಹೋಗೋದಲ್ಲ. ಸ್ಟೇ ತರೋದು, ಓಡಿ ಹೋಗೋದಲ್ಲ. ಜಾತಿ, ಕೇರಿಗಳ ಬಗ್ಗೆ ಮಾತನಾಡುವವರನ್ನು ಬ್ಯಾನ್ ಮಾಡಬೇಕು ಎಂದು ಮಾತನಾಡಿದರು.
ದೂರು ಸ್ವೀಕರಿಸಿದ ಹಿರಿಯ ನಟ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಸುಂದರ್ ರಾಜ್, ನಟ ಉಪೇಂದ್ರ ಅವರು ಬೇಕಂತ ಮಾತನಾಡಿದ್ದು ಅಂತಾ ಅನಿಸುತ್ತಿಲ್ಲ. ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಫಿಲ್ಮ್ ಚೇಂಬರ್ ಗೆ ಬ್ಯಾನ್ ಮಾಡೋ ಹಕ್ಕಿಲ್ಲ. ನಾವು ಸಂಧಾನ ಮಾಡ್ತೇವೆ, ಸಂಹಾರ ಮಾಡಲ್ಲ. ಕಾರ್ಯದರ್ಶಿಯಾಗಿ ಬ್ಯಾನ್ ಮಾಡಬೇಕೆಂಬ ಮನವಿ ಸ್ವೀಕರಿಸಿದ್ದೇನೆ. ಬ್ಯಾನ್ ಮಾಡಲು ಕೋರ್ಟ್ ಅನುಮತಿ ಕೊಡಲ್ಲ. ಉಪೇಂದ್ರ ಅವರನ್ನು ಕರೆಸಿ ಮಾತನಾಡುತ್ತೇವೆ ಎಂದರು.