Mysore
20
overcast clouds
Light
Dark

ನಟ ಸುದೀಪ್ ಮಾನನಷ್ಟ ಮೊಕದ್ದಮೆ ಪ್ರಕರಣ: ಇಬ್ಬರು ನಿರ್ಮಾಪಕರಿಗೆ ಸಮನ್ಸ್ ಜಾರಿ

ಬೆಂಗಳೂರು: ನಟ ಕಿಚ್ಚಾ ಸುದೀಪ್ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೋರ್ಟ್ ಇಬ್ಬರು ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ.

ನಟ ಸುದೀಪ್ ರ ಮಾನಹಾನಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಚಿತ್ರ ನಿರ್ಮಾಪಕ ಎನ್‌.ಎಂ.ಕುಮಾರ್ ಹಾಗೂ ಎನ್‌.ಎಂ.ಸುರೇಶ್ ಅವರಿಗೆ ಸಮನ್ಸ್ ಜಾರಿಗೊಳಿಸಲು ನಗರದ 13ನೇ ಎಸಿಎಂಎಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಈ ಕುರಿತಂತೆ ಗುರುವಾರವಷ್ಟೇ (ಆಗಸ್ಟ್10) ಫಿರ್ಯಾದುದಾರ ಸುದೀಪ್‌ ಅವರ ಸ್ವಯಂ ಹೇಳಿಕೆ ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು, ಶುಕ್ರವಾರ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿದ್ದು, ಇದೇ 26ರಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?
ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ, ವರ್ಚಸ್ಸಿಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಸುದೀಪ್ ಅವರು ಎಂ.ಎನ್. ಕುಮಾರ್ ಮತ್ತು ಎಂ.ಎನ್.ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ‘ನನ್ನ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ ಸುದೀಪ್‌ ಕಳೆದ 7-8 ವರ್ಷಗಳ ಹಿಂದೆ ನನ್ನಿಂದ ಮುಂಗಡ ಹಣ ಪಡೆದಿದ್ದರು. ಆದರೆ, ಇದುವರೆಗೂ ಕಾಲ್‌ಶೀಟ್‌ ನೀಡಿಲ್ಲ. ನನ್ನ ಹಣವನ್ನೂ ವಾಪಸ್‌ ಕೊಡುತ್ತಿಲ್ಲ’ ಎಂದು ನಿರ್ಮಾಪಕ ಎಂ.ಎನ್.ಕುಮಾರ್‌ ಆರೋಪಿಸಿದ್ದರು.

ಸಮಸ್ಯೆ ಬಗೆಹರಿಸುವಂತೆ ಕೋರಿ ಫಿಲ್ಮ್‌ ಛೇಂಬರ್‌ ಮೆಟ್ಟಿಲೇರಿದ್ದರು. ಮಾಧ್ಯಮ ಗೋಷ್ಠಿಗಳಲ್ಲೂ ಈ ಕುರಿತಂತೆ ಅವರು ಸಾರ್ವಜನಿಕವಾಗಿ ಸುದೀಪ್‌ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸುದೀಪ್‌ ಕೋರ್ಟ್ ಮೆಟ್ಟಿಲೇರಿದ್ದು, ‘ಕುಮಾರ್ ಹೇಳಿಕೆಯಿಂದ ನಾನು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಗಳಿಸಿದ್ದ ವರ್ಚಸ್ಸಿಗೆ ಧಕ್ಕೆಯಾಗಿದೆ. ನನ್ನ ಮಾನಹಾನಿಯಾಗಿದೆ‘ ಎಂದು ಆರೋಪಿಸಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