ಕವಯಿತ್ರಿ, ಹೋರಾಟಗಾರ್ತಿ ರೂಪ ಹಾಸನ ಜೊತೆ ಲೇಖಕಿ ಡಾ.ಗೀತಾ ವಸಂತ ಮಾತುಕತೆ
ಪ್ರಶ್ನೆ: ನಿಮ್ಮೊಳಗೊಬ್ಬ ಛಲಬಿಡದ ಹೋರಾಟಗಾರ್ತಿಯಿದ್ದಾಳೆ. ಅವಳು ಹೇಗೆ ವಿಕಾಸವಾದಳು? ಬರಹ ಮತ್ತು ಹೋರಾಟ ಇವುಗಳಲ್ಲಿ ಯಾವುದು ನಿಮ್ಮ ಪ್ರಧಾನ ಆದ್ಯತೆ? ಯಾಕೆ?
ರೂಪ: ನಾನು ಗೌರಿಬಿದನೂರಿನಲ್ಲಿ ಪಿ.ಯು.ಸಿ ಓದುತ್ತಿದ್ದಾಗ ವೈಚಾರಿಕ ಚಿಂತನೆ, ಹೋರಾಟಗಳಿಗೆ ಪ್ರೇರಣೆಯಾಗುವ ವಾತಾವರಣವಿತ್ತು. ಬಿ.ಗಂಗಾಧರಮೂರ್ತಿ, ನಗರಗೆರೆ ರಮೇಶ್, ಎಚ್.ವಿ.ವೇಣುಗೋಪಾಲ ಇವರೆಲ್ಲ ನನ್ನ ಉಪನ್ಯಾಸಕರಾಗಿದ್ದರು. ವಿಚಾರ ಮಂಥನ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ರಾಜ್ಯಾದ್ಯಂತದಿಂದ ಚಿಂತಕರು, ಆಕ್ಟಿವಿಸ್ಟುಗಳು, ಬರಹಗಾರರು ಅಲ್ಲಿ ಬರುತ್ತಿದ್ದರು, ಚರ್ಚೆಗಳಾಗುತ್ತಿದ್ದವು. ಪ್ರತಿಭಟನೆಗಳಾಗುತ್ತಿದ್ದವು.
=============
• ರೂಪ ಹಾಸನ ಅಂದರೆ ಮೊದಲು ನನ್ನ ಮನದಲ್ಲಿ ಮೂಡುವ ಬಿಂಬ ಕವಯಿತ್ರಿಯದು. ಕವಿ ಅಂದಾಗ ಒಂದು ಕಣ್ಣಿರುತ್ತದಲ್ಲ… ತೀರ ಒಳಗಿನಿಂದ ಕಾಣುವುದು. ತೀವ್ರವಾಗಿ ಮಿಡಿಯುವುದು. ನಾವು ಕಂಡದ್ದನ್ನ ಲೋಕಕ್ಕೂ ಕಾಣಿಸುವುದು… ಕಾವ್ಯವು ಏಕಾಂತವೂ ಹೌದು, ಲೋಕಾಂತವೂ ಹೌದು. ನಿಮ್ಮನ್ನು ರೂಪಿಸುವಲ್ಲಿ ಕಾವ್ಯದ ಪಾಲೇನು?
