ಕೆ. ಆರ್. ನಗರ: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಯುವಕರು, ಯುವತಿಯರು ಮತ್ತು ಮಕ್ಕಳು ಹೃದಯಾಘಾತಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ವೈದ್ಯರೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆಯೇ ಹೃದಯ ಸ್ತಂಭನವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಟ್ಟಣದ ಕಂಠೇನಹಳ್ಳಿ ನಿವಾಸಿ ಆನಂದ್ ಮತ್ತು ಪ್ರಭಾ ದಂಪತಿಯ ಪುತ್ರ ಡಾ. ರಕ್ಷತ್ (೨೭) ಮೃತಪಟ್ಟವರು. ಮೂಲತಃ ಕೆ. ಆರ್. ಪೇಟೆ ತಾಲ್ಲೂಕಿನ ಪುರ ಗ್ರಾಮದವರಾದ ಆನಂದ್ ಅವರು ಭೇರ್ಯ ಗ್ರಾಮದ ಪಶುವೈದ್ಯ ಆಸ್ಪತ್ರೆಯಲ್ಲಿ ಪಶು ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರ ರಕ್ಷತ್ ೨ ವರ್ಷಗಳ ಹಿಂದೆ ಮೈಸೂರಿನಲ್ಲಿ ಎಂಬಿಎಸ್‌ಎಸ್ ಮುಗಿಸಿ ಕಳೆದ ಸಾಲಿನಲ್ಲಿ ಪಟ್ಟಣದ ಈಶ್ವರ ನಗರದಲ್ಲಿ ಸರ್ಕಾರದ ಯೋಜನೆಯ ‘ನಮ್ಮ ಕ್ಲಿನಿಕ್’ ನಲ್ಲಿ ವೈದ್ಯರಾಗಿ ಸೇವೆ ಆರಂಭಿಸಿದ್ದರು. ಹೃದ್ರೋಗ ತಜ್ಞರು ಹೇಳುವ ಪ್ರಕಾರ ಡಾ. ರಕ್ಷತ್ ಅವರಿಗೆ ಹೃದಯ ಸ್ತಂಭನವಾಗಿದೆ.
ಕೆಲವು ಪ್ರಕರಣಗಳಲ್ಲಿ ಎದೆ ನೋವು ಕಾಣಿಸುವುದಿಲ್ಲ. ಮಲಗಿದ್ದ ಹಾಗೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯ ಡಾ. ರಕ್ಷತ್ ಅವರ ಹಠಾತ್ ನಿಧನಕ್ಕೆ ತಾಲ್ಲೂಕು ಆರೋಗ್ಯಾಽಕಾರಿ ಡಾ. ಡಿ. ನಟರಾಜು ಹಾಗೂ ಕಚೇರಿಯ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಹೃದಯಾಘಾತಕ್ಕೆ ಸಂಬಂಽಸಿದಂತೆ ಸರ್ಕಾರ ಕೂಡ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಹೃದಯಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐವರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ.
ಕೆಲಸದ ಒತ್ತಡ, ಚಿಂತೆ, ಟಾರ್ಗೆಟ್, ಪ್ರಮೋಶನ್ ಎಂಬ ಒತ್ತಡದಲ್ಲಿ ಜನರು ಆರೋಗ್ಯದತ್ತ ಗಮನ ಕೊಡುವುದನ್ನೇ ಮರೆತುಬಿಟ್ಟಿದ್ದಾರೆ. ರೋಗ ಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷಿಸಿ ಬಿಡುತ್ತಾರೆ. ಇದು ದಿಢೀರ್ ಆಗಿ ಆರೋಗ್ಯ ಕೈ ಕೊಡಲು ಕಾರಣವಾಗುತ್ತದೆ. ಚಿಕಿತ್ಸೆ ಪಡೆಯಲು ಹೋದರೂ ಬಹಳ ತಡವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರಾಣ ಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಶಾಲೆ, ಮಾಲ್, ಚಿತ್ರಮಂದಿರಗಳಲ್ಲಿ ಡಿಫಿಬ್ರಿಲೇಟರ್ ಶಾಕ್ ನೀಡುವ ಯಂತ್ರವನ್ನು ಕಡ್ಡಾಯವಾಗಿ ಇಡಲೇಬೇಕು. ಇದು ತತ್‌ಕ್ಷಣ ಹೃದಯಾಘಾತವಾದಾಗ ನೀಡುವ ಶಾಕ್ ನೀಡುವ ಚಿಕಿತ್ಸಾ ವಿಧಾನ. – ಡಾ. ಡಿ. ನಟರಾಜು, ಟಿಎಚ್‌ಒ





