ಲೇಖಕಿ, ಸಂಘಟಕಿ, ವೈದ್ಯೆ ಮತ್ತು ಹೋರಾಟಗಾರ್ತಿ ಡಾ.ಎಚ್.ಎಸ್.ಅನುಪಮಾ ಅವರ ಜೊತೆ ಬರಹಗಾರ್ತಿ ಸುಧಾ ಆಡುಕಳ ಮಾತುಕತೆ
• ನಿಮ್ಮ ಬರಹಗಳಿಗಿರುವ ಚಿಕಿತ್ಸಕ ಗುಣ ವೃತ್ತಿಯಿಂದ ನಿಮಗೆ ಬಂದ ಕೊಡುಗೆಯೆ?
ಅನುಪಮಾ: ವೈದ್ಯೆಯಾಗುವ ಮೊದಲಿನಿಂದಲೂ ನನ್ನ ಸ್ವಭಾವವೆಂದರೆ ಯಾವ ಕೆಲಸವನ್ನು ಹಿಡಿದರೂ ಅದನ್ನು ತುದಿ ಮುಟ್ಟಿಸುವುದು. ಹಾಗಾಗಿ ಕೇವಲ ಸಮಾಜದಲ್ಲಿರುವ ಸಮಸ್ಯೆಗಳನ್ನಷ್ಟೇ ಹೇಳಿ ಸುಮ್ಮನಾಗಿರಲು ನನಗೆ ಸಾಧ್ಯವಿಲ್ಲ. ವೈದ್ಯರಾದವರು ರೋಗಗಳಿಗೆ ಪರಿಹಾರವನ್ನೂ ಅಥವಾ ರೋಗಿಗಳಿಗೆ ಮುಂದಿನ ದಾರಿಗಳನ್ನೋ ಸೂಚಿಸಲೇಬೇಕಲ್ಲ. ಅದೇ ಸ್ವಭಾವ ನನ್ನ ಬರವಣಿಗೆಯಲ್ಲೂ ಬಂದಿರಬಹುದು ಅನಿಸುತ್ತದೆ.
=============
• ಸಂಘಟನೆ, ಪ್ರವಾಸ, ಬರಹ, ವೈದ್ಯವೃತ್ತಿ, ಸಭೆ-ಸಮಾರಂಭ, ಕುಟುಂಬ ಎಲ್ಲವನ್ನೂ ಸರಿದೂಗಿಸುತ್ತ ಸಾಗಿರುವ ನೀವು ನಮಗೆಲ್ಲರಿಗೂ ಒಂದು ಅಚ್ಚರಿ. ಇವುಗಳಿಗೆಲ್ಲ ಸಮಯವನ್ನು ಎಲ್ಲಿಂದ ತರ್ತೀರಿ? ಕವಲಕ್ಕಿಯಲ್ಲಿಯೂ ದಿನಕ್ಕೆ 24 ಗಂಟೆಗಳೇ ಅಲ್ಲವಾ?
ಅನುಪಮಾ: ನಾನು ಹೋದಲ್ಲಿ ಬಂದಲ್ಲಿ ಎಲ್ಲ ಸುಮಾರಾಗಿ ಇದೇ ಪ್ರಶ್ನೆಯನ್ನು ಕೇಳ್ತಾರೆ. ನಾನು ಎಲ್ಲವನ್ನೂ ಸಾಧ್ಯವಾದಷ್ಟು ಪೂರ್ವಯೋಜಿತವಾಗಿ ಮಾತ್ತೇನೆ. ಯಾವ ಕೆಲಸ ಮಾಡುತ್ತಿರುವೆನೋ ಅದರ ಬಗೆಗಷ್ಟೇ ಯೋಚನೆ. ಗಾಂಧೀಜಿಯವರ ಪ್ರಭಾವ ಇರಬೇಕು, ಜೀವನ ಬಹಳ ಸರಳವಾಗಿದೆ.
ಅಲಂಕಾರ, ಖರೀದಿಗಳ ಗೊಡವೆಯನ್ನು ಬಿಟ್ಟಾಗಿದೆ. ಕೌಟುಂಬಿಕ ಸಮಾರಂಭ ಗಳಿಗೆ ಹೋಗುವುದೇ ಇಲ್ಲ ಎಂದರೂ ನಡೆದೀತು. ದೇವರು, ಆರಾಧನೆಗೆಂದು ಸಮಯ ವ್ಯಯಿಸುವುದಂತೂ ಇಲ್ಲವೇ ಇಲ್ಲ. ಊಟತಿಂಡಿಯೂ ಬಹಳ ಸರಳ. ಹಾಗಾಗಿ ನನಗೆ ಇಷ್ಟವಿರುವ, ಮಾಡಬೇಕಾದ ಕೆಲಸಗಳಿಗೆ ಸಾಕಷ್ಟು ಸಮಯ ಉಳಿಸಿಕೊಳ್ಳುವೆ.
================
• ನಿಮ್ಮ ಸಂಗಾತಿ ಕೃಷ್ಣ ಗಿಳಿಯಾರ್ ಕೂಡ ವೈದ್ಯರು ಮತ್ತು ಒಳ್ಳೆಯ ಚಿತ್ರಕಾರರು. ನೀವು ಉತ್ತಮ ಬರಹಗಾರ್ತಿ. ಈ ರೇಖೆ ಮತ್ತು ಅಕ್ಷರಗಳ ಸಾಂಗತ್ಯ ಹೇಗಿದೆ?
ಅನುಪಮಾ: ನಾನು ಹೇಳಿದ್ರೆ ನೀವು ನಂಬೀರೋ ಇಲ್ಲೋ, ನಾವಿಬ್ಬರೂ ಜಗಳವನ್ನೇ ಆಡಿಲ್ಲ. ಸ್ವಭಾವತಃ ನನಗೆ ಜಗಳ ಇಷ್ಟವಿಲ್ಲ. ಪರಸ್ಪರ ಮಾತನಾಡಿ ಪರಿಹರಿಸಿಕೊಳ್ಳದ ಯಾವ ವಿಷಯವೂ ಇಲ್ಲ ಎಂದೇ ಭಾವಿಸುತ್ತೇನೆ. ವಿರಾಮದಲ್ಲಿ ಅವರು ಮೊಬೈಲ್ ಹಿಡಿದು ಚಿತ್ರ ಬರೀತಾ ಕೂತಿದ್ರೆ ನಾನು ಅಲ್ಲೇ ಪಕ್ಕ ಕಂಪ್ಯೂಟರ್‌ನಲ್ಲಿ ಏನಾದರೂ ಬರೀತಾ ಅಥವಾ ಓದುತ್ತಾ ಇರುತ್ತೇನೆ. ಪರಸ್ಪರರ ವೃತ್ತಿ ಮತ್ತು ಆಸಕ್ತಿಯನ್ನು ಗೌರವಿಸುತ್ತೇವೆ. ಗಿಬ್ರಾನನೆಂದಂತೆ ಒಟ್ಟಿಗಿರುವಾಗಲೂ ನಮ್ಮದೇ ಸ್ಪೇಸ್ ಅನ್ನು ಜೀವಂತವಾಗಿಟ್ಟುಕೊಂಡಿದ್ದೇವೆ. ಹೀಗಾಗಿ ಚಿತ್ರ ಮತ್ತು ಅಕ್ಷರಗಳು ಒಂದೇ ಶ್ರುತಿಯಲ್ಲಿ ಮಿಡಿಯುತ್ತಿವೆ.
=================
ಪದ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ವಿಪುಲವಾದ ಸಾಹಿತ್ಯ ಕೃಷಿ ನಿಮ್ಮದು. ಇವುಗಳಲ್ಲಿ ಯಾವುದು ನಿಮಗೆ ಹೃದ್ಯ?
ಅನುಪಮಾ: ನನಗೆ ಪದ್ಯವೇ ಬಹಳ ಆಪ್ತ ಏಳನೇ ತರಗತಿಯಲ್ಲಿರುವಾಗಲೇ ಪದ್ಯಗಳನ್ನು ಬರೆದಿದ್ದೆ. ಲಂಕೇಶ್ ಪತ್ರಿಕೆಯ ಓದು ಮತ್ತು ಜನಪರ ಚಳವಳಿಗಳ ಸಂಪರ್ಕಕ್ಕೆ ಬರದಿದ್ದರೆ ಕಥೆ, ಕವನಗಳನ್ನು ಬರೆದುಕೊಂಡಿರುತ್ತಿದ್ದೆ ಅನಿಸುತ್ತದೆ. ಕಾವ್ಯದ ಓದು ನನಗೆ ಬಹಳ ಇಷ್ಟ ಬೇರೆ ಭಾಷೆಯ ಒಳ್ಳೆಯ ಕವಿತೆಗಳನ್ನು ಓದಿದಾಗಲೆಲ್ಲ ಅನುವಾದಿಸುವ ಹಂಬಲ ಗರಿಗೆದರುತ್ತದೆ. ಎಷ್ಟೋ ಸಲ ಇತರ ಬರವಣಿಗೆಗಳ ಕಾರಣಕ್ಕಾಗಿ ಅದನ್ನು ಹಿಂದಿಕ್ಕಿದ್ದೇನೆ.
=================
• ಸುತ್ತೆಲ್ಲ ಅದೃಶ್ಯ ಗೋಡೆಗಳೇ ಏಳುತ್ತಿರುವ ಈ ಕಾಲದಲ್ಲಿ ಒಬ್ಬ ಸಂಘಟನಾಕಾರರಾಗಿ ಎಲ್ಲರನ್ನೂ ಬೆಸೆಯುವ ತಂತು ಯಾವುದು ಅನಿಸುತ್ತದೆ?
ಅನುಪಮಾ: ಬೆಸೆಯುವ ತಂತು ಯಾವತ್ತಿಗೂ ಪ್ರೀತಿಯೇ, ಬುದ್ಧ ಇದನ್ನು ಮೈತ್ರಿ ಅನ್ನುತ್ತಾನೆ. ನಮ್ಮ ಅಸ್ಮಿತೆಯ ಪ್ರಜ್ಞೆಯನ್ನು ತುಸು ವಿಸ್ತರಿಸಿ ನೋಡಿದರೆ ವಿಶಾಲ ನೋಟ ದಕ್ಕುತ್ತದೆ. ಒಳಿತಿನ ಒಳಗೆಲ್ಲೋ ಕೆಡುಕಿನ ಬೀಜ, ಕೆಡುಕಿನ ನಡುವಲ್ಲಿ ಒಳಿತಿನ ತಿರುಳು ಗೋಚರಿಸುತ್ತದೆ. ಇಲ್ಲಿ ಹರಿಯುವ ಶರಾವತಿ ನದಿಗೂ, ಕವಲಕ್ಕಿಯ ಗುಡ್ಡಕ್ಕೂ, ನನಗೂ ಜೀವಿಸುವ ಹಕ್ಕು ಸಮಾನವಾಗಿದೆ ಅನ್ನೋದು ಅರ್ಥವಾಗುತ್ತದೆ. ಇದನ್ನು ನನ್ನ ವೃತ್ತಿಯೂ ನನಗೆ ಕಲಿಸಿದೆ.
=================
• ನಿಮ್ಮ ಬರಹಗಳಲ್ಲಿ, ಭಾಷಣಗಳಲ್ಲಿ, ಕಾರ್ಯಗಳಲ್ಲಿ ಸದಾ ಸಕಾರಾತ್ಮಕ ಅಂಶಗಳನ್ನೇ ಬಿಂಬಿಸುತ್ತ ಬಂದಿರುವಿರಿ, ನಿರಾಸೆ, ಟೀಕೆ, ಅಸಹಾಯಕತೆ ಇವುಗಳನ್ನೆಲ್ಲ ಹೇಗೆ ನಿಭಾಯಿಸುವಿರಿ?
ಅನುಪಮಾ: ಯಾವುದೇ ಒಂದು ಸಿದ್ಧಾಂತಕ್ಕೆ ನಮ್ಮನ್ನು ಕಟ್ಟುಹಾಕಿಕೊಳ್ಳದೇ ಎಲ್ಲವನ್ನೂ ಸಮದೂರದಲ್ಲಿ ನಿಂತು ಗ್ರಹಿಸಿದಾಗ ಬದುಕಿನ ಸಮಗ್ರ ನೋಟ ಸಿಗಲು ಸಾಧ್ಯ. ಜೊತೆಗೆ ನಾನು ಎಂಬ ಅಹಂಕಾರವನ್ನು ಕಳೆದುಕೊಳ್ಳುವುದು ತುಂಬ ಮುಖ್ಯ. ಇಡಿಯ ಮಣಿಯನ್ನು ಪೋಣಿಸಲಾಗದು. ಹಾರವಾಗಿಸಬೇಕು ಅಂದರೆ ಮಣಿ ತನ್ನ ಕೇಂದ್ರದಲ್ಲಿ ದಾರ ತೂರಿಸುವಷ್ಟಾದರೂ ಖಾಲಿಯಾಗಬೇಕು. ನಮ್ಮ ಅಹಮನ್ನೂ ಅಷ್ಟಾದರೂ ಕಳಕೊಂಡರೆ ಮಾತ್ರ ಹಗೆಯಿರದ ಸ್ನೇಹ, ಎಲ್ಲರೊಂದಿಗೆ ಬೆಸುಗೆ ಸಾಧ್ಯ, ಬುದ್ಧ, ಬಸವಣ್ಣ, ಶರೀಫ, ಕಬೀರ, ಫುಲೆ, ಮಾರ್ಕ್ಸ್, ಗಾಂಧಿ, ಅಂಬೇಡ್ಕರರೆಲ್ಲ ಹಾಗಿದ್ದರು. ಅವರ ಬದುಕು ನಮಗೆ ಮಾದರಿ, ವೈದ್ಯೆ, ಸಾಹಿತಿ ಎನ್ನುವ ಕೊಂಬುಗಳನ್ನೆಲ್ಲ ಕಳಚಿಟ್ಟು ಕವಲಕ್ಕಿಯ ಜನಸಾಮಾನ್ಯರ ಮನೆಯೆದುರಿನ ಕಸವನ್ನು ಹೆಕ್ಕಲು ನನಗೆ ಸಾಧ್ಯವಾಗಬೇಕು. ಆಗ ನಿರಾಸೆ, ಅಸಹಾಯಕತೆಗಳು ಕಾಡುವುದಿಲ್ಲ. ಟೀಕೆಯ ಸೂಜಿ ಚುಚ್ಚಿದರೂ ಹೊಲಿದುಕೊಂಡು ಕೌದಿಯಾಗಲು ಸಾಧ್ಯವಾದೀತು.
=================
ನಿಮ್ಮ ನೋಟದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಎಲ್ಲಿ ಸಂಧಿಸುತ್ತಾರೆ?
ಅನುಪಮಾ: ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನು ಪರಸ್ಪರ ವಿರುದ್ಧ ಧ್ರುವಗಳಂತೆ ನೋಡುವುದು ನಮ್ಮ ಕದನ ಕುತೂಹಲವಷ್ಟೆ. ಚಾರಿತ್ರಿಕ ಸಂಗತಿಗಳನ್ನು ವರ್ತಮಾನದಲ್ಲಿ ನಿಂತು ಅವಲೋಕಿಸಿದಾಗ ಅವರ ನಡುವಿನ ವೈರುಧ್ಯಗಳು ಎದ್ದು ಕಾಣುತ್ತವೆ ನಿಜ. ಆದರೆ ಆ ಕಾಲಮಾನವನ್ನು, ಅಂದಿನ ಭಾರತೀಯ ಸಮಾಜದ ಒತ್ತಡಗಳನ್ನು ಗಮನದಲ್ಲಿಟ್ಟು ನೋಡಿದರೆ ಅವರಿಬ್ಬರ ನಡುವಿನ ಕೊಡುಕೊಳ್ಳುವಿಕೆಗಳು ಅರ್ಥವಾಗುತ್ತವೆ. ಸ್ತ್ರೀವಾದವಂತೂ ಇವರಿಬ್ಬರಿಂದಲೂ ಬಹಳಷ್ಟನ್ನು ಪಡೆದುಕೊಂಡಿದೆ. ಹೆಣ್ಣಿನ ಕಣೋಟದಿಂದ ಕೆಲವು ಪ್ರಶ್ನೆಗಳೊಂದಿಗೆ ಇಬ್ಬರನ್ನೂ ನೋಡಿದ್ದರಿಂದ ಅವರನ್ನು ಒಳಗೊಳ್ಳಲು ಸಾಧ್ಯವಾಯಿತು ಅನಿಸುತ್ತದೆ.
=================
• ಇತ್ತೀಚಿನ ವರ್ಷಗಳಲ್ಲಿ ಪ್ರತಿ ತಿಂಗಳೂ ನಿರಂತರವಾಗಿ ಯುವಜನರಿಗಾಗಿ ನಿಮ್ಮ ಮನೆಯಲ್ಲಿ ಎರಡು ದಿನಗಳ ಕಮ್ಮಟವನ್ನು ನಡೆಸುತ್ತಾ ಬಂದಿದ್ದೀರಿ. ಇದರ ಕಾರ್ಯಕಾರಣಗಳ ಬಗ್ಗೆ ಹೇಳಿ.
