• ಜಿ.ತಂಗಂ ಗೋಪಿನಾಥಂ
ಅಜ್ಜ ಅಜ್ಜಿಯರು ಮಕ್ಕಳಿಗೆ, ಮೊಮ್ಮಕ್ಕಳಿಗೆ ನೀತಿ ಕತೆಗಳನ್ನು ಹೇಳುವ ಕಾಲ ಹಿಂದೆ ಇತ್ತು. ಮನೆ, ಶಾಲೆ, ಟ್ಯೂಷನ್ ಕೇಂದ್ರಿತ ಈ ಕಾಲದಲ್ಲಿ ಕಥೆಗಳನ್ನು ಹೇಳುವ, ಕೇಳುವ ಅಭ್ಯಾಸ, ಎಲ್ಲರೊಂದಿಗೆ ಬೆರೆತು ಆಟವಾಡುವ ಅವಕಾಶ ಇಲ್ಲವಾಗಿದೆ.
ಈಗಿನ ಪೀಳಿಗೆಗೆ ಟಿವಿ, ಕಂಪ್ಯೂಟರ್, ಮೊಬೈಲ್ ಫೋನ್‌ಗಳೇ ಮನರಂಜನಾ ಮಾಧ್ಯಮಗಳು, ಇವುಗಳಿಂದ ಯುವ ಸಮೂಹ ವನ್ನು ಹೊರತಂದು ಮರಳಿ ಕಥೆ ಕೇಳುವ, ಹೇಳುವ, ಒಗ್ಗೂಡಿ ಹಾಡುವ ಅವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮೈಸೂರಿನ ಕುವೆಂಪುನಗರದಲ್ಲಿರುವ ರಂಗದಿಗ್ಗಜ ಪ್ರೊ. ಸಿಂಧುವಳ್ಳಿ ಅನಂತಮೂರ್ತಿಯವರ ಸ್ವಗೃಹವಾದ ‘ಕಲಾ ಸುರುಚಿ’ ರಂಗಮನೆಯು ‘ಕಥೆ ಕೇಳೋಣ ಬನ್ನಿ’ ಎಂಬ ವಿನೂತನ ಸಾಪ್ತಾಹಿಕ ಕಾರ್ಯಕ್ರಮ ಆರಂಭಿಸಿ, ಕಥೆ ಕೇಳುವ ಅಭಿರುಚಿ ಬೆಳೆಸಿ ಮಕ್ಕಳಲ್ಲಿ ಸಚ್ಚಾರಿತ್ಯವನ್ನು ರೂಢಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿದೆ. ಮಕ್ಕಳಲ್ಲಿ ಆಲಿಸುವ ಸಾಮರ್ಥ್ಯ, ಪ್ರಶ್ನಿಸುವ ಮನೋಭಾವ, ಕುತೂಹಲ, ಹಾಸ್ಯ ಪ್ರವೃತ್ತಿ, ಕಲ್ಪನಾಶಕ್ತಿ ವೃದ್ಧಿ, ಸಾರ್ವಕಾಲಿಕ ಮೌಲ್ಯಗಳ ಪರಿಚಯ, ವ್ಯಕ್ತಿತ್ವ ವಿಕಸನ, ದೇಶಪ್ರೇಮ, ಭಾಷಾ ಬೆಳವಣಿಗೆ, ಏಕಾಗ್ರತೆ ಮೊದಲಾದ ಗುಣಗಳನ್ನು ಮೈಗೂಡಿಸುವುದು ಇದರ ಮೂಲ ಉದ್ದೇಶ.
