- ಪ್ರಶಾಂತ್. ಎಸ್
ಮೈಸೂರು: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹುಲಿ-ಮಾನವ ಸಂಘರ್ಷ ಹೆಚ್ಚಾಗುತ್ತದೆ. ಇದು ಅಚ್ಚರಿಯಾದರೂ ಸತ್ಯ. ನವೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರವರಿ ತಿಂಗಳ ತನಕ ಸಾಮಾನ್ಯವಾಗಿ ಈ ಸಂಘರ್ಷ ಕಂಡುಬರುತ್ತದೆ.
ಎರಡು ವರ್ಷಗಳ ಹಿಂದೆ ಚಳಿಗಾಲದ ಸಮಯದಲ್ಲಿ ಹುಲಿ- ಮಾನವ ಸಂಘರ್ಷ ಕಡಿಮೆಯಾಗಿತ್ತು. ಈ ಚಳಿಗಾಲದಲ್ಲಿ ಮತ್ತೆ ಸಂಘರ್ಷ ಏರ್ಪಟ್ಟಿದೆ.
ಸಂಘರ್ಷಕ್ಕೆ ಕಾರಣವೇನು? : ನವೆಂಬರ್- ಫೆಬ್ರವರಿ ನಡುವಿನ ಅವಧಿಯು ಹುಲಿಗಳ ಸಂತಾನೋತ್ಪತ್ತಿಯ ಸಮಯವಾಗಿದೆ. ಈ ಅವಧಿಯಲ್ಲಿ ಗಂಡು ಹುಲಿಗಳು ಸಂಗಾತಿ ಅರಸುತ್ತಾ ಅಲೆಯುತ್ತವೆ. ಹೆಣ್ಣು ಹುಲಿಯನ್ನು ಅರಸುತ್ತಾ ಹೋಗುವ ಗಂಡು ಹುಲಿಯು ತನ್ನ ನಿರ್ದಿಷ್ಟ ಆವಾಸ ತಾಣದಿಂದ ಎಲ್ಲೆ ದಾಟಿ ಮತ್ತೊಂದು ಹುಲಿಯ ಆವಾಸ ತಾಣವನ್ನು ಪ್ರವೇಶಿಸಿದರೆ, ಅಲ್ಲಿರುವ ಗಂಡು ಹುಲಿಯೊಂದಿಗೆ ಕಾದಾಟ ನಿಶ್ಚಿತ. ಈ ಕಾದಾಟದಲ್ಲಿ ಪರಾಭವ ಗೊಂಡ ಹುಲಿಯು ಬೇರೆ ಮಾರ್ಗವಿಲ್ಲದೆ ಆ ಸ್ಥಳದಿಂದ ನಿರ್ಗಮಿಸಬೇಕಾಗುತ್ತದೆ.
ಆಗ ಅದು ಅನಿವಾರ್ಯವಾಗಿ ಕಾಡಂಚಿನ ಗ್ರಾಮಗಳತ್ತ ನುಗ್ಗುತ್ತದೆ. ಕಾಡಿನೊಳಗೆ ಹಸಿವಾದಾಗ ಸುಲಭವಾಗಿ ತನ್ನ ಆಹಾರವನ್ನು ಪಡೆಯುವ ಹುಲಿಗೆ ಕಾಡಂಚಿನಲ್ಲಿ ತುತ್ತು ತಕ್ಷಣಕ್ಕೆ ಒದಗುವುದಿಲ್ಲ. ಹೀಗಾಗಿ ಹಸಿವಿನಿಂದ ಬಳಲುವ ಹುಲಿಯು ವ್ಯಗ್ರರೂಪ ತಾಳುತ್ತದೆ. ತಕ್ಷಣಕ್ಕೆ ಕಣ್ಣೆದುರಿಗೆ ಸಿಗುವ ಜಾನುವಾರುಗಳ ಮೇಲೆರಗುತ್ತದೆ. ಸಾಕು ಪ್ರಾಣಿಗಳ ಸನಿಹದಲ್ಲಿ ಮಾನವನ ಓಡಾಟವು ಇರುವುದರಿಂದ ಹಸಿದ ಹುಲಿಯ ಬೇಟೆಗೆ ತೊಡಕು ಉಂಟಾಗುತ್ತದೆ. ಇದರಿಂದ ವಿಚಲಿತವಾಗುವ ಹುಲಿಯು ಮನುಷ್ಯರ ಮೇಲೆಯೂ ಮುಗಿಬೀಳುತ್ತದೆ. ಹೀಗೆ ಕಾಡಿನಲ್ಲಿರಬೇಕಾದ ವನ್ಯಜೀವಿಗಳು ನಾಡಿನತ್ತ ಬಂದು ಜೀವ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಮಾನವ-ಪ್ರಾಣಿ ಸಂಘರ್ಷಗಳು ನಡೆದಾಗ ರಾಜ್ಯ ಸರ್ಕಾರ ಒಂದಷ್ಟು ಪರಿಹಾರ ನೀಡಿ ಮಾನವ-ಪ್ರಾಣಿ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕೈತೊಳೆದುಕೊಳ್ಳುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ.
ಮಾನವ-ಪ್ರಾಣಿ ಸಂಘರ್ಷ ತಡೆಯಲು ಕ್ರಮಗಳೇನು?
1. ಅರಣ್ಯ ಇಲಾಖೆಗೆ ಸಿಬ್ಬಂದಿ, ವಾಹನ, ಮೂಲಸೌಕರ್ಯಗಳನ್ನು ಒದಗಿಸಬೇಕು.
2. ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು.
3. ಕಾಡು ಪ್ರಾಣಿಗಳ ಹಾವಳಿ ಇರುವ ಪ್ರದೇಶಗಳಲ್ಲಿ ಜನರಿಗೆ ನಿರಂತರವಾಗಿ ಎಚ್ಚರಿಕೆ ಸಂದೇಶ ನೀಡುತ್ತಿರಬೇಕು
4. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಸಂಬಂಽಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
ಹುಲಿ ಮನುಷ್ಯರನ್ನು ನೋಡಿದರೆ ತುಂಬಾ ಭಯ ಪಡುತ್ತದೆ. ಮನುಷ್ಯನನ್ನು ಹುಡುಕಿಕೊಂಡು ಬಂದು ಕೊಲ್ಲುವುದು ತುಂಬಾ ಕಡಿಮೆ. ಗಡಿ ವಿಚಾರದಲ್ಲಿ ಕದನ ನಡೆದು ಹೊರದಬ್ಬಿಸಿಕೊಂಡ ಹುಲಿ ಅಥವಾ ಬೇಟೆಯಾಡಲು ನಿಶ್ಶಕ್ತವಾಗಿ ರುವ ಹುಲಿಯ ಕೊನೆಯ ಆಯ್ಕೆ ಮನುಷ್ಯ. ಇಂತಹ ಸಂದರ್ಭದಲ್ಲಿ ಬೋನ್ ಇರಿಸಿ ಯಾರಿಗೂ ತೊಂದರೆ ಆಗದಂತೆ ಹುಲಿಯನ್ನು ಸೆರೆ ಹಿಡಿದು ಮತ್ತೆ ಕಾಡಿಗೆ ಬಿಡುತ್ತೇವೆ. – ಪಿ. ಎ. ಸೀಮಾ, ಡಿಸಿಎಫ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ.
ಡಿಸೆಂಬರ್-ಜನವರಿ ತಿಂಗಳಿನಲ್ಲಿ ಚಳಿ ಜಾಸ್ತಿ ಇರುವುದರಿಂದ ನಿಶ್ಯಕ್ತವಾಗಿರುವ ಹುಲಿಗಳು ಆಕಸ್ಮಿಕವಾಗಿ ನಾಡಿನತ್ತ ಹೋಗಿ ಜಾನುವಾರು, ಮನುಷ್ಯನ ಮೇಲೆಯೂ ದಾಳಿ ಮಾಡುತ್ತವೆ. ಆ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಸ್ಥಳದಲ್ಲಿ ಬೋನ್ ಇರಿಸಿ, ಸೆರೆ ಸಿಕ್ಕ ಹುಲಿಯನ್ನು ಕಾಡಿಗೆ ಬಿಡುತ್ತೇವೆ. -ಎಸ್. ಎಸ್. ಸಿದ್ದರಾಜು, ಆರ್‌ಎಫ್‌ಓ.
2023ನೇ ಸಾಲಿನಲ್ಲಿ ನಡೆದ ಹುಲಿ ದಾಳಿ ಪ್ರಕರಣಗಳು
5 ಫೆಬ್ರವರಿ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಯಿಂದ ವ್ಯಕ್ತಿ ಸಾವು
8 ನವೆಂಬರ್: ಹುಲಿ ದಾಳಿಯಿಂದ ಕಾಡಬೇಗೂರು ಗ್ರಾಮದ 45 ವರ್ಷದ ವ್ಯಕ್ತಿ ಸಾವು
24 ಡಿಸೆಂಬರ್: ನಂ. ಗೂಡು ತಾಲ್ಲೂಕಿನ ಬಳ್ಳೂರು ಹುಂಡಿಯಲ್ಲಿ ಮಹಿಳೆ ಕೊಂದುಹಾಕಿದ್ದ ಹುಲಿ
2024ನೇ ಸಾಲಿನಲ್ಲಿ ನಡೆದ ಹುಲಿ ದಾಳಿ ಪ್ರಕರಣಗಳು
22 ಜನವರಿ: ಅಂತರಸಂತೆ ಸಮೀಪ ಮಾನಿ ಮೂಲೆ ಹಾಡಿಯಲ್ಲಿ ಯುವಕನ ಮೇಲೆ ದಾಳಿ
8 ನವೆಂಬರ್: ಚಾಕಹಳ್ಳಿ ಗ್ರಾಮದ ಜಮೀನಿನಲ್ಲಿ ಹಸುವಿನ ಮೇಲೆ ದಾಳಿ
17 ನವೆಂಬರ್: ಕಲ್ಲಹಟ್ಟಿ ಗ್ರಾಮದಲ್ಲಿ ಹಾಡಹಗಲೇ ಬಾಲಕನನ್ನು ಕೊಂದು ಹಾಕಿದ್ದ ವ್ಯಾಘ್ರ