ರೂಪ ಹಾಸನ: ನನಗೆ ಅರಿವಿಲ್ಲದೇನೇ ನಾನು ಕವಿಯಾದೆ. ಕವಿತೆಗಳ ಬಗ್ಗೆ ನನಗೆ ತುಂಬ ಪ್ರೀತಿಯಿತ್ತು. ಚಂದವಾಗಿ ಪದ್ಯಗಳನ್ನು ಪಾಠ ಮಾಡುತ್ತಿದ್ದ ಮೇಷ್ಟ್ರಗಳೂ ಬಾಲ್ಯದಿಂದಲೇ ನನ್ನ ಕಾವ್ಯ ಪ್ರೀತಿಗೆ ಕಾರಣರಾದರು. ನನ್ನ ತಂದೆ ಪಶುವೈದ್ಯರು. ಅವರು ಕೆಲಸ ಮಾಡುತ್ತ ಹೋದ ಊರುಗಳಲ್ಲೆಲ್ಲ ನಾನು ಬೆಳೆದೆ. ಸಣ್ಣಸಣ್ಣ ಊರುಗಳವು. ಅವರು ಚಿಕಿತ್ಸೆ ನೀಡಲು ಹೋಗುವಾಗ ಅವರೊಂದಿಗೆ ಸೈಕಲ್‌ನಲ್ಲಿ ಕುಳಿತು ನಾನೂ ಹಳ್ಳಿಗಳಿಗೆ ಹೋಗುತ್ತಿದ್ದೆ. ಅಲ್ಲಿನ ಬಡತನ, ಅಂಚಿಗೆ ತಳ್ಳಲ್ಪಟ್ಟವರ ಬದುಕು, ಜಾತಿ ವ್ಯವಸ್ಥೆ, ಹೆಣ್ಣುಮಕ್ಕಳ ಶೋಚನೀಯ ಸ್ಥಿತಿ ಎಲ್ಲವನ್ನೂ ನೋಡುತ್ತಾ ಹೋದಂತೆ, ಈ ದರ್ಶನವೇ ಲೋಕದ ಸಂಕಟಗಳಿಗೆ ಮಿಡಿಯುವಂತೆ ಮಾಡಿರಬಹುದು.
ನನ್ನ ದೀರ್ಘಕಾಲದ ಅವ್ಯಕ್ತ ಒದ್ದಾಟ, ತೀವ್ರ ತುಡಿತಗಳಿಗೆ ಮೂರ್ತರೂಪ ಒದಗಿ ಹೊರಹೊಮ್ಮುವುದು ಕವಿತೆ, ಹೀಗಾಗಿ ಕವಿತೆ ಹುಟ್ಟುವ ಮೊದಲಿನ ಈ ಒದ್ದಾಟದ ಗಳಿಗೆಗಳು, ಲೋಕದ ಸಮಸ್ಯೆಗಳನ್ನು ವಿಭಿನ್ನ ಆಯಾಮಗಳಲ್ಲಿ ವಿವರಿಸಿಕೊಳ್ಳಲು, ಅರ್ಥೈಸಿಕೊಳ್ಳಲು, ಸಾಂತ್ವನಗೊಳಿಸಿಕೊಳ್ಳಲು ಸಹಕರಿಸುತ್ತವೆ. ನನ್ನ ಕ್ಷುದ್ರತೆ, ಅಸಹನೆ, ಸಣ್ಣತನಗಳನ್ನು ಪಳಗಿಸಿಕೊಂಡು ಹೆಚ್ಚು ಮಾನವೀಯ ವಾಗಲು ತೊಡಗಿಸುತ್ತವೆ. ಹೀಗೆಂದೇ ಕವಿತೆ ನನ್ನ ಆತ್ಮಸಂಗಾತಿಯೂ ಹೌದು, ದಿಕ್ಕು ತೋರುವ ಗುರುವೂ ಹೌದು.
==========
• ಆ ವಯಸ್ಸಿನಲ್ಲಿ ಸಹಜವಾದ ಪ್ರೇಮ, ರೊಮ್ಯಾಂಟಿಕ್ ಒಳತೋಟಿಗಳು ಕಾಡಲಿಲ್ಲವೇ? ನಾನು ಅಂತ ಭಾವಿಸುವುದು ಹಾಗೂ ಸಮುದಾಯದ ಭಾಗವಾಗಿಯೇ ನನ್ನನ್ನು ಭಾವಿಸುವುದು ಇವೆರಡೂ ಭಿನ್ನ ಪ್ರವೃತ್ತಿಗಳು. ನಿಮ್ಮ ಮಾರ್ಗ ಹೆಚ್ಚು ಸಮಾಜಮುಖಿಯೆನಿಸುತ್ತದೆ.
ರೂಪ: ಸಾಮುದಾಯಕವಾಗಿಯೇ ನಾನು ಹೆಚ್ಚು ಪರಿಭಾವಿಸುತ್ತ ಬಂದೆ, ಒಳಗೊಳ್ಳುತ್ತ ಬಂದೆ. ವೈಯಕ್ತಿಕತೆಗಿಂತ ಸಾಮಾಜಿಕ ಅಸಮಾನತೆ, ವಿಷಮತೆ ನನ್ನನ್ನು ಹೆಚ್ಚು ಕಾಡುತ್ತ ಬರೆಸಿಕೊಂಡಿದೆ. ಆದರೆ ನಾನು ವೈಯಕ್ತಿಕವಾಗಿ ಅತ್ಯಂತ ತೀವ್ರವಾಗಿ ಬದುಕುವವಳೇ, ಸಣ್ಣ ಸಂಗತಿಗಳಿಗೂ ಖುಷಿಪಡುವುದು, ಹಕ್ಕಿಯಂತೆ ಹಾರಬೇಕೆನಿಸುವುದು… ಇವೆಲ್ಲ ನನ್ನೊಳಗಿದೆ. ಯಾಕೋ ಗೊತ್ತಿಲ್ಲ ಅದು ನನ್ನ ಕಾವ್ಯದಲ್ಲಿ ಹೆಚ್ಚು ಬಂದಿಲ್ಲ. ಮೊದಲಿಂದ ನಾನು ತುಂಬ ವರ್ಕೋ ಹಾಲಿಕ್. ನಿರಂತರ ಏನಾದರೂ ಮಾಡುತ್ತಲೇ ಇರುತ್ತೇನೆ. ಕವಿತೆ ಬರೆಯುವುದು, ಚಿತ್ರ ಬರೆಯುವುದು, ರಚನಾತ್ಮಕ ಕೆಲಸ… ಹೀಗೆ ಕಾಲೇಜು ದಿನಗಳಲ್ಲೇ ‘ಶಮಾ’ ಎಂಬ ಗೋಡೆ ಪತ್ರಿಕೆಯ ಸಂಪಾದಕಿ ಯಾಗಿದ್ದೆ, ಪ್ರೊಟೆಸ್ಟ್ಗಳಲ್ಲಿ ಭಾಗವಹಿಸುತ್ತಿದ್ದೆ. ಇಪ್ಪತ್ತೆರಡನೇ ವಯಸ್ಸಿಗೇ ಮದುವೆಯಾ ಯಿತು. ಆಗ ಬದುಕು ಒಮ್ಮೆಲೇ ಸ್ಥಗಿತವಾದಂತೆನಿಸಿತು. ಒಂಥರಾ ಡಿಪ್ರೆಶನ್ ಅನಿಸಿ ಬಿಟ್ಟಿತ್ತು. ಆದರೆ ನನ್ನ ಕ್ರಿಯೇಟಿವಿಟಿ ನನ್ನನ್ನು ಕಾಪಾಡಿತು. ಅದರಿಂದ ಮತ್ತೆಮತ್ತೆ ಮರುಹುಟ್ಟು ಪಡೆಯುತ್ತಿದ್ದೆ. ಕಸದಿಂದಲೇ ಕಲಾಕೃತಿಗಳನ್ನು ಮಾಡುವುದು, ಓದುವುದು, ಬರೆಯುವುದು ಇಂಥದನ್ನೆಲ್ಲ ಆ ಸಮಯದಲ್ಲಿ ತುಂಬ ಮಾಡಿದೆ. ನನ್ನ ಔಪ್ಲೆಟ್ ಇಂಥದೇ ಇರಬೇಕು ಅಂತಿಲ್ಲ. ಕವಿತೆ, ಚಿತ್ರ ಬರೆಯುವುದು, ಸುಮ್ಮನೇ ಹಾಡಿಕೊಳ್ಳುವುದು, ಮಳೆಯಲ್ಲಿ ನೆನೆಯುವುದು, ಮಗುವಿನೊಂದಿಗೆ ಆಟವಾಡುವುದು, ಮೌನವಾಗಿರುವುದು ಇಂಥದರಿಂದಲೂ ಸಮಾಧಾನಗೊಳ್ಳಬಲ್ಲವಳಾಗಿದ್ದೇನೆ. ಅಡುಗೆ ಮಾಡುವುದೂ ಕ್ರಿಯೇಟಿವಿಟಿಯೇ! ಆದರೆ ಅದೂ ಕಂಪಲ್ಟನ್ ಆದಾಗ ಕಿರಿಕಿರಿಯೆನಿಸುತ್ತದೆ. ಮದುವೆಯ ನಂತರವೇ ಮೇಜರ್ ಅನಿಸಿದ ಎಲ್ಲ ಕವಿಗಳನ್ನು ಓದಿಕೊಂಡೆ. ಕವಿತೆಯ ರಹಸ್ಯಗಳು, ರೂಪಕದ ವಿಧಾನಗಳು ತಿಳಿಯತೊಡಗಿದವು. ಮಗ ಹುಟ್ಟಿದ ಮೇಲೆ ನನ್ನ ಮೊದಲ ಕವನ ಸಂಕಲನ ಬಂತು. ಗೆಳತಿಯರ ಬಳಗ ಅಂತ ಮಾಡಿಕೊಂಡು ನಮ್ಮನ್ನು ಇಂಪ್ರೊಮೈಸ್ ಮಾಡಿಕೊಳ್ಳುತ್ತಾ ಹೊಸ ಆಯಾಮಗಳಿಗೆ ತೆರೆದುಕೊಳ್ಳುವುದು ಸಂದರ್ಶನ ಸಲುವಾಗಿ ಕೆಲಸ ಮಾಡತೊಡಗಿದೆ. ಹೋರಾಟ ಅಂದರೆ ಬೀದಿಗಿಳಿದು ಸಾಧ್ಯವಾಯ್ತು. ಪ್ರೇರಣಾ ವಿಕಾಸ ವೇದಿಕೆ ಯನ್ನು ರೂಪಿಸಿ ಮಕ್ಕಳ ಮಾಡುವುದಷ್ಟೇ ಅಲ್ಲ. ಅದು ಬದುಕು ಪುನರ್ ರಚಿಸುವ ಕೆಲಸವೂ ಹೌದು. ಸಂಕಷ್ಟದಲ್ಲಿರುವ ಮಕ್ಕಳು, ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳು, ಬಾಲ್ಯವಿವಾಹಕ್ಕೊಳಗಾದವರು, ಅಪಹರಿಸಲ್ಪಟ್ಟವರು, ವೇಶೈಯರು ಇವರಿಗೆಲ್ಲ ಆಪ್ತಸಮಾಲೋಚನೆ ನಡೆಸುವುದು, ಅವರ ಬದುಕನ್ನು ಪುನರ್ ನಿರ್ಮಿಸಿಕೊಡಲು ತೊಡಗಿಕೊಳ್ಳುವುದು ಹೀಗೆ ನನ್ನ ಕಾರ್ಯವ್ಯಾಪ್ತಿ ಬೆಳೆಯಿತು.
=============
• ನಮ್ಮೆಲ್ಲ ಸಂಘಟಿತ ಹೋರಾಟಗಳ ಹಿಂದೆ ತಾತ್ವಿಕ ಸ್ಪಷ್ಟತೆಯಿಲ್ಲದೇ ಹೋದರೆ ಅದು ಬರೀ ಗದ್ದಲವಾಗುತ್ತದೆ. ನಿಮ್ಮ ತಾತ್ವಿಕ ಒಳನೋಟಗಳು ವಿಕಾಸಗೊಂಡ ಪ್ರಕ್ರಿಯೆಯನ್ನು ಹಂಚಿಕೊಳ್ಳಿ.
ರೂಪ: ಈ ಸಮಸ್ಯೆ ‘ನನ್ನದೇ’ ಎನಿಸುವುದೇ ದೊಡ್ಡ ತಾತ್ವಿಕತೆ ಎಲ್ಲ ಹೋರಾಟ ಗಳಿಗೆ ನಾವು ಸಮಾಜದ ಭಾಗವೇ ಆಗಿರುವಾಗ ಅದರ ಸಂಕಟಗಳ ಭಾಗವೂ ಹೌದಲ್ಲವಾ? ಬುದ್ಧನ ಕಾರುಣ್ಯ ಅದೇ ಅಲ್ಲವಾ? ಆ ಇನ್ನೊಂದೇ ನಾನಾಗಿ ನೋಡುವುದು, ಭಾವಿಸುವುದು. ಅದೇ ಸಹಾನುಭೂತಿ, ಬರೆಯುವುದು ಹಾಗೂ ಹೋರಾಟ ಬೇರೆಯಲ್ಲ ನನಗೆ ಸಮಸ್ಯೆಯನ್ನು ಬಿಡಿಸುವಾಗ ಆಡಳಿತಾ ತಕವಾಗಿ ಇರುವ ತೊಡಕುಗಳು ಅರ್ಥವಾಗುತ್ತ ಹೋದಂತೆ, ಬರಹ ಆಕ್ಟಿವಿ ಸಮ್ ಹಾಗೂ ಆಡಳಿತಾತ್ಮಕ ಪರಿಹಾರಗಳು ಇವುಗಳ ಮಧ್ಯೆ ಇರುವ ಕಂದಕ ತುಂಬುವುದು ನನಗೆ ತಿಳಿಯುತ್ತಾ ಹೋಯ್ತು. ನಾನು ಸಾಂದರ್ಭಿಕವಾಗಿ ಸರ್ಕಾರಕ್ಕೆ ಪತ್ರಗಳನ್ನು ಬರೆಯುವುದು, ಲೇಖನಗಳನ್ನು ಬರೆಯುವುದು, ಹೋರಾಟ ಗಳನ್ನು ರೂಪಿಸುವುದು, ಬೇಕಾದಾಗ ಬೀದಿಗಿಳಿಯುವುದು ಎಲ್ಲವನ್ನೂ ಮಾಡಿದೆ.
===========
• ನಿಮ್ಮ ಇತ್ತೀಚಿನ ಕೃತಿ ‘ಇವಳ ಭಾರತ ಸ್ತ್ರೀಯರ ಬದುಕಿನ ಜ್ವಲಂತ ವಾಸ್ತವಗಳ ಕನ್ನಡಿ. ಬಿಡುಗಡೆಗೆ ಕಾದಿರುವ ಎಲ್ಲ ಹೆಣ್ಣು ಜೀವಗಳಿಗೆ ಅದನ್ನು ಅರ್ಪಿಸಿದ್ದೀರಿ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಂತೂ ಮತ್ತೆ ಬರ್ಬರ ಚರಿತ್ರೆ ಪುನರಾವರ್ತನೆಯಾಗುತ್ತಿರುವ ಭಾಸವುಂಟುಮಾಡುತ್ತಿವೆ. ತಮಗೆ ಒಲಿಯದ ಹೆಣ್ಣುಗಳನ್ನು ದಾರುಣವಾಗಿ ಕೊಂದ ಘಟನೆಗಳು… ಪ್ರಜ್ವಲ್ ರೇವಣ್ಣನ ಕಾಮಕಾಂಡ..
ರೂಪ: ಹಾಸನದಲ್ಲಿ ನಡೆದಿರುವುದು ಕೇವಲ ಒಂದು ಪ್ರಕರಣವಲ್ಲ ಅದು ಲೈಂಗಿಕ ಹತ್ಯಾಕಾಂಡ ಎನ್ನುತ್ತೇನೆ ನಾನು. ಅನೇಕ ಕುಟುಂಬಗಳು ಮುರಿಯುವುದನ್ನು, ಆತ್ಮಹತ್ಯೆಯ ಪ್ರಯತ್ನಗಳಾಗುವುದನ್ನು ನೋಡುತ್ತ, ಅದನ್ನು ತಡೆಯುವ ಪ್ರಯತ್ನ, ಧೈರ್ಯ ತುಂಬುವುದು… ಹೀಗೆ ಎರಡು ತಿಂಗಳಿಂದ ನಾನು ಜರ್ಝರಿತಳಾಗಿದ್ದೇನೆ. ಊಹೆ ಮಾಡಲೂ ಸಾಧ್ಯವಾಗದ ಸಮಸ್ಯೆಗಳು ಇದರಲ್ಲಿ ಸಿಲುಕಿದ ಕುಟುಂಬಸ್ಥ ಹೆಣ್ಣುಮಕ್ಕಳದು. ಇದರಲ್ಲಿ ಪಕ್ಷದ ಕಾರ್ಯಕರ್ತೆಯರು, ಅಧಿಕಾರಸ್ಥರು, ಕಸಗುಡಿಸುವವರು… ಎಲ್ಲ ಸ್ತರದವರೂ ಇದ್ದಾರೆ. ಹಾಸನ ಜಿಲ್ಲೆಯ ಸಂಸದನಾಗಿ ಎಲ್ಲರನ್ನೂ ಕಾಪಾಡಬೇಕಿರುವವನು, ತನ್ನ ಅಧಿಕಾರ ಬಳಸಿ ಇಂಥ ಹೀನಾಯ ಸನ್ನಿವೇಶ ಸೃಷ್ಟಿಸಿದನಲ್ಲ… ಇದನ್ನು ಸಾರ್ವಜನಿಕವಾಗಿ ಹಂಚುವಲ್ಲಿಯೂ ಅಂಥದೇ ಕೌರ್ಯವಿದೆ. ಇದನ್ನು ನೋಡಿದ ಮಕ್ಕಳ ಮನಸ್ಸು ಏನಾಗಿರಬಹುದು? ಅಧಿಕಾರ ಹಾಗೂ ಲಾಭಕ್ಕೋಸ್ಕರ ಶಾಮೀಲಾದ ಕೆಲವು ಹೆಂಗಸರನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಎಲ್ಲ ಕಲಸುಮೇಲೋಗರವಾದ ಸುನಾಮಿಯಿದು!
==============
• ನಿಜ ನೀವು ಹೇಳುತ್ತಿರುವುದು. ಇದರಿಂದ ಹೊರಬರುವ ದಾರಿ ಯಾವುದು? ಇನ್ನೂ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿರುವ ಎಳೆಯ ಪೀಳಿಗೆಯನ್ನು ನಾವು ಹೇಗೆ ಮುನ್ನಡೆಸಬೇಕು?
ರೂಪ: ಸಮಾಜವನ್ನು ತಿದ್ದುವ, ಸರಿದಿಕ್ಕಿನೆಡೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ಏಕಮುಖವಾಗಿ ನಿರ್ವಹಿಸಲು ಸಾಧ್ಯವಿಲ್ಲ. ತೀವ್ರ ತುಡಿತ, ನಮ್ಮದೆಂದು ಆತುಕೊಳ್ಳುವ ಕಾಳಜಿ, ವಿಭಿನ್ನ ಅಭಿವ್ಯಕ್ತಿ, ಆಳದ ಚಿಂತನೆ, ವಿಶಾಲ ಭಿತ್ತಿಯ ಒಳನೋಟ, ನಿಲುಗಡೆಯಿಲ್ಲದ ಒಳಹೊರಗಿನ ಹೋರಾಟ, ಬಹು ಆಯಾಮಗಳ ರಚನಾತ್ಮಕ ತೊಡಗಿಕೊಳ್ಳುವಿಕೆ ಇವುಗಳ ಮೇಲೈಸುವಿಕೆಯಿಂದ ಸಾಧ್ಯವೆಂಬುದು ನನ್ನ ನಂಬುಗೆ.