ಪ್ರತಿ ವಾರ ಕಥೆ ಕೇಳಲು ನಗರದ ವಿವಿಧ ಬಡಾವಣೆಗಳಿಂದ 4ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ. ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ಸಾಮಾಜಿಕ, ಶೌರ್ಯ, ಹಾಸ್ಯ ಪ್ರಧಾನ ಕಥೆಗಳನ್ನು ಹೇಳಿಸಲಾಗುತ್ತದೆ. ಸಾಹಿತಿಗಳು, ವಿಜ್ಞಾನಿಗಳು, ಶಿಕ್ಷಕರು, ವಕೀಲರು, ಕಲಾವಿದರು, ಅಧಿಕಾರಿಗಳು, ಗೃಹಿಣಿಯರು… ಹೀಗೆ ಅನೇಕರು ಪ್ರತಿವಾರ ಬಂದು ಮಕ್ಕಳಿಗೆ ಒಂದು ಗಂಟೆ ಕಾಲ ಕಥೆಗಳನ್ನು ಹೇಳುತ್ತಾರೆ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಮೂಲ ಪರಿಕಲ್ಪನೆ ಸುಮನಾ ಹಾಗೂ ಶಶಿಧರ ಡೋಂಗೆ ಅವರದು. ದಿವಂಗತ ಡಾ.ಎಚ್.ಕೆ.ರಾಮನಾಥ ಅವರು ಕಾರ್ಯಕ್ರಮದ ಮುಖ್ಯ ಸಂಚಾಲಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಸದ್ಯ ಮುಖ್ಯ ಸಂಚಾಲಕರಾದ ಕೆ.ನಾಗರಾಜ, ಬಿ.ಬಾಲಕೃಷ್ಣಯ್ಯ ಅವರು ಪ್ರೊ.ಸಿಂಧುವಳ್ಳಿ ಅನಂತಮೂರ್ತಿ ಅವರ ಪತ್ನಿ ವಿಜಯಾ ಸಿಂಧುವಳ್ಳಿ ಅವರ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಸಾಂಸ್ಕೃತಿಕ ಚಟುವಟಿಕೆ ಕೇಂದ್ರ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರುಚಿ ರಂಗಮನೆ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಹೊಸತನ ಹಾಗೂ ವೈವಿಧ್ಯಗಳಿಗೆ ಸದಾ ತೆರೆದುಕೊಳ್ಳುತ್ತ ಪ್ರಯೋಗಶೀಲತೆಗೆ ಮುಂದಾಗಿರುವ ಕಲಾಸುರುಚಿ, ರಂಗಭೂಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅಲ್ಲದೆ ಸಾಹಿತ್ಯ ಚಾವಡಿ, ನಾಟಕಗಳ ಪ್ರದರ್ಶನ, ರಂಗಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ನಿರಂತರ ವಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡಿನ ಹೆಮ್ಮೆರು ಹವ್ಯಾಸಿ ಸಂಸ್ಥೆಯಾಗಿದೆ
ಕಥೆ ಕೇಳೋಣ ಬನ್ನಿ’ಗೆ ಇಂದು 843ನೇ ಕಂತಿನ ಸಂಭ್ರಮ: ಮೈಸೂರಿನ ಕಲಾಸುರುಚಿ ಸಂಸ್ಥೆ ಮಕ್ಕಳಿಗಾಗಿ ಪ್ರತಿ ಶನಿವಾರ ಆರೋಜಿಸುವ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮಕ್ಕೆ ಇದೀಗ 843ನೇ ಕಂತಿನ ಸಂಭ್ರಮ. ಮಕ್ಕಳಿಗೆ ನೀತಿಕತೆಗಳ ಮೂಲಕ ಸಂಸ್ಕೃತಿ ಪರಿಚಯಿಸಿ ಗುರು-ಹಿರಿಯರ ಬಗ್ಗೆ ಗೌರವ, ದೇಶಪ್ರೇಮ, ಆತ್ಮವಿಶ್ವಾಸದ ಸದ್ಗುಣಗಳನ್ನು ಮೈಗೂಡಿಸುವ ಉದ್ದೇಶದಿಂದ ಆರಂಭವಾದ ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ಆ.31 ರಂದು 843ನೇ ಕಂತುಗಳನ್ನು ಪೂರೈಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಕುವೆಂಪುನಗರದ ಸಂಸ್ಥೆಯಲ್ಲಿ ಅಂದು ಸಂಜೆ 4.30ರಿಂದ 5.30ರವರೆಗೆ ಹವ್ಯಾಸಿ ಬರಹಗಾರ್ತಿ ಮಾಲತಿ ಹೆಗಡೆ ಅವರು ಮಕ್ಕಳಿಗೆ ಕಥೆ ಹೇಳಲಿದ್ದಾರೆ.
