ಬೆಂಗಳೂರು : ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಲೇ ಇತ್ತು. ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಜೂನ್ 16ರಂದು ಈ ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇಂದು ‘ಆದಿಪುರುಷ್’ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಗಿದೆ. ರಾಮಾಯಣವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ.
ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಬಿಡುಗಡೆ ಆಗಿರುವ ಟ್ರೇಲರ್ನಲ್ಲಿ ಅದ್ದೂರಿತನ ಕಾಣಿಸುತ್ತಿದೆ. ದೊಡ್ಡ ಪರದೆಯಲ್ಲಿ ‘ಆದಿಪುರುಷ್’ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ.
‘ಟಿ ಸೀರೀಸ್’ನ ಭೂಷಣ್ ಕುಮಾರ್ ಅವರು ‘ಆದಿಪುರುಷ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲ ದಿನ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ‘ಬಾಹುಬಲಿ 2’ ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ‘ಸಲಾರ್’, ‘ಪ್ರಾಜೆಕ್ಟ್ ಕೆ’ ಸಿನಿಮಾದ ಕೆಲಸದಲ್ಲೂ ಪ್ರಭಾಸ್ ಬ್ಯುಸಿ ಆಗಿದ್ದಾರೆ.