Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎಲ್ಲರ ಪಕ್ಕ ಕೂರುವ ಸಮಾನ ಹಕ್ಕು ನಮಗೆ ಬೇಕು

‘ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ

ಜಿ.ತಂಗಂ ಗೋಪಿನಾಥಂ
ಮಂಡ್ಯ: ನಮಗೆ ಅಯ್ಯೋ ಪಾಪ ಎಂಬ ಕರುಣೆ ಬೇಕಿಲ್ಲ. ಎಲ್ಲರ ಪಕ್ಕದಲ್ಲಿ ಕೂರುವ ಸಮಾನ ಹಕ್ಕು ನಮ್ಮ ಸಮುದಾಯಕ್ಕೆ ಬೇಕಿದೆ..

ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆಯಲ್ಲಿ ನಡೆದ ಪುನಶ್ವೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಗಾರ್ತಿ ಅಕೈ ಪದ್ಮಶಾಲಿ ಅವರ ಮಾತುಗಳಿವು.

‘ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಾಹಿತ್ಯ’ ವಿಷಯ ಕುರಿತು ಮಾತನಾಡಿದ ಅಕ್ಕೆ ಪದ್ಮಶಾಲಿ, ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕ ಲಿಂಗವೆಂದು ವಿಭಜಿಸಲಾಗಿದೆ. ಇದು ಅಸಮಂಜಸ ನಮ್ಮನ್ನು ಮೂರನೇ ಲಿಂಗಕ್ಕೆ ಸೇರಿಸುತ್ತಾರೆ. ನಾವು ಜಡವಲ್ಲ, ಜೀವವಿದೆ. ಯಾಕೆ ನಮ್ಮನ್ನು ಗೊಡ್ಡು ಧರ್ಮದ ಶಾಸ್ತ್ರಗಳಿಂದ ಬೇರೆ ಮಾಡುವಿರಿ, ನಾವು ಕೆಂಪು ರಕ್ತದ ಮಾನವರಲ್ಲವೇ ಎಂದು ಪ್ರಶ್ನಿಸಿದರು.

ಯೋನಿ, ಗರ್ಭವೇ ಇಲ್ಲದ ಹೆಣ್ಣು ನಾನೆಂದು ಹೇಳಲು ಧ್ವನಿಯೇ ಇಲ್ಲದೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಒದ್ದಾಡುತ್ತಿದೆ. ಲಿಂಗತ್ವ ಮಡಿವಂತಿಕೆ ಯನ್ನು ಒಡೆದುಹಾಕಬೇಕೆಂಬ ವಿಚಾರಗಳನ್ನು ಎಲ್ಲಿಯವರೆಗೂ ಪದೇಪದೇ ಹೇಳುವುದನ್ನು ಅಭ್ಯಾಸ ಮಾಡುವುದಿಲ್ಲವೋ ಅಲ್ಲಿವರೆಗೂ ಯಾವುದೂ ಬದಲಾಗುವುದಿಲ್ಲ. ನಮ್ಮನ್ನು ಆರ್ಥಿಕ ವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಶಕ್ತಗೊಳಿಸಲು ಕೆಲಸ ಮಾಡಬೇಕಿದೆ ಎಂದರು.

ವಿಶ್ವದಲ್ಲಿ 25ಕ್ಕೂ ಹೆಚ್ಚು ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಪುರುಷರು ಅವರ ಜೀವನ ಚರಿತ್ರೆ ಬರೆದಿದ್ದಾರೆ. ಹರಿ-ಹರರ ಪುತ್ರ ಅಯ್ಯಪ್ಪ, ಅರ್ಧನಾರೀಶ್ವರ ನಿಗೆ ನಮಸ್ಕಾರ ಮಾಡುತ್ತಾರೆ. ನಮ್ಮನ್ನು ಮಾತ್ರ ಬಹಿಷ್ಕರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡದ ಆತ್ಮಕಥನಗಳು ಬೇರೆ ಭಾಷೆಗೆ ಅನುವಾದವಾಗಲಿ: ಡಾ.ಅರುಣ್ ಜೋಳದ ಕೂಡ್ಲಿಗಿ ಅವರು ಆತ್ಮ ಕಥನಗಳು’ ವಿಷಯ ಕುರಿತು ಮಾತನಾಡಿ, ಬೇರೆ ಭಾಷೆ ಆತ್ಮ ಕಥನಗಳು ಕನ್ನಡಕ್ಕೆ ಹೆಚ್ಚು ಬಂದಿದೆ. ಆದರೆ, ಕನ್ನಡದ ಆತ್ಮಕಥನಗಳು ಬೇರೆ ಭಾಷೆಗೆ ಅನುವಾದವಾಗಿರುವುದು ಕಡಿಮೆ. ಇದನ್ನು ನೋಡಿದರೆ ಕನ್ನಡದ ಅನುಭವಲೋಕ ಕನ್ನಡಕ್ಕೆ ಮಾತ್ರ ಸಿಮೀತವಾಗಿದೆಯಾ? ಎಂಬ ಪ್ರಶ್ನೆ
ಮೂಡುತ್ತದೆ ಎಂದರು.

ಇತ್ತೀಚಿನ ಆತ್ಮಕಥನಗಳು ಪಲ್ಲಟವನ್ನು ಉಂಟು ಮಾಡುತ್ತಿಲ್ಲ. ಐಎಎಸ್ ಅಧಿಕಾರಿಗಳು ಕೂಡ ಇಂದು ಆತ್ಮಕಥೆಗಳನ್ನು ಬರೆಯಲು ಪ್ರಾರಂಭ ಮಾಡಿದ್ದಾರೆ ಎಂದರು.

ಕನ್ನಡದಲ್ಲಿ ದಲಿತ ಮಹಿಳೆಯ ಆತ್ಮಕಥೆಗಳು ದಲಿತ ಇನ್ನೂ ಹೊರಬಂದಿಲ್ಲ. ಹೀಗಾಗಿ, ಮಹಿಳೆಯರು ಆತ್ಮ ಕಥನಗಳನ್ನು ಹೊರತರಬೇಕು ಎಂದರು. ‘ಪ್ರಬಂಧ ಸಾಹಿತ್ಯ’ ಕುರಿತು ಲೇಖಕ ಚ.ಹ. ರಘುನಾಥ, ‘ವಿಜ್ಞಾನ ಸಾಹಿತ್ಯ ಕುರಿತು ಡಾ.ಬಿ.ಎಸ್.ಶೈಲಜಾ ವಿಚಾರ ಮಂಡಿಸಿದರು.

ಅಕ್ಕ+ಅಯ್ಯ-ಅಕ್ಕಯ್ಯ; ಇದು ನನ್ನ ಹೆಸರಿನ ಅರ್ಥ…
ಮಂಡ್ಯ: ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಫುಲೆ ಅವರನ್ನು ‘ಅಕ್ಕ’ ಎನ್ನುತ್ತೇವೆ. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರನ್ನು ‘ಅಯ್ಯ’ ಎನ್ನುತ್ತೇವೆ. ಅಕ್ಕ+ಅಯ್ಯ-ಅಕ್ಕಯ್ಯ, ಇದು ನನ್ನ ಹೆಸರಿನ ಅರ್ಥ. ಆದರೆ, ಈ ಗೋಷ್ಠಿಯ ಡಿಜಿಟಲ್ ಪರದೆ ಮೇಲೆ ಅಕ್ಸ್ ಪದ್ಮಶಾಲಿ ಎಂದು ತೋರಿಸಲಾಗಿದೆ ಎಂದು ಅಕೈ ಪದ್ಮಶಾಲಿ ಆಕ್ಷೇಪ ವ್ಯಕ್ತಪಡಿಸಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ಗೋಷ್ಠಿ ಆಯೋಜಿಸಿ

ಮಂಡ್ಯ: ಲಿಂಗತ್ವ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಮಾತನಾಡಿ, ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ಗೋಷ್ಠಿ ಆಯೋಜಿಸಬೇಕು. ನನ್ನನ್ನು ಅದರ ಅಧ್ಯಕ್ಷೆಯನ್ನಾಗಿ ಮಾಡಬೇಕು. ನಮ್ಮ ಸಮುದಾಯದವರನ್ನು ಸಮ್ಮೇಳನ ಒಳಗೊಳ್ಳಬೇಕು. ನಮ್ಮ ದನಿಯನ್ನು ಎಲ್ಲರೂ ಆಲಿಸಬೇಕು ಎಂದು ಆಗ್ರಹಿಸಿದರು.
ಸಮ್ಮೇಳನದಲ್ಲಿ ನಾಮಕಾವಸ್ತೆಗೆ ಲಿಂಗತ್ವ ಅಲ್ಪಸಂಖ್ಯಾತರ ಪ್ರಾತಿನಿಧ್ಯ ನೀಡುವುದನ್ನು ನಾವು ಬಿಲ್‌ ಕುಲ್ ಒಪ್ಪುವುದಿಲ್ಲ. ಹೀಗಾಗಿ ಮುಂದಿನ 88ನೇ ಸಮ್ಮೇಳನದಲ್ಲಿ ನಮ್ಮ ಸಮುದಾಯಕ್ಕೆ ವಿಶೇಷ ಗೋಷ್ಠಿ ಏರ್ಪಡಿಸಬೇಕು ಎಂದರು.

 

‘1986ರಲ್ಲಿ ಮೈಸೂರಿನಲ್ಲಿ ಲೇಖಕಿಯರ ಸಂಘದವರು 25 ಮಹಿಳೆಯರ ಆತಕಥನವನ್ನು ಅಕ್ಷರ ಸಲು ಸಭೆ ಏರ್ಪಡಿಸಿದ್ದರು. ಅಂದು ನಾನು ಮಾತನಾಡಲು ಆಗಲೇ ಇಲ್ಲ. ಲೇಖಾಲೋಕ ಸಂಕಲನದಲ್ಲಿ ನನ್ನ ಕಥನ ಪ್ರಕಟವಾಗಲೇ ಇಲ್ಲ. ಅಂದು ಅಕ್ಷರಶಃ ಕಕ್ತಾಬಿಕ್ಕಿಯಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಅಂತರಂಗವನ್ನು ಬಹಿರಂಗಗೊಳಿಸುವುದು ಕಷ್ಟ. -ಬಾನು ಮುಸ್ತಾಕ್, ಲೇಖಕಿ

Tags: