Mysore
20
overcast clouds
Light
Dark

ಮೇಲ್ಮನೆ ಸ್ಥಾನ: ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಎಂಎಲ್‌ಸಿ!

ಮೇಲ್ಮನೆ ಸ್ಥಾನ: ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಎಂಎಲ್‌ಸಿ!

ಮೈಸೂರು: ವಿಧಾನಸಭೆಯಿಂದ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಮುಖ್ಯಮಂತ್ರಿ ತವರು ಕ್ಷೇತ್ರವಾದ ಮೈಸೂರು ಜಿಲ್ಲೆಯಲ್ಲಿ ಅನೇಕ ಮುಖಂಡರಲ್ಲಿ ಪರಿಷತ್ ಸದಸ್ಯ ಸ್ಥಾನ ಪೈಪೋಟಿಯ ಜತೆಗೆ ಲಾಬಿಯೂ ಜೋರಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ 136 ಸ್ಥಾನಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿ ಒಂದು ವರ್ಷ ಪೂರೈಸಿರುವ ಕಾಂಗ್ರೆಸ್‌ ಪಕ್ಷಕ್ಕೆ ವಿಧಾನ ಪರಿಷತ್‌ನಲ್ಲಿ ಕನಿಷ್ಠ ಏಳು ಸ್ಥಾನಗಳನ್ನು ಆಯ್ಕೆ ಮಾಡಲು ಅವಕಾಶ ಇರುವುದರಿಂದ ಸಾಕಷ್ಟು ಪೈಪೋಟಿ ನಡೆಯಲಿದೆ.

ಈ ಬಾರಿ ಜಾತಿವಾರು, ಹಿರಿತನ, ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ವಂಚಿತರಿಗೆ ಅವಕಾಶ ಮಾಡಿಕೊಡುವ ಕಾರಣ ಅನೇಕ ಹಿರಿಯ ಮುಖಂಡರು ಸದ್ದಿಲ್ಲದೆ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ಕರ್ನಾಟಕ ವಿಧಾನಸಭೆಯಿಂದ ಮೇಲ್ಮನೆಗೆ ಜೂ.13ರಂದು ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟವಾಗಿದ್ದು, ದಕ್ಷಿಣ, ಆಗ್ನೇಯ, ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾವು ಇರುವಾಗಲೇ ಈ ಚುನಾವಣೆಯ ಕಾವು ಮತ್ತಷ್ಟು ಜೋರಾಗಲಿದೆ.

ಮೈಸೂರು ಜಿಲ್ಲೆಯಿಂದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ.ಬಸವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್.ಮೂರ್ತಿ, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮಹಾಪೌರ ನಾರಾಯಣ, ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ, ಅನೇಕರು ತಮಗೊಂದು ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ರಾಜ್ಯ ಮತ್ತು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಾಗ ಜಾತಿವಾರು, ಹಿರಿತನ, ಅವಕಾಶದಿಂದ ವಂಚಿತರಾದವರನ್ನು ಪರಿಗಣಿಸುವ ಸಾಧ್ಯತೆ ಇರುವ ಕಾರಣ ನಾಲೈದು ಜನರನ್ನು ಪ್ರಮುಖ ವಾಗಿ ಗುರುತಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಾಯಕ ಸಮಾಜಕ್ಕೆ ಅವಕಾಶಕ್ಕೆ ಬೇಡಿಕೆ: ಮೈಸೂರು ಭಾಗದಲ್ಲಿ ನಾಯಕ ಸಮಾಜಕ್ಕೆ ಜಾ.ದಳ ಮತ್ತು ಬಿಜೆಪಿಯಲ್ಲಿ ಅವಕಾಶ ಮಾಡಿಕೊಟ್ಟಂತೆ ಕಾಂಗ್ರೆಸ್‌ನಲ್ಲೂ ಪ್ರಾತಿನಿಧ್ಯಕೊಡಬೇಕೆಂಬ ಕೂಗು ಕೇಳಿಬಂದಿದೆ. ಜಾ.ದಳದಲ್ಲಿ ಎಸ್.ಚಿಕ್ಕಮಾದು, ಬಿಜೆಪಿಯಲ್ಲಿ ಸಿದ್ದರಾಜು ಅವರನ್ನು ಒಂದೊಂದು ಅವಧಿಗೆ ಪರಿಷತ್‌ಗೆ ನೇಮಕ ಮಾಡಲಾಗಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ಇದುವರೆಗೂ ಹಳೆಯ ಮೈಸೂರು ಪ್ರಾಂತ್ಯಕ್ಕೆ ಅವಕಾಶ ನೀಡದ ಕಾರಣ ಈ ಬಾರಿ ಅವಕಾಶ ಕೊಡುವಂತೆ ಬೇಡಿಕೆ ಇಡಲಾಗಿದೆ. ಈಗಾಗಲೇ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜು ಸಿಎಂ ಅವರನ್ನು ಭೇಟಿ ಮಾಡಿದ್ದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬ್ಯಾಟಿಂಗ್ ಮಾಡಿದ್ದಾರೆ.