20-30 ಮಕ್ಕಳು ಭಾಗಿ: ಪ್ರತಿ ಶನಿವಾರ ಸಂಜೆ 4.30ರಿಂದ 5.30 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮನರಂಜನೆ ಮೂಲಕ ನೀತಿ ಬೋಧಿಸಲಾಗುತ್ತದೆ. ಪ್ರವೇಶ ಉಚಿತವಾಗಿರುತ್ತದೆ. 6ರಿಂದ 15 ವರ್ಷದವರೆಗಿನವರು ಪಾಲ್ಗೊಳ್ಳಲು ಅವಕಾಶ ಇದೆ. ಪ್ರತಿ ವಾರ 20-30 ಮಕ್ಕಳು ಕಥೆ ಕೇಳಲು ಬರುತ್ತಾರೆ.
ಲಿಮಾ ಬುಕ್ ಆಫ್ ರೆಕಾರ್ಡ್ಸ್: 2007ರ ಫೆಬ್ರವರಿ 3ರಂದು ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮ 2016ನೇ ಸಾಲಿನಲ್ಲಿ 483 ಕಂತುಗಳನ್ನು ಪೂರೈಸಿದಾಗಲೇ ‘ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವುದು ವಿಶೇಷ. ರಂಗಭೂಮಿ ಕಲಾವಿದರಾದ ಭಾರ್ಗವಿ ನಾರಾರುಣ್ ಅವರಿಂದ ಚಾಲನೆಗೊಂಡ ಈ ಯಾನ ನಿರಂತರವಾಗಿ ಮುಂದುವರಿದಿದೆ
ಮಾಹಿತಿಗಾಗಿ ನಂ.476, ಸುರುಚಿ ರಂಗಮನೆ, ಚಿತ್ರಭಾನು ರಸ್ತೆ, ಕುವೆಂಪುನಗರ, ಮೈಸೂರು. – 570023 ಅಥವಾ ಮೊ.ಸಂ 9243581097, 9945943115 ಅನ್ನು ಸಂಪರ್ಕಿಸಬಹುದು.
ಕೋಟ್ಸ್))
ಕಥೆ ಕೇಳೋಣ ಬನ್ನಿ ಕಲಾ ಸುರುಚಿಯ ಒಂದು ವಿನೂತನ ಕಾರ್ಯಕ್ರಮವಾ ಗಿದ್ದು, ಆ.3ರಂದು 839ನೇ ಕಂತು ಪೂರೈಸಲಿದೆ. ಪ್ರತಿವಾರ 20-30 ಮಕ್ಕಳು ಕಥೆ ಕೇಳಲು ಬರುತ್ತಾರೆ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮವನ್ನು ‘ಯೂಟ್ಯೂಬ್’ ಚಾನಲ್ ನಲ್ಲಿಯೂ ನೇರಪ್ರಸಾರ ಮಾಡಲಾಗುತ್ತದೆ. ಜತೆಗೆ, ಈ ಹಿಂದಿನ ಸಂಚಿಕೆಗಳೂ ಯೂಟ್ಯೂಬ್ ನಲ್ಲಿ ಲಭ್ಯ
-ಕೆ.ನಾಗರಾಜ, ಮುಖ್ಯ ಸಂಚಾಲಕ, ಕಥೆ ಕೇಳೋಣ ಬನ್ನಿ ಕಾರ್ಯಕ್ರಮ