‘ನನ್ನ ದೇಹ, ಮನಸ್ಸು, ಆತ್ಮ ತುಂಬ ಅಮೂಲ್ಯವಾದುದು. ಅದು ನಮ್ಮ ವ್ಯಕ್ತಿತ್ವದ ಭಾಗ, ಅದನ್ನು ನಮ್ಮದಾಗಿ ಕಾಪಿಟ್ಟುಕೊಳ್ಳಬೇಕು. ಯಾರೂ ದುರ್ಬಳಕೆ ಮಾಡಲು ಬಿಡಬಾರದು’ ಎಂಬ ಅರಿವನ್ನು ನಮ್ಮ ಮಕ್ಕಳಲ್ಲಿ ಮೂಡಿಸಬೇಕು. ನಾನು ಈ ಕುರಿತು ಸೈಕಾಲಜಿಸ್ಟ್‌ಗಳ ಬಳಿ ಗೈನಕಾಲಜಿಸ್ಟ್‌ಗಳ ಬಳಿ ತುಂಬಾ ಮಾತಾಡಿದ್ದೇನೆ. ಅರಿವುಳ್ಳ ಗಟ್ಟಿ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದಕ್ಕೆ ಸಮರ್ಪಕ ಪೇರೆಂಟಿಂಗ್ ತುಂಬ ಮುಖ್ಯ. ನಾಗರಿಕ ಸಮಾಜವಿದೆ, ಕಾನೂನಿದೆ, ನೈತಿಕ ತಿಳಿವು ಎಂಬುದಿದೆ ಎಂಬ ನಡವಳಿಕೆಯ ಶಿಕ್ಷಣ ಪ್ರತಿ ಹಂತದಲ್ಲೂ ಕೊಡುವುದು ಮುಖ್ಯ. ನಾನಿದನ್ನು ‘ಕಾಮನೆಗಳ ಪಳಗಿಸುವಿಕೆ’ ಎನ್ನುತ್ತೇನೆ.
=============
• ಮಕ್ಕಳು, ದಮನಿತ ಮಹಿಳೆಯರು, ಶಿಕ್ಷಣ, ಪರಿಸರ… ಇಷ್ಟೆಲ್ಲ ವಿಷಯಗಳಲ್ಲಿ ತೊಡಗಿದ ಕಾರ್ಯಕರ್ತೆಯಾಗಿ ನಿಮ್ಮ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ? ಹೇಗೆ ನೀವಾಗಿ ಉಳಿಯುತ್ತೀರಿ?
ರೂಪ: ಇತ್ತೀಚಿನ ಈ ಸುನಾಮಿಯಿಂದ ಹೊರಬರಲಾಗದೇ ಒದ್ದಾಡುತ್ತಿದ್ದೇನೆ. ಏನನ್ನೂ ಬರೆಯಲೂ ಸಾಧ್ಯವಾಗದ ಸ್ಥಿತಿಯಿದು. ಇಂಥ ಸಮಯದಲ್ಲಿ ಏಕಾಂತದಲ್ಲಿ ಯೋಚಿಸುತ್ತೇನೆ, ಯೋಜಿಸುತ್ತೇನೆ. ನಿಧಾನಕ್ಕೆ ಗಂಟು ಬಿಡಿಸಿಕೊಳ್ಳುತ್ತೇನೆ. ಹಾಡು ಕೇಳುತ್ತೇನೆ. ಗಾರ್ಡನಿಂಗ್ ಮಾಡುತ್ತೇನೆ. ಮೌನ ಮತ್ತು ಮಣ್ಣಿನ ಸಂಪರ್ಕದಲ್ಲಿ ಗೆಲುವಾಗುತ್ತೇನೆ.