ಬೆಂಗಳೂರು : ಮೇರು ನಟ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಭಾನುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿದೆ.
ಈ ವಿಚಾರದಲ್ಲಿ ಅಭಿಮಾನಿಗಳನ್ನು ಬೆಂಬಲಿಸಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಕಿಚ್ಚ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಅವರ ಸದಾಶಿವನಗರ ನಿವಾಸದಲ್ಲಿ ಭಾನುವಾರ ಸಂಜೆ ಭೇಟಿಯಾಗಿ ಪುಣ್ಯಭೂಮಿ ಕುರಿತು ಚರ್ಚೆ ನಡೆಸಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ಇದ್ದರೂ ಅವರ ಅಭಿಮಾನಿಗಳ ಕೋರಿಕೆಯಂತೆ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ (ಅಭಿಮಾನ್ ಸ್ಟುಡಿಯೋ) ಪುಣ್ಯಭೂಮಿ ನಿರ್ಮಿಸಬೇಕೆಂದು ಡಿಸಿಎಂಗೆ ಕಿಚ್ಚ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಿಚ್ಚನ ಟ್ವೀಟ್: ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬೆಂಬಲ ಸೂಚಿಸಿದ್ದಾರೆ.





