Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಟ ಕಿಶೋರ್‌ ಅವರ ಪೋಸ್ಟ್‌ ಡಿಲಿಟ್‌ ಮಾಡಿದ ಇನ್ಸ್ಟಾಗ್ರಾಮ್: ಮೋದಿ ಇದ್ದರೆ ಇದೆಲ್ಲವೂ ಸಾಧ್ಯ ಎಂದ ನಟ

ಬೆಂಗಳೂರು : ಇತ್ತೀಚೆಗೆ ಬಹುಭಾಷಾ ನಟ ಕಿಶೋರ್‌ ಕುಮಾರ್‌ ಅವರು ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಹಂಚಿಕೊಂಡಿದ್ದ ಪೋಸ್ಟ್‌ ಅನ್ನು ಇನ್ಸ್ಟಾಗ್ರಾಮ್ ಅಳಿಸಿ ಹಾಕಿದೆ.

ಇನ್ಸ್ಟಾಗ್ರಾಮಿನ ನೀತಿ, ನಿಯಮಗಳಿಗೆ ಈ ಪೋಸ್ಟ್‌ ವಿರುದ್ಧವಾಗಿದ್ದು, ಇದು “ADULT SEXUAL EXPLOITATION“ ಎಂದು ಇನ್ಸ್ಟಾಗ್ರಾಮ್‌ ಕಾರಣ ಕೊಟ್ಟಿದೆ.

ಈ ಕುರಿತು ಫೇಸ್‌ ಬುಕ್‌ ಬಲ್ಲಿ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿರುವ ನಟ ಕಿಶೋರ್‌ ಕುಮಾರ್‌, ʼʼಮೋದಿ ಹೈ ತೊ ಏ ಸಬ್ ಮುಮ್ಕಿನ್ ಹೈ (ಮೋದಿಯವರಿದ್ದರೆ ಇದೆಲ್ಲವೂ ಸಾಧ್ಯ) ಎಂದು ಇನ್ಸ್ಟಾಗ್ರಾಮಿನ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ʼʼಇನ್ಸ್ಟಾಗ್ರಾಮಿನ ಈ ನಿಯಮಗಳು ನನ್ನ ನೊಂದು ಬೆಂದ ಮಣಿಪುರಕ್ಕೆ , ಕಾಶ್ಮೀರಕ್ಕೆ , ಗುಜರಾತಿಗೆ, ನೂಹ್ ಗೆ, ಹಾಥರಸ್ ಗೆ, ಸಿಂಘು ಬಾರ್ಡ್ರರಿಗೆ, ಲಖೀಮ್ ಪುರ್ ಖೀರಿಗೆ , ಧರ್ಮಸ್ಥಳಕ್ಕೆ, ದೇಶದ ಉದ್ದಗಲಕ್ಕೆ ಅನ್ವಯಿಸಿಬಿಟ್ಟಿದ್ದರೆ ಎಷ್ಟು ಚೆಂದʼʼ ಎಂದು ಹೇಳಿದ್ದಾರೆ.

ಮುಂದುವರಿದು, ʼʼಇವರು ಹೇಳುವ “ADULT SEXUAL EXPLOITATION“ ಅನ್ನು ನನ್ನ ದೇಶದ ಮನಃಪಟಲದಿಂದ ನನ್ನ ಪೋಸ್ಟಿನ ಹಾಗೆ ಅಳಿಸಿಬಿಡಲು ಸಾಧ್ಯವಿದ್ದಿದ್ದರೆ ಎಷ್ಟು ಚೆಂದ…ʼʼ ಎಂದು ಕಿಶೋರ್‌ ಕುಮಾರ್‌ ಬರೆದುಕೊಂಡಿದ್ದಾರೆ.

ʼʼಇಲ್ಲಿ ಮೋದಿಯೋ, ಗೋದಿಯೋ ಮುಖ್ಯವೇ ಅಲ್ಲ;

ʼʼನಾನೋ, ನಾನು ಹಾಕುವ ಪೋಸ್ಟೊ, ಮೋದಿಯೋ, ಗೋದಿಯೋ ಮುಖ್ಯವೇ ಅಲ್ಲ . ಈ ದೇಶವನ್ನು , ಕುವೆಂಪು ಗಾಂಧಿ ಅಂಬೇಡ್ಕರ್ ಬುದ್ಧ ಬಸವ ರ ಕನಸಿನ ಸರ್ವ ಸಮಾನತೆಯ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳುತ್ತೇವೆಯಾ ಎನ್ನುವುದಷ್ಟೇ ಮುಖ್ಯʼʼ ಎಂದು ನಟ ಕಿಶೋರ್‌ ಹೇಳಿಕೊಂಡಿದ್ದಾರೆ.

ಡಿಲಿಟ್‌ ಆಗಿರುವ ಕಿಶೋರ್‌ ಅವರ ಪೋಸ್ಟ್‌ ನಲ್ಲಿ ಏನಿತ್ತು?

ʼʼಚಂದ್ರನ ದಕ್ಷಿಣ ಧುೃವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ… ಹೆಮ್ಮೆಯಿದೆ , ಎದೆ ಬೀಗಿದೆ… ಆದರೆ .. ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ . ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ … ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ… ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ… ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ… ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಶ್ಮೀರದ ಜನತೆಯ ಚಿತ್ರ… ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ …. ಹೀಗೇ ನೂರಾರು. ..ʼʼ

ಇದನ್ನೂ ಓದಿ ಶಿಷ್ಟಾಚಾರ ವಿವಾದ | ನನ್ನನ್ನು ಸ್ವಾಗತಿಸಲು ಬರದಂತೆ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ: ಪ್ರಧಾನಿ ಮೋದಿ
ʼʼಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂಆಗಬಾರದಿತ್ತೆ… ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು…???ʼʼʼ ಎಂದು ನಟ ಕಿಶೋರ್‌ ಡಿಲಿಟ್‌ ಆಗಿರುವ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