ಮೈಸೂರು-ಚಾಮರಾಜನಗರ ಜಿಲ್ಲೆಯ ಎಸ್‌ಟಿ ಸಮಾವೇಶದಲ್ಲಿ ಬಹಿರಂಗವಾಗಿ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರಿಂದಾಗಿ ಸತೀಶ್ ಜಾರಕಿ ಹೊಳಿ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಮತ್ತೊಂದೆಡೆ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಗಾಗಿ ಪೈಪೋಟಿ ನೀಡಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಮಹಿಳಾ ಕೋಟಾದಡಿ ಅವಕಾಶಕ್ಕೆ ಬೇಡಿಕೆ ಸಲ್ಲಿಸಿದ್ದಲ್ಲದೆ, ಸಾಮಾಜಿಕ ನ್ಯಾಯದಡಿ ಮಹಿಳಾ, ದಲಿತ ಕೋಟಾದಡಿ ಆಯ್ಕೆ ಮಾಡುವಂತೆ ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಆಪ್ತರಲ್ಲಿ ಒಬ್ಬರಾಗಿರುವ ಮಾಜಿ ಮಹಾಪೌರ ಅಯೂಬ್ ಖಾನ್ ಕೂಡ ಪರಿಷತ್ ಸದಸ್ಯ ಸ್ಥಾನಕ್ಕೆ ಕಣ್ಣಿಟ್ಟಿದ್ದರೂ ಈಗ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿರುವ ಕಾರಣ ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟ ಎನ್ನಲಾಗಿದೆ.

ಕ್ಷೇತ್ರ ತ್ಯಾಗ ಮಾಡಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ

ಕಳೆದ ಚುನಾವಣೆಯಲ್ಲಿ ತಂದೆಗಾಗಿ ವರುಣ ಕ್ಷೇತ್ರವನ್ನು ತ್ಯಾಗ ಮಾಡಿದ್ದ ಡಾ.ಯತೀಂದ್ರ ಅವರನ್ನು ಪರಿಷತ್‌ ಸದಸ್ಯರನ್ನಾಗಿ ಮಾಡಿ ಮಂತ್ರಿ ಮಾಡುವ ಅವಕಾಶ ಇದೆ ಎನ್ನಲಾಗುತ್ತಿದ್ದು, ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆ
ಅಂತಿಮವಾಗಲಿದೆ.

ಭರವಸೆ ಈಡೇರಿಕೆ ನಿರೀಕ್ಷೆ…
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್ ಅವರಿಗೆ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರಿಂದ ಈಗ ನಿರೀಕ್ಷೆಯಲ್ಲಿದ್ದಾರೆ. ಸತತ ಮೂರು ಅವಧಿಯಿಂದ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿರುವ ಜತೆಗೆ ಒಕ್ಕಲಿಗ ಸಮುದಾಯದ ಕೋಟಾದಡಿ ಅವಕಾಶ ಕೊಡುವಂತೆ ಕೇಳಿದ್ದಾರೆ. ಈಗಾಗಲೇ ಸಿಎಂ, ಡಿಸಿಎಂ ಭೇಟಿ ಮಾಡಿ ಸಮಾಲೋಚನೆ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಯುವ ಸಮುದಾಯಕ್ಕೆ ಅವಕಾಶ ಮಾಡಿಕೊಡುವಾಗಲೂ ವಿಜಯ್‌ ಕುಮಾರ್ ಮುಂಚೂಣಿಗೆ ಬರುವುದರ ಜೊತೆಗೆ ಒಳಗೊಳಗೆ ಕೆಲವರು ಅಡ್ಡಿಯಾಗುವ ಆತಂಕ ಬೆಂಬಲಿಗರಲ್ಲಿ ಮನೆ ಮಾಡಿದೆ.