ಅನುಪಮಾ: ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ನಂತರ ಅನೇಕ ಯುವಮನಸ್ಸುಗಳು ಸುತ್ತಲೂ ಮುಗಿಬಿದ್ದು ಪ್ರಶ್ನೆಗಳ ಸುರಿಮಳೆಯನ್ನು ಸುರಿಸುತ್ತಿದ್ದರು. ಅವರ ಗೊಂದಲ, ಅಸಹಾಯಕತೆ, ಕುತೂಹಲ, ಅರ್ಧಜ್ಞಾನಗಳಿಗೆ ಉತ್ತರಿಸುತ್ತ ಏನಾದರೂ ಮಾಡಲೇಬೇಕು ಅನಿಸುತ್ತಿತ್ತು. ಅಲ್ಲದೇ ನಾವೇನೇ ಬರೆಯಲಿ, ಭಾಷಣ ಮಾಡಲಿ, ಅದಕ್ಕಿಂತ ನಮ್ಮ ಬದುಕನ್ನು ಮುಂದಿನ ಪೀಳಿಗೆಯೆದುರು ತೆರೆದಿಟ್ಟು ವಿಮರ್ಶೆಗೆ ಒಳಗಾಗಬೇಕಾದದ್ದು ಇವತ್ತಿನ ತುರ್ತು ಎಂದೆನಿಸಿತು. ಎಂದೇ ‘ಪ್ರಜ್ಞಾ ಜಾಗೃತಿ ಶಿಬಿರ’ಗಳನ್ನು ಆಯೋಜಿಸತೊಡಗಿದೆ. ಪ್ರತಿ ತಿಂಗಳು ಆಂದೋಲನ ಮೂವತ್ತರಷ್ಟು ಯುವಜನರು ನಮ್ಮ ಮನೆಗೆ ಬಂದು, ಎರಡು ವಿಶೇಷ ದಿನಗಳಿದ್ದು, ಚರ್ಚೆ-ಸಂವಾದ ನಡೆಸುತ್ತಾರೆ. ಸಮಾಜ, ಪರಿಸರ, ಸಂಬಂಧಗಳು, ಇತಿಹಾಸ, ಲಿಂಗ ಸಮಾನತೆ, ಪ್ರೇಮ-ಕಾಮವೇ ಸಂದರ್ಶನ, ಮೊದಲಾಗಿ ಯುವಜನರ ಗೊಂದಲದ ಗೂಡಾಗಿಸುವ ಸಂಗತಿಗಳ ಬಗೆಗೆ ಮುಕ್ತವಾಗಿ ಚರ್ಚಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಕಲಿಸಿದ್ದಕ್ಕಿಂತ ಅವರಿಂದ ಕಲಿತದ್ದೇ ಬಹಳ.
===================
• ಬರೆಯಬೇಕಿತ್ತು ಎಂದು ಕನಸು ಕಂಡು ಬರೆಯದಿರುವ ಕೃತಿಗಳೇನಾದರೂ ಇವೆಯಾ?
ಅನುಪಮಾ: ಸಾಮಾನ್ಯವಾಗಿ ನಾನು ನೋಡಿದ, ಕೇಳಿದ, ಸುತ್ತಲೂ ಘಟಿಸುತ್ತಿರುವ ಸಂಗತಿಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ. ಆದರೆ ಅಕ್ಕ, ಲಲ್ಲಾ, ಕಬೀರ ಇವರನ್ನೆಲ್ಲ ಸಮಾಸಗೊಳಿಸಿ ಒಂದು ಕೃತಿಯನ್ನು ಬರೆಯಬೇಕೆಂಬ ಕನಸಿದೆ. ಅದಕ್ಕೆ ಸಾಕಷ್ಟು ಸುತ್ತಾಡಬೇಕು, ಕೊರೊನಾ ಬಂದು ಎಲ್ಲವನ್ನೂ ಮೊಟಕುಗೊಳಿಸಿತು. ಬುದ್ಧನ ಬಗೆಗೂ ಮತ್ತೊಂದಿಷ್ಟು ಓದಬೇಕು, ಬರೆಯಬೇಕು.
==================
• ಒಬ್ಬ ಸ್ತ್ರೀವಾದಿಯಾಗಿ ನಿಮ್ಮ ಕನಸಿನ ರಾಜ್ಯದಲ್ಲಿ ಹೆಣ್ಣುಗಳು ಏನಾಗಿರ್ತಾರೆ?
ಅನುಪಮಾ: ಕೋಪ, ತಾಪ, ಪ್ರೇಮ, ವಿರಹ ಎಲ್ಲ ಇರುವ ಸಾಮಾನ್ಯ ಮನುಷ್ಯರಾಗಿರ್ತಾರೆ. ಬುದ್ಧ ಹೇಳುವಂತೆ ಸಕಲ ಜೀವರಾಶಿಗಳಲ್ಲಿ ತಾವೂ ಒಂದೆನ್ನುವ ಸಮತಾ ಭಾವದ ಪ್ರತೀಕವಾಗಿರ್ತಾರೆ ಅಷ್ಟೆ. ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ಘನತೆಯ ಬದುಕು ಅವರದ್ದು ಮತ್ತು ಎಲ್ಲರದಾಗಿರುತ್ತದೆ.